ಪುತ್ತೂರು: ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಮತ್ತು ಮಾಡ್ನೂರು ಗ್ರಾಮದ ಅಮ್ಚಿನಡ್ಕ ವ್ಯಾಪ್ತಿಯಲ್ಲಿ ಕೃಷಿ ಹಾನಿ ಮಾಡಿದ್ದ ಕಾಡಾನೆಗಳು ಬುಧವಾರ ರಾತ್ರಿ ನೂಜಿಬೈಲು ಪರಿಸರದಲ್ಲಿ ಕೃಷಿ ಹಾನಿ ಮಾಡಿವೆ.
ಪೆರ್ನಾಜೆ– ಅಲೆಪ್ಪಾಡಿ ರಸ್ತೆಯ ಮೂಲಕ ಬುಧವಾರ ರಾತ್ರಿ ಕಾಡಾನೆಗಳು ನೂಜಿಬೈಲು ಪರಿಸರಕ್ಕೆ ಕಾಲಿಟ್ಟಿದ್ದು, ಪೆರ್ನಾಜೆ– ಮಾಡನ್ನೂರು ರಸ್ತೆಯಲ್ಲಿ ಜೀಪ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಕಾಡಾನೆಗಳೆರಡು ರಸ್ತೆ ದಾಟುವುದನ್ನು ಕಂಡಿದ್ದಾರೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ನೂಜಿಬೈಲು ನಿವಾಸಿ ಅಶೋಕ್ ರೈ ಅವರ ಜಾಗದ ಅಗಲನ್ನು ಎರಡು ಕಡೆ ಒಡೆದು ಪ್ರವೇಶಿಸಿದ್ದ ಕಾಡಾನೆಗಳು ನೂಜಿಬೈಲು ಜಯಪ್ರಕಾಶ್ ರೈ, ನಾರಾಯಣ ರೈ ಅಂಕೋತ್ತಿಮಾರ್ ಅವರ ಕೃಷಿಗೆ ಹಾನಿ ಮಾಡಿವೆ. ನೂಜಿಬೈಲಿನ ಮೋಹನ್‌ದಾಸ್ ಶೆಟ್ಟಿ ಅವರ ತೋಟದ ಮೂಲಕವಾಗಿ ಕೆಮ್ಮತ್ತಡ್ಕ, ಹೊಸಂಗಡಿ ಕಡೆಗೆ ಕಾಡಾನೆಗಳು ತೆರಳಿವೆ ಎಂದು ಗೊತ್ತಾಗಿದೆ.
ಕಾಡಾನೆಗಳು ಇದೇ ಪರಿಸರ ವ್ಯಾಪ್ತಿಯ ಅರಣ್ಯ ಭಾಗದಲ್ಲಿ ಬೀಡುಬಿಟ್ಟಿರಬಹುದೆಂದು ಶಂಕಿಸಲಾಗಿದ್ದು, ಕೃಷಿಕರು ಆತಂಕಕ್ಕೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.