ADVERTISEMENT

ದಕ್ಷಿಣ ಕನ್ನಡ: ಜಿಲ್ಲೆಗೆ ಬೇಕಿದೆ ಮೂರು ಅಗ್ನಿಶಾಮಕ ಠಾಣೆ

ಬೇಸಿಗೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಬೆಂಕಿ ಅನಾಹುತ * ಪರಿಸ್ಥಿತಿ ನಿಭಾಯಿಸಲು ಬೇಕಿದೆ ಸೌಕರ್ಯ

ಪ್ರವೀಣ ಕುಮಾರ್ ಪಿ.ವಿ.
Published 31 ಜನವರಿ 2023, 19:30 IST
Last Updated 31 ಜನವರಿ 2023, 19:30 IST

ಮಂಗಳೂರು: ಬೇಸಿಗೆ ಕಾವೇರುತ್ತಿದ್ದಂತೆಯೇ ಜಿಲ್ಲೆಯಲ್ಲಿ ಬೆಂಕಿ ಅನಾಹುತಗಳ ಸಂಖ್ಯೆಯೂ ಜಾಸ್ತಿ ಆಗುತ್ತದೆ. ಸುಡು ಬಿಸಿಲ ಝಳ ಹೆಚ್ಚಳವಾದಂತೆಯೇ ಜಿಲ್ಲೆಯ ಬೆಟ್ಟ–ಗುಡ್ಡಗಳಲ್ಲಿ ಬೆಂಕಿ ಕಾಣಿಸಿಕೊಳ್ಳವುದು ಮಾಮೂಲಿ ವಿದ್ಯಮಾನ. ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಅವಘಡಗಳು ಫೆಬ್ರುವರಿ, ಮಾರ್ಚ್‌ ತಿಂಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತವೆ. ಅದನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲೆಯ ಅಗ್ನಿಶಾಮಕ ದಳವನ್ನು ಬಲಪಡಿಸುವ ಅಗತ್ಯವಿದೆ.

ಜಿಲ್ಲೆಯಲ್ಲಿ ಮಂಗಳೂರು ನಗರಲ್ಲಿ ಎರಡು ಹಾಗೂ ಉಳಿದ ತಾಲ್ಲೂಕುಗಳಲ್ಲಿ ತಲಾ ಒಂದು ಅಗ್ನಿಶಾಮಕ ಠಾಣೆಗಳಿದ್ದವು. ಮೂಡುಬಿದಿರೆಯಲ್ಲಿ ಒಂದು ಅಗ್ನಿ ಶಾಮಕ ಠಾಣೆ ಹೆಚ್ಚುವರಿಯಾಗಿತ್ತು. ಮೂಲ್ಕಿ, ಕಡಬ ಹಾಗೂ ಉಳ್ಳಾಲ ತಾಲ್ಲೂಕುಗಳು ರಚನೆಯಾಗಿದ್ದು, ಈ ಮೂರು ತಾಲ್ಲೂಕುಗಳಿಗೂ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಬೇಕು ಎಂಬ ಬೇಡಿಕೆ ಇದೆ.

ಅಗ್ನಿಶಾಮಕ ಠಾಣೆಯಲ್ಲಿ, ಕಚೇರಿ ಕಟ್ಟಡ, ಅಗ್ನಿಶಾಮಕ ವಾಹನ ನಿಲುಗಡೆ ವ್ಯವಸ್ಥೆ, ನೀರಿನ ಸಂಗ್ರಹಕ್ಕೆ ತೊಟ್ಟಿ, ಸಿಬ್ಬಂದಿಯ ಕವಾಯತು ನಡೆಸಲು ಮೈದಾನದ ವ್ಯವಸ್ಥೆ ಇರಬೇಕಾಗುತ್ತದೆ. ಒಂದೊಂದು ಠಾಣೆಗೂ 5 ತಲಾ ಎಕರೆ ಜಾಗ ಬೇಕಾಗುತ್ತದೆ. ಅಷ್ಟೊಂದು ಜಾಗ ಲಭ್ಯ ಇಲ್ಲದಿದ್ದರೂ ಕನಿಷ್ಠ ಎರಡೂವರೆ ಎಕರೆಯಷ್ಟಾದರೂ ಜಾಗ ಬೇಕು.

