ಮಂಗಳೂರು: ‘ನಮ್ಮ ಮಗನ ಮದುವೆಗೆ ಮುಂದಿನ ಡಿಸೆಂಬರ್‌ನಲ್ಲಿ ದಿನಗೊತ್ತುಪಡಿಸಿದ್ದೆವು. ಅದಕ್ಕೆ ಮನೆಯ ಪೇಂಟಿಂಗ್ ಮಾಡಿಸಲು ತಯಾರಿ ನಡೆಸುತ್ತಿದ್ದೆ. ಸೋಮವಾರ (ಅ.7ರಂದು) ನನ್ನ ಮೊಬೈಲ್‌ಗೆ ಬಂದ ವಾಟ್ಸ್ ಆ್ಯಪ್ ಕರೆ ಬದುಕನ್ನೇ ನಾಶಮಾಡಿದೆ. ಜೀವಮಾನವಿಡೀ ದುಡಿದು, ಪೈಸೆ ಪೈಸೆ ಉಳಿಸಿ ಕೂಡಿಟ್ಟಿದ್ದ ₹ 18.64 ಲಕ್ಷ ಅರೆಗಳಿಗೆಯಲ್ಲೇ ಕರಗಿ ಹೋಯಿತು...
ಸೈಬರ್ ವಂಚಕರಿಂದ ಮೋಸ ಹೋದ ಪರಿಯನ್ನು ಚಿಲಿಂಬಿಯ ನಿವೃತ್ತ ಉಪನ್ಯಾಸಕಿಯೊಬ್ಬರು ವಿವರಿಸುವಾಗ ಅವರ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ‘ಕರೆ ಮಾಡಿದ ವ್ಯಕ್ತಿ ಫೆಡೆಕ್ಸ್ ಪಾರ್ಸೆಲ್ ಕಂಪನಿ ಅಧಿಕಾರಿ ಎಂದು ಪರಿಚಯಿಸಿಕೊಂಡ. ನೀವು ಕಳುಹಿಸಿದ ಪಾರ್ಸೆಲ್‌ನಲ್ಲಿ ನಿಷೇಧಿತ ಮಾದಕ ಪದಾರ್ಥಗಳಿವೆ’ ಎಂದ. ‘ನಾನು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ’ ಎಂದರೂ ಆತ ಕೇಳಲೇ ಇಲ್ಲ. ‘ಮುಂಬೈ ಅಪರಾಧ ಪತ್ತೆ ವಿಭಾಗದ ಪೊಲೀಸರು ನಿಮಗೆ ಕರೆ ಮಾಡುತ್ತಾರೆ ಎಂದು ಸಂಪರ್ಕ ಕಡಿತಗೊಳಿಸಿದ್ದ’ ಎಂದು ಮಹಿಳೆ ತಿಳಿಸಿದರು.
‘ಕೆಲ ಹೊತ್ತಿನಲ್ಲೇ ನನ್ನ ವಾಟ್ಸ್ ಆ್ಯಪ್ ನಂಬರ್‌ಗೆ ವಿಡಿಯೊ ಕರೆ ಬಂತು. ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿ, ‘ಮಾದಕ ಪದಾರ್ಥ ಕಳ್ಳಸಾಗಣೆ ಪ್ರಕರಣದ ವಿಚಾರಣೆಗಾಗಿ ನೀವು ತಕ್ಷಣ ಮುಂಬೈಗೆ ಬರಬೇಕು’ ಎಂದರು. ‘ನಾನು ಯಾವ ಪಾರ್ಸೆಲ್ ಅನ್ನೂ ಕಳುಹಿಸಿಲ್ಲ. ಮುಂಬೈಗೆ ಬರಲಾಗದು’ ಎಂದೆ. ಹಾಗಾದರೆ ಸ್ಕೈಪ್ ಆ್ಯಪ್‌ನಲ್ಲಿ ವಿಡಿಯೊ ಕಾಲ್ ಮಾಡಿ ವಿಚಾರಣೆ ನಡೆಸುತ್ತೇವೆ. ಆದರೆ, ವಿಚಾರಣೆ ಮುಗಿಯುವವರೆಗೂ ನೀವು ಬೇರೆಯವರಿಗೆ ಕರೆ ಮಾಡುವಂತಿಲ್ಲ. ವಿಡಿಯೊ ಕಾಲ್ ಕಡಿತಗೊಳಿಸುವಂತಿಲ್ಲ. ಹಾಗೇನಾದರೂ ಮಾಡಿದರೆ ಅಲ್ಲಿಗೇ ಬಂದು ಬಂಧಿಸುತ್ತೇವೆ’ ಎಂದು ಗದರಿಸಿದ. ಅವರ ಚಲನವಲನ ನೋಡಿದರೆ, ಅವರನ್ನು ಪೊಲೀಸರಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ನಾನು ಮನೆಯಲ್ಲಿದ್ದ ಚಿನ್ನವನ್ನೆಲ್ಲಅಡ ಇಟ್ಟು ಒಟ್ಟು 18.64 ಲಕ್ಷ ಕಟ್ಟಿ ಮೋಸಹೋದೆ ’ ಎಂದು ಮಹಿಳೆ ವಿವರಿಸಿದರು.
