ADVERTISEMENT

ದಕ್ಷಿಣ ಕನ್ನಡ ಜಿಲ್ಲೆಗೆ ₹ 22 ಸಾವಿರ ಕೋಟಿ ಅನುದಾನ: ಸಂಸದ ನಳಿನ್‌ಕುಮಾರ್

ವೃತ್ತ ಅಭಿವೃದ್ಧಿ ಸೇರಿ ಐದು ಯೋಜನೆಗಳಿಗೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 11:31 IST
Last Updated 18 ಅಕ್ಟೋಬರ್ 2022, 11:31 IST
ಮಂಗಳೂರು ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ನಳಿನ್‌ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿದರು.
ಮಂಗಳೂರು ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ನಳಿನ್‌ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿದರು.   

ಮಂಗಳೂರು: ಕಳೆದ ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ₹ 22 ಸಾವಿರ ಕೋಟಿ ಅನುದಾನ ದೊರೆತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಮಂಗಳೂರು ಮುಂಚೂಣಿಯಲ್ಲಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಸ್ಮಾರ್ಟ್‍ಸಿಟಿ ಯೋಜನೆಯಡಿ ಹಾಗೂ ಕರ್ಣಾಟಕ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ಇವುಗಳ ಸಿಎಸ್‍ಆರ್ ನಿಧಿಯಡಿ ವಿವಿಧ ಐದು ಯೋಜನೆಗಳಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ₹ 2 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಮಂಗಳೂರಿನಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರ ಆಗಿದ್ದಾಗ 2008ರಲ್ಲಿ ಕಾಮಗಾರಿಗೆ ₹ 100 ಕೋಟಿ ಮಂಜೂರುಗೊಳಿಸಿದ್ದರು. ನಂತರ ನಿರಂತರವಾಗಿ ನಗರದ ಅಭಿವೃದ್ಧಿ ಅನುದಾನ ಬರುತ್ತಿದೆ ಎಂದರು.

ಇನ್ನು ಎರಡು ವರ್ಷಗಳಲ್ಲಿ ಮಂಗಳೂರು ಸಂಪರ್ಕಿಸುವ ಎಲ್ಲ ರಸ್ತೆಗಳು ದ್ವಿಪಥವಾಗಿ ಮಾರ್ಪಾಡಾಗಲಿವೆ. ಪಂಪ್‌ವೆಲ್‌ನ ಮಹಾವೀರ ವೃತ್ತ ಪ್ರಮುಖ ಪ್ರವೇಶದ್ವಾರ ಆಗಲಿದೆ. ಬಿ.ಸಿ.ರೋಡ್– ಪಣಂಬೂರು ಹೆದ್ದಾರಿ ಆರು ಪಥವಾಗಿ ಅಭಿವೃದ್ಧಿಗೊಳ್ಳಲಿದೆ. ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಪಡೀಲಿಗೆ ಸ್ಥಳಾಂತರಗೊಳ್ಳಲಿದೆ. ಪಂಪ್‌ವೆಲ್‌ನಲ್ಲಿ ಅಂದಾಜು ₹ 500 ಕೋಟಿ ವೆಚ್ಚದಲ್ಲಿ ಸರ್ವಿಸ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯ ಅನುಮತಿ ದೊರೆತಿದೆ. ನ್ಯಾಯಾಲಯದ ತಡೆ ಇರುವ ಕಾರಣ ನಂತೂರು ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್‌ ಕರೆಯಲು ವಿಳಂಬವಾಗಿದೆ ಎಂದು ಹೇಳಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ‘2024ರ ವೇಳೆಗೆ ಮಂಗಳೂರು ನಗರವು ಇತರ ಮಹಾನಗರಗಳಿಗೆ ಸರಿಸಾಟಿಯಾಗಿ ನಿಲ್ಲುವ ಮಟ್ಟಕ್ಕೆ ಬೆಳೆಯಲಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ವೃತ್ತಗಳು ಅಭಿವೃದ್ಧಿಗೊಳ್ಳಲಿವೆ. ಕರ್ಣಾಟಕ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡದ ನೆರವಿನಲ್ಲಿ ಎರಡು ವೃತ್ತಗಳು ಅಭಿವೃದ್ಧಿಗೊಳ್ಳುತ್ತಿದ್ದು, ಇನ್ನೆರಡು ವೃತ್ತಗಳಿಗೂ ನೆರವಾಗಬೇಕು’ ಎಂದು ವಿನಂತಿಸಿದರು.

