ಮಂಗಳೂರು: ಡಿಜಿಟಲ್ ಪ್ರಪಂಚದಲ್ಲಿ ಹೊಸತನ್ನು ಅರಸುವ ಭರದಲ್ಲಿ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೈಬರ್ ತಜ್ಞ ಡಾ. ಅನಂತ್ ಪ್ರಭು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಬಲ್ಮಠದಲ್ಲಿರುವ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ಮಂಗಳವಾರ ಆಯೋಜಿಸಿದ್ದ ‘ಸೈಬರ್ ಸುರಕ್ಷಾ ಕ್ಯಾಂಪಸ್’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಿಜಿಟಲ್ ಬಳಕೆ ವ್ಯಾಪಕವಾದಂತೆ ಅವುಗಳ ದುರುಪಯೋಗ, ಮಾಹಿತಿ ಕಳ್ಳತನ ಮಾಡಿ ಬಳಕೆದಾರರಿಗೆ ಮೋಸ ಮಾಡುವ, ಹಣ ವಂಚಿಸುವ, ದಾಖಲೆ ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ದಿನನಿತ್ಯ ಬಳಸುವ ಪ್ರಚಲಿತ ಸಾಮಾಜಿಕ ಜಾಲತಾಣಗಳು, ವಹಿವಾಟು ನಡೆಸುವ ವೆಬ್‌ಸೈಟ್‌ಗಳು ಕೂಡ ಸುರಕ್ಷಿತವಲ್ಲ ಎಂದರು. ಗ್ರೇಡ್ ‘ಇ’ ವೆಬ್‌ಸೈಟ್‌ಗಳು, ತಾಣಗಳಲ್ಲಿ ಪೋಸ್ಟ್ ಮಾಡುವ ಚಿತ್ರಗಳು ಅಥವಾ ಇನ್ನಾವುದೇ ಮಾಹಿತಿಗಳನ್ನು ನಮ್ಮ ಡಿವೈಸ್‌ನಿಂದ ಡಿಲೀಟ್ ಮಾಡಿದಾಕ್ಷಣ ಸುರಕ್ಷಿತ ಎಂದುಕೊಳ್ಳುತ್ತೇವೆ. ಆದರೆ, ಅವು ಅಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತವೆ. ಇದರ ಅರಿವಿಲ್ಲದ ಯುವಜನರು ಎಲ್ಲವನ್ನೂ ಪೋಸ್ಟ್ ಮಾಡಿ, ಕೊನೆಗೊಮ್ಮೆ ಪರಿತಪಿಸುವ ಸಂದರ್ಭ ಎದುರಾಗಬಹುದು. ಹೆಚ್ಚು ರೆಸಲ್ಯೂಷನ್ ಇರುವ ಚಿತ್ರಗಳನ್ನು ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಬೇಡಿ. ಅದು ಯಾವುದೇ ರೀತಿಯಲ್ಲೂ ದುರುಪಯೋಗ ಆಗಬಹುದು ಎಂದು ಎಚ್ಚರಿಸಿದರು.
ಅಶ್ಲೀಲ ಚಿತ್ರಗಳನ್ನು ಅಪ್‌ಲೋಡ್ ಮಾಡಿ ಬೇರೆಯವರಿಗೆ ತೊಂದರೆ ನೀಡಿದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಏಳು ವರ್ಷ ಜೈಲು ಶಿಕ್ಷೆ, ₹ 10 ಲಕ್ಷ ದಂಡ ಪಾವತಿಸಬೇಕಾಗುತ್ತದೆ. ಬೇರೆಯವರ ಪಾಸ್‌ವರ್ಡ್ ದುರುಪಯೋಗ ಮಾಡಿದರೆ, ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಸೈಬರ್ ಅಪರಾಧ ಮಾಡಿದರೆ ಕಠಿಣ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಸೈಬರ್ ವಂಚನೆಗೆ ಒಳಗಾದರೆ 1930 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದರು.
ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಮೊಹಮ್ಮದ್ ಝಹೀರ್, ‘ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್’ ಪ್ರಸರಣ ವಿಭಾಗದ ಪ್ರತಿನಿಧಿ ಲಾರೆನ್ಸ್ ಕ್ರಾಸ್ತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.