ಮಂಗಳೂರು: ವಿದೇಶಿ ರಫ್ತಿಗೆ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರನ್ನು ಉತ್ತೇಜಿಸಲು ಪ್ರಾರಂಭಿಸಿರುವ ‘ಡಾಕ್ ನಿರ್ಯಾತ್ ಕೇಂದ್ರ’ಗಳು ಮಂಗಳೂರಿನಲ್ಲೂ ಕಾರ್ಯನಿರ್ವಹಿಸುತ್ತಿವೆ. ಈ ಯೋಜನೆಯಡಿ 12 ಪಾರ್ಸೆಲ್‌ಗಳನ್ನು ಸುರಕ್ಷಿತವಾಗಿ ವಿದೇಶಕ್ಕೆ ತಲುಪಿಸಲಾಗಿದೆ.
ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಬುಧವಾರ ಇಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಂಗಳೂರು ವಿಭಾಗದ ಹಿರಿಯ ಅಧೀಕ್ಷಕ ಸುಧಾಕರ ಮಲ್ಯ ಈ ಕುರಿತು ಮಾಹಿತಿ ನೀಡಿದರು. ರಫ್ತು ಮಾಡಲು ಪರವಾನಗಿ, ಪ್ರಮಾಣಪತ್ರ, ವಸ್ತು ವಿವರ, ರಫ್ತುದಾರರ ವಿವರಗಳನ್ನು ಡಾಕ್ ನಿರ್ಯಾತ ಕೇಂದ್ರದ ಪೋರ್ಟಲ್‌ನಲ್ಲಿ ಭರ್ತಿ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ಈಗಾಗಲೇ ನಾಲ್ವರು ಗ್ರಾಹಕರು, ಗಿಡಮೂಲಿಕೆ, ಗೇರುಬೀಜ, ಯಂತ್ರದ ಭಾಗ ಸೇರಿದಂತೆ ಒಟ್ಟು 12 ಪಾರ್ಸೆಲ್‌ಗಳನ್ನು ವಿದೇಶಗಳಿಗೆ ಕಳುಹಿಸಿದ್ದಾರೆ. ಮುಖ್ಯ ಅಂಚೆ ಕಚೇರಿ, ಸುರತ್ಕಲ್, ಹಂಪನಕಟ್ಟೆ ಅಂಚೆ ಕಚೇರಿಯಲ್ಲಿ ಈ ಸೌಲಭ್ಯ ಒದಗಿಸಲಾಗಿದೆ ಎಂದರು.
228 ದೇಶಗಳಿಗೆ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ಕಲ್ಪಿಸಿದೆ. ಒಂದು ವರ್ಷದ ಹಿಂದೆ ಪ್ರಾರಂಭವಾಗಿರುವ ಈ ಯೋಜನೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದ್ದು, ಪ್ರಯೋಜನ ಪಡೆದುಕೊಳ್ಳಬೇಕು. ಸಾಮಾನ್ಯ ಸ್ಪೀಡ್ ಪೋಸ್ಟ್‌ನಂತೆ 5ರಿಂದ 7 ದಿನಗಳಲ್ಲಿ ರಫ್ತು ಮಾಡಿರುವ ಉತ್ಪನ್ನಗಳು ನಿಗದಿತ ಸ್ಥಳಕ್ಕೆ ತಲುಪುತ್ತವೆ ಎಂದರು.
