ಮಂಗಳೂರು: ಉದಯರಾಗ, ನೃತ್ಯ ಕಾರ್ಯಕ್ರಮ, ರಾಜ್‌ಕುಮಾರ್ ಸವಿನೆನಪಿನ ಹಾಡುಗಳು, ಹರಿಕಥೆ, ಗಮಕ, ನಗೆ ಹಬ್ಬವನ್ನು ಒಳಗೊಂಡ ಸಾಂಸ್ಕೃತಿಕ ಸೊಬಗಿನನಲ್ಲಿ ಈ ಬಾರಿಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ಶ್ರೀ ಕೃಷ್ಣಾನುಭವ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಫೆಬ್ರುವರಿ 3,4 ಮತ್ತು 5ರಂದು ನಡೆಯಲಿರುವ 25ನೇ ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು ಉಪನ್ಯಾಸ, ವೈವಿಧ್ಯಮಯ ಗೋಷ್ಠಿಗಳು, ಪುಸ್ತಕಗಳ ಬಿಡುಗಡೆ ಮತ್ತು ಡಾಕ್ಟರೇಟ್ ಗಳಿಸಿದವರಿಗೆ ಸನ್ಮಾನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಸಾಹಿತ್ಯ ಪರಂಪರೆ, ಮಾಧ್ಯಮ ಸವಾಲುಗಳು, ಆತ್ಮನಿರ್ಭರ ಮತ್ತು ರಂಗ ವೈಖರಿ ಎಂಬ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ದೈವಾರಾಧನೆ ಮತ್ತು ತುಳುನಾಡು, ಪರಿಸರ ಮತ್ತು ಜೀವಸಂಕುಲಗಳು, ಮಂಕುತಿಮ್ಮನ ಕಗ್ಗ–ಜೀವನಮೌಲ್ಯ ಮುಂತಾದ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ ಎಂದು ತಿಳಿಸಿದರು.
3ರಂದು ಬೆಳಿಗ್ಗೆ 9.30ಕ್ಕೆ ಧ್ವಜಾರೋಹಣ, ಸಂಜೆ 4ರಿಂದ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿಗಳಿಂದ ಭಾವಗಾಯನ, 5 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಾಹಿತ್ಯ ಪರಿಷತ್ತು ಕೇಂದ್ರ ಘಟಕದ ಅಧ್ಯಕ್ಷ ಮಹೇಶ ಜೋಷಿ ಸಮ್ಮೇಳನ ಉದ್ಘಾಟಿಸಲಿದ್ದು ಸಚಿವ ವಿ.ಸುನಿಲ್ ಕುಮಾರ್ ಸಂಚಿಕೆ ಬಿಡುಗಡೆ ಮಾಡುವರು. ಪ್ರದರ್ಶನ ಮಳಿಗೆಗಳನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದು ಜಿಲ್ಲಾಧಿಕಾರಿ ರವಿಕುಮಾರ್ ಆರ್. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುವರು ಎಂದು ಅವರು ತಿಳಿಸಿದರು.
5ರಂದು ಬೆಳಿಗ್ಗೆ 11 ಗಂಟೆಗೆ ಸಾಹಿತಿ ವಸಂತ ಕುಮಾರ್ ಪೆರ್ಲ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ಮ 3.15ಕ್ಕೆ ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ, 3.45ಕ್ಕೆ ಬಹಿರಂಗ ಅಧಿವೇಶನ ಇರುತ್ತದೆ. ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪಾಲ್ಗೊಳ್ಳಲಿದ್ದು ವಿಶ್ರಾಂತ ಪ್ರಾಧ್ಯಾಪಕ ತಾಳ್ತಜೆ ವಸಂತ ಕುಮಾರ್ ಸಮಾರೋಪ ಭಾಷಣ ಮಾಡುವರು ಎಂದು ಅವರು ವಿವರಿಸಿದರು.
