ADVERTISEMENT

ದಕ್ಷಿಣ ಕನ್ನಡ: ಕೋವಿಡ್‌ ಗುಮ್ಮ–ಚಿಣ್ಣರ ರಕ್ಷಕರು ಸಜ್ಜು

ದ.ಕ. ಜಿಲ್ಲೆ: ಎರಡನೇ ಅಲೆ ತಗ್ಗದ ತಲ್ಲಣ, ಮೂರನೇ ಅಲೆ ತಡೆಗೆ ಸಮರ ಸಿದ್ಧತೆ

ವಿಷ್ಣು ಭಾರದ್ವಾಜ್
Published 16 ಆಗಸ್ಟ್ 2021, 4:03 IST
Last Updated 16 ಆಗಸ್ಟ್ 2021, 4:03 IST
ಮಕ್ಕಳಿಗೂ ಇರಲಿ ಮಾಸ್ಕ್‌ –ಸಾಂದರ್ಭಿಕ ಚಿತ್ರ
ಮಕ್ಕಳಿಗೂ ಇರಲಿ ಮಾಸ್ಕ್‌ –ಸಾಂದರ್ಭಿಕ ಚಿತ್ರ   

ಮಂಗಳೂರು: ಆಸ್ಪತ್ರೆಗಳ ನಗರಿ (ಮೆಡಿಕೊ ಸಿಟಿ) ಮಂಗಳೂರು, ಕೋವಿಡ್‌ 2ನೇ ಅಲೆಗೆ ತಲ್ಲಣಿಸಿದೆ. ಎಲ್ಲ ಚಿಕಿತ್ಸಾ ಸೌಲಭ್ಯಗಳು ಇದ್ದರೂ ಏರುತ್ತಿ ರುವ ಸೋಂಕಿನ ಪ್ರಮಾಣ ವಾರಾಂತ್ಯ ಕರ್ಫ್ಯೂ ಹೇರುವಂತೆ ಮಾಡಿದೆ. ಗಡಿ ರಸ್ತೆ ಸಂಚಾರವನ್ನು ವಾರಗಟ್ಟಲೆ ನಿರ್ಬಂಧಿಸುತ್ತಿದೆ. ಹೀಗಾಗಿ, ಚಿಣ್ಣರನ್ನು ಗುಮ್ಮನಂತೆ ಬೆದರಿಸಲಿರುವ, ಹಿರಿಯ ರನ್ನು ಬೇತಾಳನಂತೆ ಕಾಡಲಿರುವ 3ನೇ ಅಲೆ ತಗ್ಗಿಸಲು ಇಲ್ಲಿ ‘ಯುದ್ಧೋಪಾದಿ ಸಿದ್ಧತೆ’ ನಡೆದಿದೆ.

ಮಕ್ಕಳನ್ನು ಕಾಡಲಿದೆ ಎನ್ನಲಾಗಿರುವ ಸಂಭಾವ್ಯ ರೂಪಾಂತರಿತ ಕೊರೊನಾ ವೈರಸ್‌ ಸೋಂಕಿನ ಕೋವಿಡ್‌ 3ನೇ ಅಲೆಯನ್ನು ಎದುರಿಸಲು ವೈದ್ಯಕೀಯ ಬಾಹ್ಯ ಸಲಕರಣೆಗಳು, ಔಷಧಿಗಳು, ಪೋಷಕಾಂಶಯುಕ್ತ ಆಹಾರ ಕ್ರಮಗಳು, ತಜ್ಞರು, ಚಿಕಿತ್ಸಕರು, ಶುಶ್ರೂಷಕರು, ಪೋಷಕರು, ಜನಪ್ರತಿ ನಿಧಿಗಳು, ಆರೋಗ್ಯ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿ, ಇತರ ಸೇನಾನಿಗಳು (ವಾರಿಯರ್ಸ್‌) ಜಿಲ್ಲೆಯಲ್ಲಿ ಸಿದ್ಧರಾಗಿದ್ದಾರೆ.

