ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಗುರುವಾರ ದಿನವಿಡೀ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗಿದೆ.
ಜಿಲ್ಲೆಯ ನೇತ್ರಾವತಿ, ಕುಮಾರಧಾರಾ, ಫಲ್ಗುಣಿ, ನಂದಿನಿ, ಶಾಂಭವಿ ನದಿಗಳು ಗುರುವಾರ ತುಂಬಿ ಹರಿದವು. ನೇತ್ರಾವತಿ ನದಿಯು ಬಂಟ್ವಾಳ ಬಳಿ ಅಪಾಯದಮಟ್ಟವನ್ನು ಮೀರಿ ಹರಿದಿದೆ.
ಉಪ್ಪಿನಂಗಡಿಯ ಬಳಿ ನೇತ್ರಾವತಿಯಲ್ಲಿ ನೀರಿನ ಹರಿವು 29.1 ಮೀಟರ್‌ವರೆಗೆ (ಅಪಾಯದ ಮಟ್ಟ 29 ಮೀ.) ತಲುಪಿತ್ತು. ಶಂಭೂರಿನ ಬಳಿ ನದಿ ನೀರು ಅಪಾಯದ ಮಟ್ಟವನ್ನು ಮೀರಿದ್ದು, ಎಎಂಆರ್ ಅಣೆಕಟ್ಟೆಯ ಎಲ್ಲ ಗೇಟ್‌ಗಳನ್ನು ತೆರೆಯಲಾಗಿದೆ. 7 ಮೀ. ಎತ್ತರದಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ತುಂಬೆ ಅಣೆಕಟ್ಟೆಯಲ್ಲಿ ಸದ್ಯಕ್ಕೆ 6 ಮೀ. ವರೆಗೆ ಮಾತ್ರ ನೀರು ಸಂಗ್ರಹಿಸಲಾಗುತ್ತದೆ. ಈ ಅಣೆಕಟ್ಟೆಯ ಎಲ್ಲ 30 ಗೇಟ್‌ಗಳನ್ನು ತೆರೆಯಲಾಗಿದೆ. ಬಂಟ್ವಾಳದ ಬಳಿ ಈ ಮಳೆಗಾಲದಲ್ಲಿ ಪ್ರಥಮ ಬಾರಿಗೆ ನೇತ್ರಾವತಿ ನೀರಿನ ಮಟ್ಟ 7.8 ಮೀ.ದಾಟಿದೆ. ಪಾಣೆಮಂಗಳೂರು ಸಮೀಪದ ಆಲಡ್ಕದಲ್ಲಿ ಮುಳುಗಡೆ ಭೀತಿ ಎದುರಿಸುತ್ತಿದ್ದ ತಗ್ಗು ಪ್ರದೇಶದ 10 ಕುಟುಂಬಗಳನ್ನು ಸ್ಥಳಾಂತರಗೊಳಿಸಲಾಗಿದೆ.
ಬಂಟ್ವಾಳ ತಾಲ್ಲೂಕಿನ ಕೊಳ್ನಾಡು ಗ್ರಾಮದ ಸುರಿಬೈಲು-ಖಂಡಿಗ ರಸ್ತೆ ನಡುವಿನ ಕಿರು ಸೇತುವೆಯಡಿ ಅಳವಡಿಸಿದ್ದ ಮೋರಿ ಮಳೆಗೆ ಕೊಚ್ಚಿ ಹೋಗಿದೆ. ಬೆಳ್ತಂಗಡಿ ತಾಲ್ಲೂಕಿನ ಮುಂಡಾಜೆ ಪರಿಸರದಲ್ಲಿ ನೇತ್ರಾವತಿ ಉಕ್ಕಿಹರಿದು ತೆಂಗು ಹಾಗೂ ಕಂಗಿನ ತೋಟಗಳು ಜಲಾವೃತವಾಗಿದ್ದವು.
ಗುರುವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆ ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 12 ಸೆಂ.ಮೀ, ಮಾಣಿ ಮತ್ತು ಧರ್ಮಸ್ಥಳದಲ್ಲಿ ತಲಾ 11, ಪಣಂಬೂರು ಮತ್ತು ಮಂಗಳೂರಿನಲ್ಲಿ ತಲಾ 10, ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ 19, ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ 19 ಹಾಗೂ ಕಳಸದಲ್ಲಿ 11 ಸೆಂ.ಮೀ ಮಳೆಯಾಗಿದೆ.
ಇನ್ನೂ ಮೂರು ದಿನ ರಾಜ್ಯದ ಕರಾವಳಿಯಾದ್ಯಂತ ಗುಡುಗಿನಿಂದ ಕೂಡಿದ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇದೇ 19 ಮತ್ತು 20ರಂದು ರೆಡ್ ಅಲರ್ಟ್ ಹಾಗೂ 21ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.