ADVERTISEMENT

ಭೂಗತ ಪಾತಕಿ ವಿಶ್ವನಾಥ ಕೊರಗ ಶೆಟ್ಟಿ ಸಹಚರನ ಬಂಧನ: ಪಿಸ್ತೂಲ್, ಸಜೀವ ಗುಂಡು ವಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 13:12 IST
Last Updated 20 ಡಿಸೆಂಬರ್ 2018, 13:12 IST
ಸಿಸಿಬಿ ಪೊಲೀಸರು ಬಂಧಿಸಿರುವ ಹೇಮಂತ್‌ಕುಮಾರ್‌ ಹಾಗೂ ಆತನಿಂದ ವಶಪಡಿಸಿಕೊಂಡ ಮಾರಕಾಸ್ತ್ರಗಳು.
ಸಿಸಿಬಿ ಪೊಲೀಸರು ಬಂಧಿಸಿರುವ ಹೇಮಂತ್‌ಕುಮಾರ್‌ ಹಾಗೂ ಆತನಿಂದ ವಶಪಡಿಸಿಕೊಂಡ ಮಾರಕಾಸ್ತ್ರಗಳು.   

ಮಂಗಳೂರು: ನಗರದ ಹೊಯ್ಗೆ ಬಝಾರ್ ಪರಿಸರದಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ಅಕ್ರಮ ಪಿಸ್ತೂಲ್‌ ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ಪೊಲೀಸರು, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ವಿಶ್ವನಾಥ ಕೊರಗ ಶೆಟ್ಟಿ ಸಹಚರ ಹೇಮಂತ್ ಕುಮಾರ್‌ ಯಾನೆ ಹೇಮು ಎಂಬುವನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯಿಂದ ಒಂದು ಪಿಸ್ತೂಲ್ ಹಾಗೂ 4 ಸಜೀವ ಗುಂಡುಗಳು, 2 ತಲವಾರ, ಚೂರಿ, ಬೇಸ್ ಬಾಲ್ ಸ್ಟಿಕ್ ಹಾಗೂ ಎರಡು ಮೊಬೈಲ್ ಸೇರಿದಂತೆ ₹1,12,750 ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಪಿಸ್ತೂಲ್ ಮೌಲ್ಯ ₹1 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕದ್ರಿ ಪಾರ್ಕ್ ಬಳಿ 2014 ರಲ್ಲಿ ನಡೆದ ಅನೀಷ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹೇಮಂತ್‌ಕುಮಾರ್‌, ದುಷ್ಕೃತ್ಯ ನಡೆಸುವ ಉದ್ದೇಶದಿಂದ ಪಿಸ್ತೂಲ್ ಹಾಗೂ ಸಜೀವ ಮದ್ದುಗುಂಡುಗಳು, ತಲವಾರುಗಳನ್ನು ಇಟ್ಟುಕೊಂಡಿದ್ದಾನೆ ಎಂಬ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಈ ದಾಳಿ ನಡೆಸಿದ್ದಾರೆ.

ಈತನ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 2 ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆರೋಪಿ ಹಾಗೂ ವಶಪಡಿಸಿಕೊಂಡ ಪಿಸ್ತೂಲ್ ಹಾಗೂ ಇತರ ಮಾರಾಕಾಯುಧಗಳನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ನಗರದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಿರ್ದೇಶನದಲ್ಲಿ, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಶಾಂತಾರಾಮ, ಸಬ್‌ ಇನ್‌ಸ್ಪೆಕ್ಟರ್‌ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.