ಮಂಗಳೂರು: ‘ದೇವಸ್ಥಾನದಲ್ಲಿರುವಾಗ ಮನಸ್ಸಿನಲ್ಲಿ ಎಂತಹ ಸಂಚಲನ ಸೃಷ್ಟಿಯಾಗುತ್ತದೆಯೋ, ಅಂತಹದ್ದೇ ಅನುಭವ ಹುಲಿ ವೇಷ ಕುಣಿತವನ್ನು ನೋಡಿದಾಗಲೂ ಉಂಟಾಯಿತು...
ಭಾರತ ತಂಡದ ಕ್ರಿಕೆಟ್ ಆಟಗಾರ ಶಿವಂ ದುಬೆ ಅವರು ಹುಲಿ ವೇಷ ಕುಣಿತವನ್ನು ವೀಕ್ಷಿಸಿದ ಬಳಿಕ ತಮಗಾದ ಅನುಭವವನ್ನು ಬಿಚ್ಚಿಟ್ಟರು.
ಪಿಲಿ ನಲಿಕೆ ಪ್ರತಿಷ್ಠಾನ ಹಾಗೂ ‘ನಮ್ಮ ಟಿವಿ’ ಸಹಯೋಗದಲ್ಲಿಇಲ್ಲಿನ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ಪಿಲಿ ನಲಿಕೆ ಸ್ಪರ್ಧೆಯ ಒಂಬತ್ತನೇ ಆವೃತ್ತಿಯಲ್ಲಿ ಅತಿಥಿಯಾಗಿ ಭಾಗವಹಿಸಿದ ಅವರು ಕೆಲ ಹೊತ್ತು ಹುಲಿ ಕುಣಿತವನ್ನು ನೋಡಿ ನಿಬ್ಬೆರಗಾದರು.
‘ನಮಸ್ಕಾರ ಕುಡ್ಲ.. ಎಂಚ ಉಲ್ಲರ್’ ಎಂದು ತುಳುವಿನಲ್ಲೇ ಮಾತು ಆರಂಭಿಸಿದ ಅವರು ಹುಲಿ ಕುಣಿತ ವೀಕ್ಷಿಸಿದಾಗ ಆದ ರೋಮಾಂಚನವನ್ನು ಹಂಚಿಕೊಂಡರು. ‘ನಿಜಕ್ಕೂ ಇದು ಪ್ರಭಾವಶಾಹಿ. ಈ ಕಲೆಯ ಬಗ್ಗೆ ನಿಮಗೆ ಇರುವ ತುಡಿತವೂ ಅಷ್ಟೇ ಅದ್ಭುತವಾದುದು. ಇಂತಹ ಅನುಭವ ನನಗೆ ಎಲ್ಲೂ ಸಿಕ್ಕಿಲ್ಲ’ ಎಂದರು.
ಸಿನಿಮಾ ನಟ ರಾಜ್ ಬಿ.ಶೆಟ್ಟಿ, ‘ಹುಲಿ ಕುಣಿತ ನಮ್ಮ ಸಂಸ್ಕೃತಿಯ ಭಾಗ. ಈಗ ಹುಲಿ ಕುಣಿತ ಸ್ಪರ್ಧೆಗಳು ತುಳುನಾಡಿನ ಅನೇಕ ಕಡೆ ನಡೆಯುತ್ತಿವೆ. ಸಣ್ಣ ಸಣ್ಣ ಮಕ್ಕಳು ಹುಲಿ ವೇಷ ಹಾಕಿ ಕುಣಿಯಲು ಹಾತೊರೆಯುತ್ತಿದ್ದಾರೆ. ಇದಕ್ಕೆ ತಳಪಾಯ ಹಾಕಿದ್ದು ಮಿಥುನ್ ರೈ ಅವರು. ಜಾನಪದ ಪ್ರಕಾರಗಳು ಹೀಗೆಯೇ.. ಬಲು ಬೇಗ ಜನಪ್ರಿಯವಾಗುತ್ತವೆ. ಒಳ್ಳೆಯವು ಕೊನೆಯವರೆಗೂ ಉಳಿಯುತ್ತವೆ. ನಿಮ್ಮಂತಹ ಅಭಿಮಾನಿಗಳಿರುವವರೆಗೆ ಈ ಕಲೆ ಖಂಡಿತಾ ಹೀಗೆಯೇ ಮುಂದುವರಿಯಲಿದೆ’ ಎಂದರು.
ಪಿಲಿನಲಿಕೆ ಒಂಬತ್ತನೇ ಋತುವಿನ ಸ್ಪರ್ಧೆಯನ್ನು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಸಿನಿಮಾ ನಟರಾದ ಡಾಲಿ ಧನಂಜಯ, ಆಹನ್ ಶೆಟ್ಟಿ, ಮೇರ್ಸ್ಕ್ ಕಂಪನಿಯ ಸಿಇಓ ಗೌತಮ್ ಶೆಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಅದಾನಿ ಸಂಸ್ಥೆಯ ಅಧಿಕಾರಿ ಕಿಶೋರ್ ಆಳ್ವ, ಎಸಿಪಿ ಗೀತಾ ಕುಲಕರ್ಣಿ, ಧನ್ಯಾ ನಾಯಕ್, ಕಾಂಗ್ರೆಸ್ ಮುಖಂಡರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಪಾಲಿಕೆ ಸದಸ್ಯ ಪ್ರವೀಣ್ ಚಂದ್ರ ಆಳ್ವ, ಸಿನಿಮಾ ನಟ ದೇವದಾಸ್ ಕಾಪಿಕಾಡ್, ಶರ್ಮಿಳಾ ಕಾಪಿಕಾಡ್ ಮೊದಲಾದವರು ಭಾಗವಹಿಸಿದರು. ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಎಂ.ಮಿಥುನ್ ರೈ ಹಾಗೂ ನಮ್ಮ ಟಿವಿ ಸಿಇಓ ಶಿವಚರಣ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ವೆಂಕಟೇಶ್ ಭಟ್ ಪಾವಂಜೆ ಹಾಗೂ ಕೆ.ಕೆ. ಪೇಜಾವರ ಅವರು ತೀರ್ಪುಗಾರರಾಗಿದ್ದರು.
ಪಿಲಿ ನಲಿಕೆಯ 9ನೇ ಆವೃತ್ತಿಯಲ್ಲಿ 10ಕ್ಕೂ ಹೆಚ್ಚು ತಂಡಗಳು ಭಾಗವಹಿಸಿವೆ. ಸ್ಪರ್ಧೆಯು ತಡ ರಾತ್ರಿವರೆಗೂ ಮುಂದುವರಿದಿತ್ತು. ಪ್ರತಿ ತಂಡದ ಪ್ರದರ್ಶನವೂ ರೋಮಾಂಚನಕಾರಿಯಾಗಿತ್ತು. ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಪ್ರೇಕ್ಷಕರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.