ADVERTISEMENT

ಪ್ರವಾಸಿ ಋತುವಿಗೆ ವಿದಾಯ ಹೇಳಿದ ‘ರಿವೀರ’

ಎನ್‌ಎಂಪಿಗೆ ಈ ಋತುವಿನಲ್ಲಿ 9 ಐಷಾರಾಮಿ ಹಡಗು

​ಪ್ರಜಾವಾಣಿ ವಾರ್ತೆ
Published 8 ಮೇ 2024, 5:11 IST
Last Updated 8 ಮೇ 2024, 5:11 IST
ನವಮಂಗಳೂರು ಬಂದರಿಗೆ ‘ರಿವೀರ’ ಐಷಾರಾಮಿ ಹಡಗಿನಲ್ಲಿ ಮಂಗಳವಾರ ಬಂದಿಳಿದ ವಿದೇಶಿ ಪ್ರವಾಸಿಗರನ್ನು ಚೆಂಡೆವಾದನದ ಮೂಲಕ  ಬರಮಾಡಿಕೊಳ್ಳಲಾಯಿತು
ನವಮಂಗಳೂರು ಬಂದರಿಗೆ ‘ರಿವೀರ’ ಐಷಾರಾಮಿ ಹಡಗಿನಲ್ಲಿ ಮಂಗಳವಾರ ಬಂದಿಳಿದ ವಿದೇಶಿ ಪ್ರವಾಸಿಗರನ್ನು ಚೆಂಡೆವಾದನದ ಮೂಲಕ  ಬರಮಾಡಿಕೊಳ್ಳಲಾಯಿತು   

ಮಂಗಳೂರು: ಐಷಾರಾಮಿ ಹಡಗು ‘ರಿವೀರ’ ನವಮಂಗಳೂರು ಬಂದರನ್ನು (ಎನ್‌ಎಂಪಿ) ಮಂಗಳವಾರ ಬೆಳಿಗ್ಗೆ 8.30ಕ್ಕೆ ತಲುಪಿದೆ. ಈ ಅಂತರರಾಷ್ಟ್ರೀಯ ಪ್ರವಾಸಿ ಋತುವಿನಲ್ಲಿ ಎನ್‌ಎಂಪಿಗೆ ಬಂದ ಕೊನೆಯ ಐಷಾರಾಮಿ ಹಡಗು ಇದಾಗಿದೆ. 

ಮಾರ್ಷಲ್‌ ದ್ವೀಪದ ಧ್ವಜವನ್ನು ಹೊಂದಿರುವ ‘ರಿವೀರ’ ಹಡಗಿನಲ್ಲಿ 1,141 ಪ್ರಯಾಣಿಕರು ಹಾಗೂ 752 ಸಿಬ್ಬಂದಿ ಇದ್ದರು. ಕೋವಿಡ್‌ ಬಳಿಕದ ಎರಡು ವರ್ಷಗಳಲ್ಲಿ ನಗರಕ್ಕೆ ಬಂದಿರುವ ಐಷಾರಾಮಿ ಹಡಗುಗಳಲ್ಲಿ ಅತಿ ಹೆಚ್ಚು ಸಂಖ್ಯೆ ಪ್ರಯಾಣಿಕರಿದ್ದ ಹಡಗು ಇದಾಗಿದೆ. ಕೊಚ್ಚಿ ಬಂದರಿನಿಂದ ನವಮಂಗಳೂರು ಬಂದರಿಗೆ ಬಂದ ಈ ಹಡಗು ಬಳಿಕ ಮರ್ಮಗೋವಾಕ್ಕೆ ಪ್ರಯಾಣ ಬೆಳೆಸಿತು.

2023ರ ನ.28ರಂದು ನವ ಮಂಗಳೂರು ಬಂದರಿಗೆ ಯೂರೋಪಿನ ಮಾಲ್ಟಾದಿಂದ ಬಂದಿದ್ದ ‘ಎಂ.ಎಸ್‌.ಯೂರೋಪಾ 2’ ಹಡಗಿನೊಂದಿಗೆ 2023–24ನೇ ಸಾಲಿನ ಐಷಾರಾಮಿ ಹಡಗುಗಳ ಪ್ರವಾಸದ ಋತು ಆರಂಭಗೊಂಡಿತ್ತು. ಆ ಹಡಗಿನಲ್ಲಿ 271 ಪ್ರಯಾಣಿಕರು ಹಾಗೂ 373 ಸಿಬ್ಬಂದಿ ಇದ್ದರು. 

ADVERTISEMENT

ಈ ಸಲದ ಪ್ರವಾಸಿ ಋತುವಿನಲ್ಲಿ ಒಟ್ಟು 9 ಐಷಾರಾಮಿ ಹಡಗುಗಳು ಬಂದರಿಗೆ ಭೇಟಿ ನೀಡಿವೆ. ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಪ್ರವಾಸಿಗರಿಗಾಗಿ ವಿಶೇಷ ಸೌಕರ್ಯಗಳನ್ನು ಕಲ್ಪಿಸಿದೆ.

ವಿದೇಶಿ ಪ್ರವಾಸಿಗರು ಕಾರ್ಕಳದ ಗೊಮ್ಮಟೇಶ್ವರ, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಸೋನ್ಸ್‌ ಫಾರ್ಮ್‌, ಅಚಲ್ ಗೋಡಂಬಿ ಕಾರ್ಖಾನೆ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಸೇಂಟ್ ಅಲೋಷಿಯಸ್‌ ಚರ್ಚ್‌, ಸ್ಥಳೀಯ ಮಾರುಕಟ್ಟೆ, ನಗರದ ಪಾರಂಪರಿಕ ಮನೆಗಳಿಗೆ ಭೇಟಿ ನೀಡಿದ್ದಾರೆ.  ಪ್ರವಾಸಿಗರು ನಿರ್ಗಮಿಸುವಾಗ ಅವರಿಗೆ ಇಲ್ಲಿನ ಭೇಟಿಯನ್ನು ಅವಿಸ್ಮರಣೀಯಗೊಳಿಸಲು ಎನ್‌ಎಂಪಿಎ ವತಿಯಿಂದ ಸ್ಮರಣಿಕೆಗಳನ್ನು ನೀಡಲಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.