ADVERTISEMENT

ಮೂಲ್ಕಿ ಪ್ರದೇಶದಲ್ಲಿ ಬೆಂಕಿ ನಂದಿಸಲು ಕದ್ರಿ ಅಥವಾ ಮೂಡುಬಿದಿರೆ ಠಾಣೆಗಳ ವಾಹನಗಳನ್ನು ಬಳಸಲಾಗುತ್ತಿದೆ. ಮೂಲ್ಕಿ ತಾಲ್ಲೂಕಿನ ಮೂಡುಬಿದಿರೆಯಲ್ಲಿ ಒಂದು ಅಗ್ನಿ ಶಾಮಕ ಠಾಣೆ ಇದೆ. ಆದರೆ, ಮೂಲ್ಕಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೆ ಮೂಡುಬಿದಿರೆಯಿಂದ ವಾಹನ ತಲುಪಲು ಹೆಚ್ಚು ಸಮಯ ಬೇಕಾಗುತ್ತದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಅಗ್ನಿ ಕರೆಗಳನ್ನು ನಿಭಾಯಿಸುತ್ತಿರುವುದು ಕದ್ರಿ ಠಾಣೆ. ಇದರ ಮೇಲಿನ ಒತ್ತಡ ಕಡಿಮೆ ಮಾಡಬೇಕಾದರೆ ಮೂಲ್ಕಿ ಪ್ರದೇಶದಲ್ಲಿ ಮತ್ತೊಂದು ಠಾಣೆಯನ್ನು ಸ್ಥಾಪಿಸಬೇಕು ಎಂಬ ಪ್ರಸ್ತಾವ ಇಲಾಖೆ ಮುಂದಿದೆ. ಮೂಲ್ಕಿಯಲ್ಲೂ ಜಾಗ ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಉಳ್ಳಾಲವು ನಗರದಿಂದ 20 ಕಿ.ಮೀ. ವ್ಯಾಪ್ತಿಯಲ್ಲಿದೆ. ಈ ತಾಲ್ಲೂಕಿನಲ್ಲಿ ಹೆಚ್ಚಿನ ಅಗ್ನಿಕರೆಗಳು ಬರುವುದು ಮುಡಿಪು– ಫಜೀರು ಪ್ರದೇಶದಿಂದ. ಹಾಗಾಗಿ ಫಜೀರು ಪ್ರದೇಶದಲ್ಲಿ ಎರಡೂವರೆ ಎಕರೆ ಜಾಗವನ್ನು ಅಗ್ನಿಶಾಮಕ ಠಾಣೆಗಾಗಿ ಗುರುತಿಸಲಾಗಿದೆ.

ಕಡಬ ತಾಲ್ಲೂಕಿನಲ್ಲಿ ಮರ್ದಾಳ ಗ್ರಾಮದಲ್ಲಿ ಸರ್ಕಾರಿ ಕಚೇರಿಗಳಿಗೆ ಜಾಗ ಕಾಯ್ದಿರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲೇ ಅಗ್ನಿಶಾಮಕ ಠಾಣೆಗೂ ಜಾಗ ಗುರುತಿಸಲಾಗುತ್ತಿದೆ.

ಮೂರು ತಾಲ್ಲೂಕುಗಳಲ್ಲೂ ಅಗ್ನಿಶಾಮಕ ಠಾಣೆಗೆ ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಜಾಗದ ಹಸ್ತಾಂತರ ಪ್ರಕ್ರಿಯೆ ಇನ್ನೂ ನಡೆದಿಲ್ಲ ಎನ್ನುತ್ತವೆ ಇಲಾಖೆಯ ಮೂಲಗಳು.

ಬೇಕಿವೆ ಹೆಚ್ಚುವರಿ ಅಗ್ನಿಶಾಮಕ ವಾಹನಗಳು: ಪ್ರಸ್ತುತ ಸುಳ್ಯ ಹಾಗೂ ಬಂಟ್ವಾಳ ಅಗ್ನಿಶಾಮಕ ಠಾಣೆಗಳಲ್ಲಿ ತಲಾ ಒಂದು ಅಗ್ನಿಶಾಮಕ ವಾಹನಗಳು ಮಾತ್ರ ಇವೆ. ಈ ಠಾಣೆಗಳಿಗೆ ಹೆಚ್ಚುವರಿ ವಾಹನಗಳ ಅಗತ್ಯವಿದೆ. ಬಂಟ್ವಾಳ ಅಗ್ನಿಶಾಮಕ ಠಾಣೆಯು ವರ್ಷದಲ್ಲಿ 100ಕ್ಕೂ ಹೆಚ್ಚು ಅಗ್ನಿ ಕರೆಗಳನ್ನು ನಿಭಾಯಿಸುತ್ತಿದೆ. ಹಾಗಾಗಿ ಈ ಠಾಣೆಗೆ ಒಂದಕ್ಕಿಂತ ಹೆಚ್ಚು ವಾಹನಗಳ ಅಗತ್ಯವಿದೆ.

