ADVERTISEMENT

ಉಪ್ಪಿನಂಗಡಿ: ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ನದಿಗೆ ಮಲಿನ ನೀರು ಬಿಡುತ್ತಿರುವವರ ವಿರುದ್ಧ ತಹಶೀಲ್ದಾರ್ ಠಾಣೆಗೆ ದೂರು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 6:34 IST
Last Updated 23 ಆಗಸ್ಟ್ 2021, 6:34 IST
ಉಪ್ಪಿನಂಗಡಿಯಲ್ಲಿ ನದಿಗೆ ಮಲಿನ ನೀರು ಬಿಡುತ್ತಿರುವ ದೂರಿನ ಮೇರೆಗೆ ತಹಶೀಲ್ದಾರ್ ರಮೇಶ್ ಬಾಬು ನೇತ್ರಾವತಿ ನದಿ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು (ಸಂಗ್ರಹ ಚಿತ್ರ)
ಉಪ್ಪಿನಂಗಡಿಯಲ್ಲಿ ನದಿಗೆ ಮಲಿನ ನೀರು ಬಿಡುತ್ತಿರುವ ದೂರಿನ ಮೇರೆಗೆ ತಹಶೀಲ್ದಾರ್ ರಮೇಶ್ ಬಾಬು ನೇತ್ರಾವತಿ ನದಿ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು (ಸಂಗ್ರಹ ಚಿತ್ರ)   

ಉಪ್ಪಿನಂಗಡಿ: ಇಲ್ಲಿ ಹರಿಯುವ ಜೀವನದಿ ನೇತ್ರಾವತಿಗೆ ತ್ಯಾಜ್ಯ, ಮಲಿನ ನೀರು ಬಿಡುತ್ತಿರುವ ಸಂಬಂಧ ತಹಶೀಲ್ದಾರ್ ನೀಡಿರುವ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ನದಿಗೆ ಮಲಿನ ನೀರು ಬಿಡುವ ಮತ್ತು ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಇಂಗುಗುಂಡಿ ನಿರ್ಮಾಣ ಮಾಡಿರುವ ಬಗ್ಗೆ ಪುತ್ತೂರು ತಹಶೀಲ್ದಾರ್ ದೂರು ನೀಡಿದ್ದರು. ಉಪ್ಪಿನಂಗಡಿ ನಿರಲ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ನವೀನ ರೈ, ಗೌರಿ ವೆಂಕಟೇಶ್ ವಸತಿ ಸಮುಚ್ಚಯದ ಮಾಲೀಕ ಪ್ರಕಾಶ್ ಭಟ್, ಹೋಟೆಲ್ ಲಕ್ಷ್ಮೀ ನಿವಾಸ ಸಂಸ್ಥೆಯ ಶೇಕರ್ ಮತ್ತು ಇಳಂತಿಲ ಗ್ರಾಮದ ಅಂಡೆತ್ತಡ್ಕ ನಿವಾಸಿ ಸದಾನಂದ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಹಶೀಲ್ದಾರ್ ನಿವೇದನೆ: ಉಪ್ಪಿನಂಗಡಿ ಮತ್ತು ನೆಕ್ಕಿಲಾಡಿ ಗ್ರಾಮದಲ್ಲಿ ನೇತ್ರಾವತಿ ನದಿಗೆ ಕೆಲವು ಅಪಾರ್ಟ್‌ಮೆಂಟ್ ಮತ್ತು ಹೋಟೆಲ್, ವಸತಿ ಗೃಹ ಮುಂತಾದವುಗಳಿಂದ ತ್ಯಾಜ್ಯ, ಮಲಿನ ನೀರನ್ನು ಬಿಡುತ್ತಿದ್ದು, ಇದರಿಂದ ನದಿ ನೀರು ಕಲುಷಿತಗೊಂಡು, ಈ ನೀರು ಕುಡಿಯುವ ಜನರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಇರುವುದಾಗಿ ಉಪ್ಪಿನಂಗಡಿ ಪರಿಸರದ ಗ್ರಾಮಸ್ಥರು ದೂರು ನೀಡಿದ್ದರು.

ADVERTISEMENT

ಈ ಪ್ರಕರಣ ಪರಿಶೀಲಿಸಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಕಚೇರಿಯ ಅಧಿಕಾರಿಗಳು ಉಲ್ಲೇಖಿಸಿದಂತೆ, 2021 ಮೇ 5ರಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮತ್ತು ವಸತಿ ಸಮುಚ್ಚಯದ ಮಾಲೀಕರು, ಹೋಟೆಲ್ ಮತ್ತು ಇತರ ವಾಣಿಜ್ಯ ಉದ್ದಿಮೆದಾರರು ಸೇರಿದಂತೆ 12 ಮಂದಿಗೆ ನೋಟಿಸ್ ನೀಡಿ ನದಿಗೆ ತ್ಯಾಜ್ಯ ಬಿಡುವುದನ್ನು ತಡೆಹಿಡಿಯುವಂತೆ ಸೂಚನೆ ನೀಡಲಾಗಿತ್ತು. ನಂತರ ಇವರು ನದಿಗೆ ಮಲಿನ ನೀರು ಬಿಡುವುದಿಲ್ಲ ಎಂದು ಲಿಖಿತ ಸಮಜಾಯಿಷಿ ನೀಡಿದ್ದರು. ಆದರೆ, ತಾಲ್ಲೂಕು ಭೂಮಾಪಕರು ಮತ್ತು ಕಂದಾಯ ನಿರೀಕ್ಷಕರು ಪರಿಶೀಲನೆ ನಡೆಸಿದಾಗ, ಕೆಲವರು ನದಿಗೆ ಮಲಿನ ನೀರು ಬಿಡುತ್ತಿರುವ ಮತ್ತು ಇಂಗುಗುಂಡಿ ನಿರ್ಮಿಸುವುದು ಕಂಡುಬಂದಿದೆ.ಕಂದಾಯಇಲಾಖೆಗೆ ಸೇರಿದ ಜಮೀನಿನಲ್ಲಿ ಅನಧಿಕೃತವಾಗಿ ಇಂಗುಗುಂಡಿ ಮಾಡಿರುವುದು ಕಂಡು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಆರೋಪಿತ ಕಟ್ಟಡ ಮಾಲೀಕರ ವಿರುದ್ಧ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 192ಎ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ತಹಶೀಲ್ದಾರರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.