3ರಂದು ಸಂಜೆ ರಾಜ್ ಸವಿನೆನಪಿನಲ್ಲಿ ಜಗದೀಶ್ ಶಿವಪುರ ಅವರಿಂದ ಗೀತಗಾಯನ, ವಿದುಷಿ ಶಾಲಿನಿ ಆತ್ಮಭೂಷಣ ನಿರ್ದೇಶನದಲ್ಲಿ ನೃತ್ಯೋಹಂ, 4ರಂದು ಬೆಳಿಗ್ಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಉದಯರಾಗ, ಮಧ್ಯಾಹ್ನ ಕಲಾ ಸಾರಥಿ ತಂಡದಿಂದ ಹರಿಕಥೆ, ಯಜ್ಞೇಶ ಆಚಾರ್ಯ ಅವರಿಂದ ಗಮಕ, ಪಟ್ಟಾಭಿರಾಮ ಅವರಿಂದ ನಗೆಹಬ್ಬ, ಸಂಜೆ ದಫ್ ಅಸೋಸಿಯೇಷನ್‌ನಿಂದ ದಫ್ ಕಾರ್ಯಕ್ರಮ, ಅನಸೂಯಾ ದೇವಸ್ಥಳಿ ಅವರಿಂದ ಗೀತಲಹರಿ, ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ತಾಳಮದ್ದಳೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಕಲಾಕೇಂದ್ರದಿಂದ ಕಲಾವೈಭವ, 5ರಂದು ಬೆಳಿಗ್ಗೆ ಪ್ರಕಾಶ ದೇವಾಡಿಗ ಅವರಿಂದ ಸ್ಯಾಕ್ಸೊಫೋನ್ ವಾದನ, ಮಧ್ಯಾಹ್ನ ಲಲಿತ ಕಲಾ ಸಂಘದಿಂದ ಯಕ್ಷಗಾನ ವೈಭವ, ಸಂಜೆ ಸಾನಿಧ್ಯ ಸಮೂಹ ಸಂಸ್ಥೆಯಿಂದ ಭರತ ವೈಭವ, ಪ್ರಣತಿ ಚೈತನ್ಯ ಅವರಿಂದ ಭರತನಾಟ್ಯ, ರಜತ್ ಮಯ್ಯ ತಂಡದಿಂದ ಸುಮಧುರ ಗೀತೆಗಳ ಗಾಯನ ಇರುತ್ತದೆ ಎಂದು ಶ್ರೀನಾಥ ತಿಳಿಸಿದರು.
ಪರಿಷತ್ತು ಕೇಂದ್ರ ಸಮಿತಿಯ ಸದಸ್ಯ ಮಾಧವ ಎಂ.ಕೆ, ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ವಿನಯ ಆಚಾರ್, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಸಹ ಕಾರ್ಯದರ್ಶಿ ಯು.ಎಚ್.ಖಾಲಿದ್ ಇದ್ದರು.
ಅನುದಾನ ಇನ್ನೂ ಬಂದಿಲ್ಲ: ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಘಟಕಕ್ಕೆ ಮನವಿ ಸಲ್ಲಿಸಲಾಗಿದೆ. ಇನ್ನೂ ಹಣ ಬಿಡುಗಡೆ ಆಗಲಿಲ್ಲ. ಆದಷ್ಟು ಶೀಘ್ರ ಆದು ಕೈಸೇರುವ ನಿರೀಕ್ಷೆ ಇದೆ ಎಂದು ಶ್ರೀನಾಥ್ ತಿಳಿಸಿದರು. ‘ಪ್ರತಿ ಜಿಲ್ಲಾ ಸಮ್ಮೇಳನಕ್ಕೆ ₹ 5 ಲಕ್ಷ ಅನುದಾನ ನೀಡಲಾಗುತ್ತದೆ. ನಮಗೆ ಇನ್ನೂ ಈ ಮೊತ್ತ ತಲುಪಿಲ್ಲ. ಆದ್ದರಿಂದ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಸಮ್ಮೇಳನ ಆಯೋಜಿಸಾಗುತ್ತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ವಿವರಿಸಿದರು.
ಸಾರಾ ಅಬೂಬಕ್ಕರ್ ವೇದಿಕೆ: ಸಾಹಿತ್ಯ ಸಮ್ಮೇಳನ ನಡೆಯುವ ಪ್ರಾಂಗಣಕ್ಕೆ ಈಚೆಗೆ ತೀರಿಕೊಂಡ ಖ್ಯಾತ ಯಕ್ಷಗಾನ ಪಟು ಕುಂಬ್ಳೆ ಸುಂದರರಾವ್ ಹೆಸರು ಇರಲಿಸಲಾಗಿದ್ದು ವೇದಿಕೆಗೆ ಇತ್ತೀಚೆಗೆ ಕೊನೆಯುಸಿರೆಳೆದ ಸಾಹಿತಿ ಸಾರಾ ಅಬೂಬಕ್ಕರ್ ಅವರ ಹೆಸರು ಇಡಲಾಗಿದೆ.