ಮಕ್ಕಳ ಚಿಕಿತ್ಸೆಗಾಗಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಸೌಲಭ್ಯ ಹಂಚಿಕೆ, ತೀವ್ರ ನಿಗಾ ಘಟಕಗಳು (ಐಸಿಯ), ಆಮ್ಲಜನಕ ಸಂಪರ್ಕಿತ ಹಾಸಿಗೆಗಳು, ಸಲಕರಣೆಗಳು, ಪೂರ್ವಭಾವಿಯಾಗಿ ಮಕ್ಕಳ ರೋಗ ಸಮೀಕ್ಷೆ, ಪೌಷ್ಟಿಕ ಆಹಾರ ಪೂರೈಕೆ, ಅಮ್ಮಂದಿರ ಕಾಳಜಿ, ಮಕ್ಕಳಿಗೆ ಕೋವಿಡ್‌ ಬಾಧಿಸಿದರೆ ಪೋಷಕರೂ ಇರಬೇಕಾಗಿರುವುದರಿಂದ ಹೆಚ್ಚುವರಿ ಸೌಲಭ್ಯ... ಹೀಗೆ, ಒಂದು ಮತ್ತು ಎರಡನೇ ಕೋವಿಡ್‌ ಅಲೆಯ ಹೊಡೆತದ ಅನುಭವ ಇಲ್ಲಿ ಈಗಲೇ ಕ್ರಿಯಾಶೀಲರಾಗುವಂತೆ ಮಾಡಿದೆ. ಇದರೊಂದಿಗೆ, ಮಕ್ಕಳ ಪ್ರತಿರೋಧ ಶಕ್ತಿ ವೃದ್ಧಿಸುವಂತೆ ಮಾಡುವ ಕೋವಿಡ್‌ ಪ್ರತಿರೋಧಕ ಲಸಿಕೆ ದೇಶದಲ್ಲೇ ಇನ್ನೂ ಲಭ್ಯವಾಗಿಲ್ಲ (ಪ್ರಯೋಗ ಹಂತದಲ್ಲಿದೆ) ಎಂಬುವುದು, ಮಕ್ಕಳನ್ನು ರಕ್ಷಿಸುವ ಸಿದ್ಧತೆಯನ್ನು ಹೆಚ್ಚಿಸುವತ್ತ ರಾಜ್ಯದ ಸರ್ಕಾರ, ಜಿಲ್ಲಾಡಳಿತ ಗಮನಹರಿಸುವಂತೆ ಮಾಡಿದೆ.

ADVERTISEMENT

ಅಧಿಕಾರ ವಹಿಸಿಕೊಂಡ ದಿನಗಳ ಅಂತರದಲ್ಲೇ ಜಿಲ್ಲೆಗೆ ದೌಡಾಯಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ‘ಆದ್ಯತೆಯ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ವನ್ನು ಸೇರಿಸುತ್ತೇವೆ, ಏನು ಬೇಕೊ ಅದು ಮಾಡಿ, ಸರ್ಕಾರ ಎಲ್ಲವನ್ನೂ ಕೊಡಲಿದೆ. ತುರ್ತು ಸಲಕರಣೆಗಳನ್ನು ಸ್ಥಳೀಯವಾಗಿ ಖರೀದಿಸಿ’ ಎಂದು ಹೇಳಿ ಬೆಂಬಲ ನೀಡಿದ್ದಾರೆ.

ಗಡಿ ರಸ್ತೆ ಸಂಚಾರ ನಿರ್ಬಂಧ ಬಿಗಿಗೊಳಿಸಲು ಮುಖ್ಯಮಂತ್ರಿ ತಿಳಿಸಿದ ಬೆನ್ನಲ್ಲೇ ಜಿಲ್ಲೆಯ ಜನರಲ್ಲಿ ಕೋವಿಡ್‌ ಮೂರನೇ ಅಲೆ ನಿಯಂತ್ರಣ ಸಿದ್ಧತೆ ವೇಗಪಡೆದಿದೆ. ಈ ಮಧ್ಯೆ, ‘ಎರಡು ಲಸಿಕೆ ಹೊಂದಿದವರ ಸಂಚಾರಕ್ಕೆ ನಿರ್ಬಂಧ ವಿಧಿಸಬೇಡಿ’ ಎಂಬುದಾಗಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಪತ್ರ ಬರೆದಿದೆ. ಇದರಿಂದಾಗಿ ಜಿಲ್ಲಾಡಳಿತ ಮತ್ತೆ ರಾಜ್ಯ ಸರ್ಕಾರದ ಸೂಚನೆಗಾಗಿ ಕಾಯುವಂತೆ ಆಗಿದೆ. ಕೇರಳ ರಾಜ್ಯವೂ ತನ್ನ ಹೈಕೋರ್ಟ್‌ ಮೂಲಕ ನಿರ್ಬಂಧ ಸಡಿಲಿಕೆಗೆ ಕಾನೂನು ಮಾರ್ಗದಲ್ಲಿ ಪ್ರಯತ್ನ ನಡೆಸುತ್ತಿದೆ.