ಪುತ್ತೂರು, ಬೆಳ್ತಂಗಡಿ ಹಾಗೂ ಮೂಡುಬಿದಿರೆ ಠಾಣೆಗಳಲ್ಲಿ ತಲಾ ಎರಡು ಅಗ್ನಿಶಾಮಕ ವಾಹನಗಳಿವೆ. ಕದ್ರಿ ಮತ್ತು ಪಾಂಡೇಶ್ವರ ಠಾಣೆಗಳಲ್ಲಿ ಮೂರು ಅಗ್ನಿಶಾಮಕ ವಾಹನಗಳಿವೆ. ಇದರಲ್ಲಿ ಒಂದು 16ಸಾವಿರ ಲೀಟರ್‌ನ ವಾಟರ್‌ ಬೌಸರ್‌ ವ್ಯವಸ್ಥೆಯ ವಾಹನವೂ ಸೇರಿದೆ.

ಪಶುಪಕ್ಷಿ ರಕ್ಷಣೆಗೂ ಸೈ
‘ಜಿಲ್ಲೆಯಲ್ಲಿ ಪಶು ಪಕ್ಷಗಳ ಸಂರಕ್ಷಣೆಯಲ್ಲೂ ಅಗ್ನಿಶಾಮಕ ಸಿಬ್ಬಂದಿಯ ಪಾತ್ರ ಪ್ರಮುಖವಾದುದು. ಜಾನುವಾರು ಬಾವಿಗೆ ಬಿದ್ದಾಗಲೂ ನಮಗೇ ಕರೆ ಬರುವುದು ಹೆಚ್ಚು. ನಮ್ಮ ಬಳಿ ಅವುಗಳನ್ನು ಮೇಲಕ್ಕೆತ್ತಲು ಬೇಕಾದ ಹಗ್ಗ ಮತ್ತಿತರ ಸಲಕರಣೆಗಳಿವೆ. ನುರಿತ ಸಿಬ್ಬಂದಿಯೂ ಇದ್ದಾರೆ. ನೂರಾರು ಜಾನುವಾರುಗಳನ್ನು ನಮ್ಮ ಇಲಾಖೆಯ ಸಿಬ್ಬಂದಿಯೇ ಸಂರಕ್ಷಣೆ ಮಾಡಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್‌ ಕುಮಾರ್‌.

ಅಗ್ನಿಸುರಕ್ಷತೆ–ನಾಗರಿಕರಿಗೆ ತರಬೇತಿ
ಬೆಂಕಿ ಹೊತ್ತಿಕೊಂಡಾಗ ಎಷ್ಟು ಬೇಗ ನಂದಿಸಲಾಗುತ್ತದೋ ಅಷ್ಟು ಅನಾಹುತ ಕಡಿಮೆ ಆಗುತ್ತದೆ. ಕಾರ್ಖಾನೆ, ಕೈಗಾರಿಕೆ, ಕಚೇರಿ ಅಷ್ಟೇ ಏಕೆ ಅಡುಗೆ ಮನೆಯಲ್ಲಿ ಕೆಲಸ ಮಾಡುವವರಿಗೂ ತುರ್ತಾಗಿ ಬೆಂಕಿ ನಂದಿಸುವ ತಂತ್ರಗಳು ತಿಳಿದಿದ್ದರೆ ದೊಡ್ಡ ಅನಾಹುತಗಳನ್ನು ತಪ್ಪಿಸಬಹುದು. ಈ ಸಲುವಾಗಿಯೇ ಬೆಂಕಿ ಅವಘಡಗಳನ್ನು ತಪ್ಪಿಸುವ ಮುನ್ನೆಚ್ಚರಿಕೆಗಳು ಹಾಗೂ ಬೆಂಕಿ ಬಿದ್ದಾಗ ಅದನ್ನು ನಿಯಂತ್ರಿಸುವ ಬಗ್ಗೆ ವಿಶೇಷ ತರಬೇತಿಯನ್ನು ಇಲಾಖೆ ಒದಗಿಸುತ್ತದೆ. ‘ಅಗ್ನಿ ಸುರಕ್ಷತೆ ಬಗ್ಗೆ ನಾವು ಎರಡು ದಿನದ ತರಬೇತಿ ಒದಗಿಸಿ ಪ್ರಮಾಣಪತ್ರವನ್ನೂ ನೀಡುತ್ತೇವೆ. ಮಾಲ್‌, ಕೈಗಾರಿಕೆ, ಸಿನಿಮಾ ಮಂದಿರ ಮೊದಲಾದ ಕಡೆ ಕೆಲಸ ಮಾಡುವವರು ಇಂತಹ ತರಬೇತಿ ಪಡೆಯಲೇಬೇಕು. ಇತರ ಆಸಕ್ತರಿಗೂ ತರಬೇತಿ ನೀಡುತ್ತೇವೆ’ ಎಂದು ಅಧಿಕಾರಿಗಳು ತಿಳಿಸಿದರು.