ಪುಷ್ಪಾವತಿ ಆರ್ ಶೆಟ್ಟಿಯವರಿಂದ ಧ್ವಜಾರೋಹಣ
3ರಂದು ಬೆಳಿಗ್ಗೆ 9.30ಕ್ಕೆ ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ ರಾಷ್ಟ್ರಧ್ವಜಾರೋಹಣ ಮಾಡುವುದರ ಮೂಲಕ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಸಮ್ಮೇಳನಾಧ್ಯಕ್ಷರನ್ನು ಶ್ರೀ ಜನಾರ್ದನ ದೇವಸ್ಥಾನದ ಮಹಾದ್ವಾರದಿಂದ ಮಂಗಳ ವಾದ್ಯದೊಂದಿಗೆ ಸಂಜೆ ಸಮ್ಮೇಳನದ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಗುವುದು. ನಂತರ ಸಮ್ಮೇಳನದ ಮತ್ತು ಪರಿಷತ್ತಿನ ಧ್ವಜಾರೋಹಣ ನಡೆಯಲಿದೆ. ತಹಶೀಲ್ದಾರರಾದ ಪೃಥ್ವಿ ಸಾನಿಕಮ್ ಸಮ್ಮೇಳನದ ಧ್ವಜಾರೋಹಣ ಮಾಡಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಧರ್ಮದರ್ಶಿಗಳಾ ಹರಿಕೃಷ್ಣ ಪುನರೂರು, ಎಸ್. ಪ್ರದೀಪ ಕುಮಾರ ಕಲ್ಕೂರ, ಉದ್ಯಮಿಗಳಾದ ರಘುನಾಥ ಸೋಮಯಾಜಿ, ಪರಿಷತ್ತು ಕಾಸರಗೋಡು ಘಟಕದ ಜಿಲ್ಲಾಧ್ಯಕ್ಷ ಎಸ್.ವಿ ಭಟ್, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಎಂ.ಪ್ರಭಾಕರ ಜೋಷಿ ಭಾಗವಹಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ ಮತ್ತು ಸಾಮಾಜಿಕ, ಶೈಕ್ಷಣಿಕ ಸೇವೆಗಾಗಿ ಡಾಕ್ಟರೇಟ್ ಪದವಿ ಪಡೆದವರನ್ನು ಹರ್ಷೇಂದ್ರ ಕುಮಾರ್ ಮತ್ತು ಹರೀಶ್ ಕುಮಾರ್ ನಡೆಸಿಕೊಡಲಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಉದಯರಾಗದೊಂದಿಗೆ ಎರಡನೇ ದಿನದ ಕಾರ್ಯಕ್ರಮಗಳು ಆರಂಭವಾಗಲಿವೆ. ಗೋಷ್ಠಿಗಳಲ್ಲಿ ಕೆ.ಕೆ.ಪೇಜಾವರ, ಎ.ವಿ.ನಾವಡ, ತಾರಾನಾಥ ವರ್ಕಾಡಿ, ಅರವಿಂದ ಚೊಕ್ಕಾಡಿ, ಡಾ.ಬಿ.ಪಿ. ಸಂಪತ್ ಕುಮಾರ್, ಜಯಾನಂದ ಸಂಪಾಜೆ, ದೇವಿಪ್ರಸಾದ್ ಜೈಕನ್ನಡಮ್ಮ, ಎ.ಕೆ ಕುಕ್ಕಿಲ, ಸಿನಾನ್ ಇಂದಬೆಟ್ಟು, ರಾಕೇಶ್ ಕುಮಾರ್ ಕಮ್ಮಾಜೆ, ಡಾ.ಮೋಹನ್ ಆಳ್ವ, ಡಾ.ಪ್ರಭಾಕರ ಶಿಶಿಲ, ಶ್ರೀಪತಿ ಭಟ್, ಭುವನಾಭಿರಾಮ ಉಡುಪ, ಡಾ.ಎಲ್.ಎಚ್.ಮಂಜುನಾಥ್, ಡಾ.ಜಗದೀಶ್ ಬಾಳ, ರಾಮಕೃಷ್ಣ ಆಚಾರ್, ಮೋನಪ್ಪ ಕರ್ಕೇರ, ಕೆ.ಎನ್.ಜನಾರ್ದನ್, ಗಿರಿಧರ ಕಲ್ಲಾಪು, ವಿವೇಕ್ ವಿನ್ಸೆಂಟ್ ಪಾಯಸ್, ಡಾ.ವಸಂತ ಕುಮಾರ್ ಪೆರ್ಲ, ಜೀವನ್ ರಾಂ ಸುಳ್ಯ, ಸುನಿಲ್ ಪಲ್ಲಮಜಲು, ಶೀನಾ ನಾಡೋಳಿ, ಜಿ.ಎಸ್.ನಟೇಶ್ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ವಿಶೆಷ ಆಹ್ವಾನಿತರಾಗಿ ಪರಿಷತ್ತು ಉಡುಪಿ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಭಾಗವಹಿಸಲಿದ್ದಾರೆ. ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್ ಸಾಧಕರನ್ನು ಸನ್ಮಾನಿಸಲಿದ್ದಾರೆ. 3 ವಿಭಾಗದಲ್ಲಿ 39 ಮಂದಿಗೆ ಗೌರವಾರ್ಪಣೆ ನಡೆಯಲಿದ್ದು, ಕವಿಗೋಷ್ಠಿಯಲ್ಲಿ 21 ಕವಿಗಳು ಪಾಲ್ಗೊಳ್ಳುವರು. 16 ಪುಸ್ತಕಗಳು ಬಿಡುಗಡೆಯಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.