ಮಕ್ಕಳ ಆರೋಗ್ಯ ಸಮಸ್ಯೆ ದಾಖಲಾತಿ, ಚಿಕಿತ್ಸೆಗಾಗಿ ನೆರೆಯ ಉಡುಪಿ ಜಿಲ್ಲೆಯಲ್ಲಿ ನಡೆಸಿದಂತೆ ‘ವಾತ್ಸಲ್ಯ’ ಸಮೀಕ್ಷೆ ಇಲ್ಲಿಗೂ ತ್ವರಿತ ವಿಸ್ತರಿಸುವುದು, ಆರೋಗ್ಯ ಶಿಬಿರಗಳ ಮೂಲಕ ಮಕ್ಕಳ ಇತರ ಕಾಯಿಲೆಗಳನ್ನು ಗುರುತಿಸುವುದು, ಪೌಷ್ಟಿಕತೆ ಸಮೀಕ್ಷೆ ಇನ್ನೊಂದೆರಡು ವಾರಗಳಲ್ಲಿ ನಡೆಯಲಿದೆ ಎಂಬುದು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ನೀಡುವ ಸದ್ಯದ ಮಾಹಿತಿ.

‘ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ವಚ್ಛ, ಸುಸಜ್ಜಿತಗೊಳಿಸಿ, ಸೌಲಭ್ಯ, ವೈದ್ಯರ ತಂಡದೊಂದಿಗೆ ಸಜ್ಜುಗೊಳಿಸಿ ತೀವ್ರ ಸ್ವರೂಪದ ಸೋಂಕಿತರಿಗೆ ಅಲ್ಲೇ ಚಿಕಿತ್ಸೆ ನೀಡಬೇಕು. ಕೋವಿಡ್ ಬಾಧಿತ ಎಲ್ಲರನ್ನೂ ಹೋಂ ಐಸೋಲೇಷನ್ ಚಿಕಿತ್ಸೆಯಲ್ಲಿ ಇರಿಸಿದರೆ ಸೋಂಕು ಪ್ರಸರಣ ಹೆಚ್ಚಬಹುದು. ಅವರನ್ನು ವೈದ್ಯವಿಜ್ಞಾನ ಪರಿಧಿಯಲ್ಲಿ ವಿಶ್ಲೇಷಿಸಿ ಕೋವಿಡ್ ಅರೈಕೆ ಕೇಂದ್ರ ಅಥವಾ ಹೋಂ ಐಸೊಲೇಷನ್‌ ಶುಶ್ರೂಷೆಗೆ ವೈದ್ಯರು ಶಿಫಾರಸು ಮಾಡಬೇಕು ಎಂಬುದು ಸರ್ಕಾರದ ಈಗಿನ ನಿಲುವು. ಅದರಂತೆ ಹೊಸ ವಿಧಾನ ಅಳವಡಿಸಿದ್ದೇವೆ. ಸೋಂಕಿತರು ಎಲ್ಲೆಂದರಲ್ಲಿ ಅಡ್ಡಾಡಿದರೆ ಕಾನೂನು ಕ್ರಮ ಜರುಗಿಸುತ್ತೇವೆ. ಎಲ್ಲರನ್ನೂ ಸೇರಿಸಿ ಸಂಘಟಿತ, ಇಲಾಖೆಗಳ ನಡುವಿನ ಸಮನ್ವಯದ ಕಾರ್ಯ ನಿರ್ವಹಣೆಯೊಂದಿಗೆ ಮೂರನೇ ಅಲೆಯನ್ನು ಹಿಮ್ಮೆಟ್ಟಿಸಲು ಸಜ್ಜಾಗಿದ್ದೇವೆ’ ಇದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಭರವಸೆಯ ಮಾತು.