ಸೆರಗಿನಲ್ಲಿ ಬೆಂಕಿಯುಂಡೆ....
ಅಪಾಯಕಾರಿ ರಾಸಾಯನಿಕ ತಯಾರಿಸುವ ಅನೇಕ ಕೈಗಾರಿಕೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈ ರಾಸಾಯನಿಕ ಉತ್ಪಾದನೆ ಘಟಕಗಳಲ್ಲಿ ಅವಘಡ ಸಂಭವಿಸುವ ಅಪಾಯ ಸದಾ ತೂಗುಗತ್ತಿಯಂತಿದೆ. ಇಂತಹ ರಾಸಾಯನಿಕಗಳ ಸಾಗಾಟ ಮತ್ತೊಂದು ಸವಾಲು. ಸಣ್ಣ ಅಚಾತುರ್ಯವೂ ಭಾರಿ ಅನಾಹುತವನ್ನು ತಂದೊಡ್ಡಬಲ್ಲುದು. ಉಪ್ಪಿನಂಗಡಿ ಸಮೀಪದ ಪೆರ್ನೆಯಲ್ಲಿ 2013ರ ಏಪ್ರಿಲ್‌ನಲ್ಲಿ ಅನಿಲ ಟ್ಯಾಂಕರ್‌ ಸ್ಫೋಟಗೊಂಡು 10 ಮಂದಿಯ ಬಲಿ ಪಡೆದಿತ್ತು. ಈ ಅಗ್ನಿ ಅನಾಹುತದ ಕಹಿ ನೆನಪು ಇನ್ನೂ ಮಾಸಿಲ್ಲ. ಆ ಬಳಿಕವೂ ಟ್ಯಾಂಕರ್‌ ಉರುಳಿ ಬಿದ್ದ ಅನೇಕ ಘಟನೆಗಳು ನಡೆದಿವೆ. ಆದರೆ ಅನಾಹುತ ತಪ್ಪಿಸುವಲ್ಲಿ ಅಗ್ನಿಶಾಮಕ ಇಲಾಖೆ ಯಶಸ್ವಿಯಾಗಿದೆ.

‘ಇತ್ತೀಚಿನ ವರ್ಷಗಳಲ್ಲಿ ಟ್ಯಾಂಕರ್ ಪಲ್ಟಿಯಾಗುವ ಪ್ರಕರಣಗಳು ಸ್ವಲ್ಪ ಕಡಿಮೆ ಆಗಿವೆ. ಟ್ಯಾಂಕರ್‌ ಸುರಕ್ಷಿತ ಚಾಲನೆಗೂ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಅನೇಕ ಕೈಗಾರಿಕಾ ಪ್ರದೇಶದಲ್ಲಿ ಅಪಾಯಕಾರಿ ರಾಸಾಯನಿಕ ಸೋರಿಕೆಯಂತಹ ಅವಘಡ ಸಂಭವಿಸಿದರೆ, ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸನ್ನದ್ಧತೆ ಮಾಡಿಕೊಳ್ಳುವ ಅಗತ್ಯ ಇದೆ. ಈ ಕೈಗಾರಿಕೆಗಳೆಲ್ಲವೂ ಸ್ವಂತ ಅಗ್ನಿಶಾಮಕ ವ್ಯವಸ್ಥೆಯನ್ನು ಹೊಂದಿವೆ. ಆದರೆ, ಪರಿಸ್ಥಿತಿ ಕೈಮೀರುವ ಹಂತ ತಲುಪಿದರೆ ಆಸುಪಾಸಿನ ನಿವಾಸಿಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ಅವಘಡಗಳು ಎದುರಾದರೆ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ನಾಗರಿಕರಲ್ಲೂ ಜಾಗೃತಿ ಮೂಡಿಸು ಕೆಲಸವಾಗಬೇಕಿದೆ’ ಎಂದು ಅವರು ತಿಳಿಸಿದರು.

*
ಜಿಲ್ಲೆಗೆ ಮೂರು ಹೊಸ ಅಗ್ನಿಶಾಮಕ ಠಾಣೆಗಳ ಅಗತ್ಯವಿದೆ. ಅವುಗಳಿ ಮಂಜೂರಾತಿ ಪಡೆಯುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸುತ್ತಿದ್ದೇವೆ
-ಭರತ್ ಕುಮಾರ್‌, ದಕ್ಷಿಣ ಕನ್ನಡ ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.