ಮಂಗಳೂರು: ಫ್ಯಾಸಿಸ್ಟ್ ಶಕ್ತಿಗಳ ವಿಜಯ ಯಾವತ್ತೂ ಶಾಶ್ವತವಲ್ಲ. ಇತಿಹಾಸದ ಪುಟಗಳು ಈ ಸತ್ಯವನ್ನು ಸಾಕ್ಷೀಕರಿಸಿವೆ. ಫ್ಯಾಸಿಸ್ಟ್ ಶಕ್ತಿಗಳನ್ನು ಮಣಿಸಿ, ಸಮಾನತೆಯ ಕೆಂಪು ಭಾರತವನ್ನು ಸೃಷ್ಟಿಸಲು ಸಿಪಿಎಂ ಹೋರಾಡಲಿದೆ ಎಂದು ಸಿಪಿಎಂ ಕೇರಳದ ಮುಖಂಡ ಎಂ.ಸ್ವರಾಜ್ ಹೇಳಿದರು.
ಸಿಪಿಎಂನ ಜಿಲ್ಲಾ ಸಮ್ಮೇಳನದ ಕೊನೆಯ ದಿನವಾದ ಮಂಗಳವಾರ ಇಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್, ಇಟಲಿಯಲ್ಲಿ ಬೆನಿಟೊ ಮುಸೊಲಿನಿ ಅವರನ್ನು ಸೋಲಿಸಿದ್ದು ಕೆಂಪು ಪಡೆ ಎಂಬುದನ್ನು ಸ್ಮರಿಸಿಕೊಳ್ಳಬೇಕಾಗಿದೆ ಎಂದರು.
ಕೋಮುವಾದಿ ಬಿಜೆಪಿ ಆಡಳಿತದಿಂದಾಗಿ ರಾಷ್ಟ್ರವು ಸಂಕೀರ್ಣ ಸನ್ನಿವೇಶದಲ್ಲಿದೆ. ಆರ್ಥಿಕ ಶೋಷಣೆಯ ನೀತಿಯಿಂದಾಗಿ ಬಡತನ, ಹಸಿವು, ದಾರಿದ್ರ್ಯ ಹೆಚ್ಚಾಗುತ್ತಿದ್ದು, ಅಸಮಾನತೆಗೆ ದೇಶ ಬಲಿಯಾಗುತ್ತಿದೆ. ನಿರುದ್ಯೋಗ ಸಮಸ್ಯೆ ಉಲ್ಬಣಿಸಿದೆ. ದೇಶದ ರೈಲ್ವೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಬೆಲೆ ಏರಿಕೆಯಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಸಂವಿಧಾನದ ಆತ್ಮವಾಗಿರುವ ಜಾತ್ಯತೀತ ಭಾವವನ್ನು ಹಿಸುಕಿ, ಭಾರತವನ್ನು ಮತಾಂಧ, ಮೂಲಭೂತವಾದ ರಾಷ್ಟ್ರವಾಗಿ ಮಾರ್ಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಪಡೆಯುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಪ್ರಧಾನವಾಗಿದೆ. ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಕಾಂಗ್ರೆಸ್ ನಡೆಸಿದ 2ಜಿ ಸ್ಪೆಕ್ಟ್ರಂ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಭ್ರಷ್ಟಾಚಾರ, ಹಗರಣಗಳಿಂದ ಆರ್‌ಎಸ್‌ಎಸ್ ಮತ್ತು ಬಿಜೆಪಿ ಹೆಮ್ಮರವಾಗಿ ಬೆಳೆದು, ಅಧಿಕಾರಕ್ಕೆ ಬರಲು ಕಾರಣವಾದವು ಎಂದು ಆರೋಪಿಸಿದರು.