ಇದು ಕೇವಲ ಚಿಲಿಂಬಿಯ ನಿವೃತ್ತ ಉಪನ್ಯಾಸಕಿಯೊಬ್ಬರ ಕತೆಯಲ್ಲ. ಸೈಬರ್ ವಂಚನೆಗೆ ಸಂಬಂಧಿಸಿದ ಇಂತಹ ಒಂದೆರಡು ದೂರುಗಳಾದರೂ ನಮಗೆ ನಿತ್ಯವೂ ಬರುತ್ತವೆ ಎನ್ನುತ್ತಾರೆ ಸೆನ್ ಅಪರಾಧ ಠಾಣೆಯ ಪೊಲೀಸರು.
‘ಫೆಡೆಕ್ಸ್ ಪಾರ್ಸೆಲ್‌ನಲ್ಲಿ ಮಾದಕ ಪದಾರ್ಥ ರವಾನೆಯಾಗಿದೆ ಎಂದು ನಂಬಿಸಿ ಹಣ ಕಿತ್ತ ಎಲ್ಲ ಪ್ರಕರಣಗಳಲ್ಲೂ ಅಪರಾಧಿಗಳು ಅನುಸರಿಸಿದ ತಂತ್ರಗಾರಿಕೆ ಒಂದೇ. ಅವರು ಹೆಚ್ಚಾಗಿ ಹಿರಿಯ ನಾಗರಿಕರನ್ನು, ಮಹಿಳೆಯರನ್ನು ಗರಿಯಾಗಿಸಿ ಇಂತಹ ಕೃತ್ಯ ನಡೆಸುತ್ತಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು.
‘ಆಧಾರ್ ಸಂಖ್ಯೆ ಆಧರಿತ ಪಾವತಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿ ವ್ಯಕ್ತಿಯ ಅರಿವಿಗೆ ಬಾರದಂತೆಯೇ ಅವರ ಖಾತೆಯಿಂದ ಹಣವನ್ನು ಬೇರೆ ಖಾತೆಗೆ ವರ್ಗಾಯಿಸುತ್ತಿದ್ದ ದೂರುಗಳು ಈಗ ಕಡಿಮೆ ಆಗಿಮೆ. ಜನರೂ ಎಚ್ಚೆತ್ತುಕೊಂಡು ತಮ್ಮ ಆಧಾರ್ ಖಾತೆಯಲ್ಲಿ ಬಯೋಮೆಟ್ರಿಕ್‌ಗಳನ್ನು ಲಾಕ್ ಮಾಡಿಸಿದ್ದಾರೆ. ಹಾಗಾಗಿ ವಂಚಕರು ಬೇರೆ ಬೇರೆ ತಂತ್ರ ಅನುಸರಿಸುತ್ತಿದ್ದಾರೆ. ಈ ಬಗ್ಗೆ ಎಷ್ಟು ಜಾಗೃತಿ ಮೂಡಿಸಿದರೂ ಸೈಬರ್ ಅಪರಾಧಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.
2021ರಲ್ಲಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೈಬರ್ ವಂಚನೆಗೆ ಸಂಬಂಧಿಸಿದ 107 ಪ್ರಕರಣಗಳು ದಾಖಲಾಗಿದ್ದವು. 2022ರಲ್ಲಿ ಇವುಗಳ ಪ್ರಮಾಣ 68ಕ್ಕೆ ಇಳಿದಿತ್ತು. 2023ರಲ್ಲಿ 240 ಪ್ರಕರಣಗಳು ದಾಖಲಾಗಿದ್ದವು ಎಂದು ನಗರ ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.