ಮಕ್ಕಳ ಐಸಿಯು, ಹಾಸಿಗೆ ಸಿದ್ಧ

ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಔಷಧಿ ವಿಭಾಗದಲ್ಲಿ ನೂತನ ತೀವ್ರ ನಿಗಾ ಘಟಕ (ಐಸಿಯು) ಚಾಲನೆಗೊಂಡಿದೆ. ವೆಂಟಿಲೇಟರ್, ಮಾನಿಟರ್ ಹಾಗೂ ಮಕ್ಕಳ ತಜ್ಞರು, ವೈದ್ಯಕೀಯ ಉಪಕರಣಗಳಿಂದ ಸಜ್ಜಾಗಿದ್ದು, ಸಂಭಾವ್ಯ ಕೋವಿಡ್‌ ಬಾಧಿತ ಮಕ್ಕಳಿಗೆ ಇಲ್ಲಿ 32 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಇಲ್ಲಿರುವ ವೆಂಟಿಲೇಟರ್‌ಗಳನ್ನು ಆಬಾಲವೃದ್ಧರಿಗೆ ಬಳಕೆಗೆ ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಮಕ್ಕಳ ತಜ್ಞರು (ಪಿಡಿಯಾಟ್ರಿಷಿಯನ್‌) 176ಕ್ಕೂ ಅಧಿಕ ಸಂಖ್ಯೆಯಲ್ಲಿ ಲಭ್ಯರಿದ್ದಾರೆ. ಹೊಸ ನೇಮಕಾತಿಯೂ ಆಗಿದೆ. ಜಿಲ್ಲಾಸ್ಪತ್ರೆಯ ಮಕ್ಕಳ ಘಟಕದಲ್ಲಿ ಒಟ್ಟು 130 ಹಾಸಿಗೆಗಳು ಲಭ್ಯವಿವೆ. ವೈದ್ಯಕೀಯ ಆಮ್ಲಜನಕ ಲಭ್ಯತೆ ಹೆಚ್ಚಿದೆ. ಸ್ಥಾವರ ನಿರ್ಮಾಣ, ಉತ್ಪಾದನೆ ಏರಿಕೆ ಗುರಿಮುಟ್ಟಿದೆ.

ಜಿಲ್ಲೆಯಲ್ಲಿ 8 ವೈದ್ಯರು, 77 ನರ್ಸ್‍ಗಳು, 89 ಲ್ಯಾಬ್ ಟೆಕ್ನಿಷಿಯನ್, 7 ಗ್ರೂಪ್-ಡಿ ನೌಕರರು, 51 ಡಿ.ಇ.ಒ. ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 90 ವಾಹನಗಳು, 40 ಆರೋಗ್ಯ ಮಿತ್ರ ಸಿಬ್ಬಂದಿ, ದುರಂತ ಪರಿಹಾರ ರಾಜ್ಯ ನಿಧಿ (ಎಸ್.ಡಿ.ಆರ್.ಎಫ್) ಅನುದಾನದಲ್ಲಿ ಒದಗಿಸಲಾಗಿದೆ. ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 6,529 ಹಾಸಿಗೆಗಳು ಲಭ್ಯವಿವೆ. 587 ಹಾಸಿಗೆಗಳು ಸೋಂಕಿತರಿಗೆ ಬಳಕೆಯಲ್ಲಿವೆ. 12 ಕೆ.ಎಲ್. ಕ್ರಯೋಜೆನಿಕ್ ಆಮ್ಲಜನಕ ಟ್ಯಾಂಕ್, 9 ಆಮ್ಲಜನಕ ಉತ್ಪಾದನಾ ಘಟಕಗಳು, 263 ಸಾಂದ್ರಕಗಳು, 3360 ಆಮ್ಲಜನಕ ಸಿಲಿಂಡರ್‌ಗಳು ಸಜ್ಜಾಗಿವೆ.

ಲಸಿಕೆ, ಜಿಲ್ಲೆಗೆ ಆದ್ಯತೆ

ಜಿಲ್ಲೆಯಲ್ಲಿ ಲಸಿಕಾ ಅಭಿಯಾನ ಆರಂಭಿಸಿ ಐದು ತಿಂಗಳು ಕಳೆದಿದೆ. ಈ ಹಂತದಲ್ಲಿ, ಅರ್ಧಾಂಶ ಫಲಾನುಭವಿಗಳಿಗಷ್ಟೇ ಲಸಿಕೆ ಒಂದು ಅಥವಾ ಎರಡನೇ ಡೋಸ್‌ ಲಸಿಕೆ ಲಭಿಸಿದೆ. ಮೊದಲ ಡೋಸ್‌ ಲಸಿಕೆ ಶೇ 53.69 ಫಲಾನುಭವಿಗಳಿಗೆ (95,4442 ಮಂದಿಗೆ) ಹಾಗೂ 2ನೇ ಡೋಸ್‌ ಶೇ 31.70ರಷ್ಟು(30,2549 ಮಂದಿಗೆ) ಫಲಾನುಭವಿಗಳಿಗಷ್ಟೇ ಲಭಿಸಿದೆ.