ADVERTISEMENT

ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಕೀಲ ಕಾವ, ಸದಸ್ಯರಾದ ಪ್ರೇಮಾನಂದ ಶೆಟ್ಟಿ, ದಿವಾಕರ ಪಾಂಡೇಶ್ವರ, ಸಂದೀಪ್ ಗರೋಡಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಸ್ಮಾರ್ಟ್‍ಸಿಟಿ ಎಂಡಿ ಪ್ರಶಾಂತ್ ಮಿಶ್ರಾ, ಕರ್ಣಾಟಕ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ನಿರ್ಮಲ್‌ಕುಮಾರ್, ರವಿಚಂದ್ರನ್, ಶ್ರೀನಿವಾಸ ದೇಶಪಾಂಡೆ, ಸತ್ಯನಾರಾಯಣ, ಮೂಡಾ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಕ್ರೈಡೈ ಅಧ್ಯಕ್ಷ ಪುಷ್ಪರಾಜ್ ಜೈನ್, ಅಧಿಕಾರಿಗಳಾದ ಅರುಣ್ ಪ್ರಭಾ, ಲಿಂಗೇಗೌಡ, ಬ್ಯಾಂಕ್ ಆಫ್ ಬರೋಡ ಅಧಿಕಾರಿಗಳಾದ ಗಾಯತ್ರಿ, ಗೋಪಾಲಕೃಷ್ಣ ಇದ್ದರು.

ಶಿಲಾನ್ಯಾಸ ನೆರವೇರಿಸಿದ ಕಾಮಗಾರಿಗಳು
ಕರ್ಣಾಟಕ ಬ್ಯಾಂಕ್‍ನ ಸಿಎಸ್‍ಆರ್ ನಿಧಿಯಿಂದ ₹ 40 ಲಕ್ಷ ವೆಚ್ಚದಲ್ಲಿ ಪಂಪ್‍ವೆಲ್‍ನಲ್ಲಿ ಮಹಾವೀರ ವೃತ್ತ ಅಭಿವೃದ್ಧಿ, ಬ್ಯಾಂಕ್ ಆಫ್ ಬರೋಡದ ಸಿಎಸ್‍ಆರ್ ನಿಧಿಯಡಿ ₹ 40 ಲಕ್ಷ ವೆಚ್ಚದಲ್ಲಿ ಎ.ಬಿ.ಶೆಟ್ಟಿ ವೃತ್ತ ಅಭಿವೃದ್ಧಿ, ವಾರ್ಡ್ 46ರ ಪಾಂಡೇಶ್ವರ ಮುಖ್ಯ ರಸ್ತೆಯ ಶಿವನಗರ ಬಳಿ ರಾಜಾ ಕಾಲುವೆಗೆ ₹ 2 ಕೋಟಿ ವೆಚ್ಚದಲ್ಲಿ 18 ಮೀಟರ್ ಉದ್ದ ಹಾಗೂ 9 ಮೀಟರ್ ಅಗಲದಲ್ಲಿ ಬೃಹತ್ ಸೇತುವೆ ನಿರ್ಮಾಣ, ಎಮ್ಮೆಕೆರೆಯಲ್ಲಿ ವಾರ್ಡ್ ನಂಬರ್ 45, 56, 57 ಮತ್ತು 58ರ ಪಾಂಡೇಶ್ವರ ಮುಖ್ಯ ರಸ್ತೆಯಿಂದ ಬೋಳಾರ ಲೀವೆಲ್ ಜಂಕ್ಷನ್‌ವರೆಗೆ ₹ 4.25 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ರಸ್ತೆ ವಿಸ್ತರಣೆ, ಚರಂಡಿ, ಪಾದಚಾರಿ ಮಾರ್ಗ ನಿರ್ಮಾಣ, ವಾರ್ಡ್ ನಂ. 41ರ ರಾಷ್ಟ್ರಕವಿ ಗೋವಿಂದ ಪೈ ವೃತ್ತದಿಂದ ಮಹಾಮಾಯಾ ರಸ್ತೆವರೆಗಿನ ಪ್ರಮುಖ ಕೂಡು ರಸ್ತೆ ₹ 2.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.