ನಾಲ್ಕು ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಸೌಲಭ್ಯ ಒದಗಿಸಲಾಗಿದೆ. ಅಂಚೆ ಜನಸಂಪರ್ಕ ಅಭಿಯಾನದ ಅಡಿಯಲ್ಲಿ, ರಜೆಯ ದಿನಗಳಲ್ಲಿ ಗ್ರಾಮಾಂತರ ಪ್ರದೇಶಕ್ಕೆ ತೆರಳಿ ಆಯಾ ಊರಿನಲ್ಲೇ ಆಧಾರ್ ನೋಂದಣಿ ಮಾಡಿಕೊಡಲಾಗುತ್ತಿದೆ. ಆಧಾರ್, ಮೊಬೈಲ್ ಫೋನ್ ಜೋಡಣೆ, ಮನೆಯಿಂದಲೇ ಜೀವನ ಪ್ರಮಾಣಪತ್ರ ಸಲ್ಲಿಸುವ ಕಾರ್ಯವನ್ನೂ ಅಂಚೆ ನಿರ್ವಹಿಸುತ್ತಿದೆ. ಪಿಂಚಣಿ ಪಡೆಯುವವರು ಅಂಚೆ ಕಚೇರಿ, ಬ್ಯಾಂಕ್‌ಗೆ ಬರಲು ಸಾಧ್ಯವಾಗದಿದ್ದರೆ, ಅಂಚೆಯಣ್ಣ ಅವರ ಮನೆಗೇ ತೆರಳಿ, ಡಿಜಿಟಲ್ ಪ್ರಮಾಣಪತ್ರ ಅಪ್‌ಲೋಡ್ ಮಾಡಿಕೊಡುತ್ತಾರೆ. ಈ ಸಂಬಂಧ 348 ಜನರಿಗೆ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.
ಸಿಎಎ ಅಡಿಯಲ್ಲಿ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದವರ ದಾಖಲೆ ಪರಿಶೀಲನೆ ಹೊಣೆಯನ್ನು ಅಂಚೆ ಇಲಾಖೆಗೆ ವಹಿಸಲಾಗಿತ್ತು. ಮಂಗಳೂರು ವಿಭಾಗದಲ್ಲಿ ಎರಡು ಅರ್ಜಿಗಳು ಇದ್ದವು. ದಾಖಲೆ ಪರಿಶೀಲಿಸಿ, ಅವುಗಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಜನನ ಮತ್ತು ಮರಣ ಪ್ರಮಾಣಪತ್ರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಪ್ರತಿ ತಿಂಗಳು 500ಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲಾಗುತ್ತದೆ. ಇಲ್ಲಿನ ಮಾದರಿಯನ್ನು ಅಂಚೆ ಇಲಾಖೆ ಬೇರೆ ಜಿಲ್ಲೆಗಳಲ್ಲೂ ಅಳವಡಿಸಿದೆ ಎಂದು ಸುಧಾಕರ ಮಲ್ಯ ಹೇಳಿದರು.
ಅಧಿಕಾರಿಗಳಾದ ದಿನೇಶ್ ಪಿ, ವಿಲ್ಸನ್ ಡಿಸೋಜ, ಯತಿನ್ ಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪುಷ್ಪರಾಜ್ ಬಿ.ಎನ್., ಆನಂದ ಶೆಟ್ಟಿ ಇದ್ದರು.
Cut-off box - ಪತ್ರ ಬರಹ ಸ್ಪರ್ಧೆ ಅಂಚೆ ಇಲಾಖೆಯು ‘ಬರಹಗಾರಿಕೆಯಲ್ಲಿ ಖುಷಿ; ಡಿಜಿಟಲ್ ಯುಗದಲ್ಲಿ ಪತ್ರದ ಮಹತ್ವ’ ಕುರಿತು ರಾಷ್ಟ್ರ ಮಟ್ಟದ ಪತ್ರ ಬರಹದ ಸ್ಪರ್ಧೆ ಹಮ್ಮಿಕೊಂಡಿದೆ. 18ರ ವಯೋಮಾನದ ಒಳಗಿನವರು ಮತ್ತು 18ರ ವಯೋಮಾನದ ಮೇಲಿನವರು ಎಂದು ಎರಡು ವಿಭಾಗ ಮಾಡಲಾಗಿದೆ. ಆಸಕ್ತರು 1000 ಪದಗಳ ಒಳಗೆ ಪತ್ರ ಬರೆದು ಮಂಗಳೂರು ವಿಭಾಗದ ಹಿರಿಯ ಅಧೀಕ್ಷಕರ ಕಚೇರಿಗೆ ಡಿಸೆಂಬರ್ 14ರ ಒಳಗೆ ತಲುಪುವಂತೆ ಕಳುಹಿಸಬಹುದು ಸುಧಾಕರ ಮಲ್ಯ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.