ಕಾಂಗ್ರೆಸ್ ಆರ್ಥಿಕ ನೀತಿಯನ್ನೇ ಅನುಸರಿಸುತ್ತಿರುವ ಬಿಜೆಪಿ, ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕಾಂಗ್ರೆಸ್‌ನ ಪ್ರತಿರೂಪವಾಗಿದೆ. ಇವೆರಡೂ ಪಕ್ಷಗಳ ಆರ್ಥಿಕ ನೀತಿಯಲ್ಲಿ ವ್ಯತ್ಯಾಸವಿಲ್ಲ. ಹೀಗಾಗಿ, ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ. ಕರ್ನಾಟಕದ ಮುಖ್ಯಮಂತ್ರಿ ಮೈಸೂರು ಮುಡಾ ಹಗರಣದಲ್ಲಿ ಭಾಗಿಯಾಗಿದ್ದನ್ನು ಕೇರಳದ ಮಲೆಯಾಳ ಪತ್ರಿಕೆಗಳು ವರದಿ ಮಾಡಿವೆ ಎಂದು ಹೇಳಿದರು.
ಸಿಪಿಎಂ ಮುಖಂಡ ಕೆ.ಯಾದವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕೆ.ಪ್ರಕಾಶ್, ವಸಂತ ಆಚಾರಿ, ಕೃಷ್ಣಪ್ಪ ಕೊಂಚಾಡಿ, ಸುಕುಮಾರ ತೊಕ್ಕೊಟ್ಟು, ಜಯಂತಿ ಶೆಟ್ಟಿ, ಬಿ.ಎಂ.ಭಟ್, ಬಾಲಕೃಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಬಜಾಲ್, ಬಿ.ಕೆ.ಇಮ್ತಿಯಾಜ್ ಇದ್ದರು. ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು.
‘ನಿರಾಶಾದಾಯಕ ಸ್ಥಿತಿಯಲ್ಲಿ ಕಾಂಗ್ರೆಸ್’
ತಳ ಸಮುದಾಯಗಳ ಸಮಸ್ಯೆ ವಲಸೆ ಕಾರ್ಮಿಕರ ಸಮಸ್ಯೆ ವಿಮೋಚನೆಗೆ ಮಾರ್ಗ ಹುಡುಕಬೇಕಾಗಿದೆ. ಬಿಜೆಪಿಯ ಕೋಮುವಾದದ ವಿರುದ್ಧ ಪ್ರಬಲ ವಿರೋಧ ಪಕ್ಷವಾಗಿ ಎದ್ದು ನಿಲ್ಲಬೇಕಾಗಿದ್ದ ಕಾಂಗ್ರೆಸ್ ನಿರಾಶಾದಾಯಕ ಸ್ಥಿತಿಯಲ್ಲಿದೆ. ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಹಿಂದಿನ ಚುನಾವಣೆಯಲ್ಲಿ ಸಿಪಿಎಂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. ರಾಜ್ಯದಲ್ಲಿ ಅಧಿಕಾರ ಹಿಡಿದರೂ ಜಿಲ್ಲೆಯಲ್ಲಿ ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿದೆ. ಬಿಜೆಪಿ ವಿರುದ್ಧ ಹೋರಾಟ ನಡೆಸಲು ಸಿದ್ಧವಿಲ್ಲ ಎಂಬ ಸಂದೇಶ ಕೊಡುತ್ತಿದೆ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು. ಬಿಜೆಪಿಯ ಕೋಮುವಾದ ಹೊಸ ಆರ್ಥಿಕ ನೀತಿಯ ಉನ್ಮಾದದಲ್ಲಿ ಸಮಸ್ಯೆಗಳು ಮರೆಯಾಗಿವೆ. ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಸಣ್ಣ ಸಮುದಾಯಗಳು ರಾಜಕೀಯ ಧ್ವನಿ ಇಲ್ಲದೆ ಕೋಮುವಾದದ ಹುಸಿ ಭ್ರಮೆಯಲ್ಲಿ ದಿಕ್ಕುತಪ್ಪಿ ಕಂಗಾಲಾಗಿವೆ. ದಲಿತರು ದಮನಿತರ ಮೇಲಿನ ದಬ್ಬಾಳಿಕೆ ಸೌಹಾರ್ದ ಸ್ಥಾಪಿಸುವಲ್ಲಿ ಕಾಂಗ್ರೆಸ್ ಮೌನವಾಗಿದೆ. ಈ ಸನ್ನಿವೇಶದಲ್ಲಿ ಧ್ವನಿ ಇಲ್ಲದವರ ಪರವಾಗಿ ಸಿಪಿಎಂ ಏಕಾಂಗಿಯಾಗಿ ಎದ್ದು ನಿಲ್ಲಬೇಕಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.