ಕೋವಿಡ್‌ ಪ್ರಮಾಣ ಹೆಚ್ಚಿರುವ ಕೇರಳದೊಂದಿಗೆ ನಿಕಟವಾಗಿರುವ ಪ್ರದೇಶಗಳ 2.47 ಲಕ್ಷ ನಿವಾಸಿಗಳಿಗೆ ಆದ್ಯತಾ ಪಟ್ಟಿಯಲ್ಲಿ ಲಸಿಕೆ ನೀಡಲಿದೆ. ಮುಂದಿನ ತಿಂಗಳಿನಿಂದ ರಾಜ್ಯಕ್ಕೆ ಸಿಗಲಿರುವ 1.50 ಡೋಸ್ ಲಸಿಕೆ ಕೋಟದಲ್ಲಿ ಜಿಲ್ಲೆಗೆ ಆದ್ಯತೆ ಮೇರೆಗೆ ಹೆಚ್ಚುಪಾಲು ಸಿಗಲಿದೆ. ಕೋವಿಡ್‌ ತಡೆ 2ನೇ ಡೋಸ್‌ ಲಸಿಕೆಗಾಗಿ ಕಾಯುತ್ತಿರುವ 38,901 ಜನರಿಗೆ ಲಸಿಕೆ ಸಿಗಲಿದೆ. ಹೊಸ ಆದ್ಯತಾ ವಿಭಾಗಗಳ ಜನರು, ಮಹಿಳೆಯರು, ತಾಯಂದಿರು, ವಿದ್ಯಾರ್ಥಿಗಳು, ಯುವಜನರು ಹೀಗೆ ಪಟ್ಟಿ ಬೆಳೆದರೂ ಜಿಲ್ಲೆಯಲ್ಲಿ ಲಸಿಕೆ ಲಭ್ಯತೆಗೆ ಸಮಸ್ಯೆ ಇರಲಾರದು ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ. ಇದು ಕಾರ್ಯರೂಪಕ್ಕಿಳಿದರಷ್ಟೇ ಜನರಿಗೆ ಸಮಾಧಾನ.

‘ಶಾಲಾ ಗಂಟೆ ಈಗ ಬಾರಿಸದು’

ರಾಜ್ಯದಲ್ಲಿ ಶೀಘ್ರದಲ್ಲೇ ಪ್ರೌಢ (ಮಾಧ್ಯಮಿಕ) ಶಾಲೆ, ಬಳಿಕ ಕೆಳಹಂತದ ಶಾಲೆಗಳನ್ನು ಮುಂದಿನ ವಾರದಿಂದ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಹಾಗೆಂದು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಿತಿ ಇದಕ್ಕೆ ಪೂರಕವಾಗಿಲ್ಲ ಎಂಬುದು ಜಿಲ್ಲಾಡಳಿತದ ಅಭಿಮತ. ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆಯಿಂದಾಗಿ ಸೋಂಕಿತರ ಪ್ರಮಾಣ ಇನ್ನೂ ಶೇ 4– 5ರ ಮಧ್ಯದಲ್ಲೇ ಹೊಯ್ದಾಡುತ್ತಿರುವುದು, ಮೂರನೇ ಅಲೆ ಮಕ್ಕಳತ್ತ ಕಣ್ಣು ನೆಟ್ಟಿರುವುದರಿಂದ ಇಲ್ಲಿನ ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳ ಆರಂಭ ವಿಳಂಬವಾಗಬಹುದು. ರಾಜ್ಯದ ಇತರ ಜಿಲ್ಲೆಗಳೊಂದಿಗೆ ಇಲ್ಲಿ ಶಾಲಾ ಗಂಟೆ, ಚಿಣ್ಣರ ಚಿಲಿಪಿಲಿ ಅನುರಣಿಸದು ಎನ್ನುವುದು ಜಿಲ್ಲಾ ಮಟ್ಟದ ಅಧಿಕಾರಿಗಳ ಅಭಿಪ್ರಾಯ. ಮುಖ್ಯಮಂತ್ರಿ ಹಾಗೂ ಸಚಿವರ ಸಭೆಯ ನಿರ್ಧಾರವೂ ಇದರಂತೆಯೇ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.