ಸುಳ್ಯ: ತಾಲ್ಲೂಕಿನ ಅಜ್ಜಾವರದಲ್ಲಿ ತಾಯಿಯಿಂದ ದೂರವಾಗಿದ್ದ ಮೂರು ತಿಂಗಳ ಮರಿ ಆನೆ ಮರಿಯನ್ನು ಕೊಡಗಿನ ದುಬಾರೆಯ ಆನೆ ಶಿಬಿರಕ್ಕೆ ಶನಿವಾರ ಸ್ಥಳಾಂತರಿಸಲಾಯಿತು.
ಅಜ್ಜಾವರದ ಸಂತೋಷ್ ಅವರ ತೋಟದಲ್ಲಿದ್ದ ನೀರು ತುಂಬಿದ ಹೊಂಡಕ್ಕೆ (ಪುಟ್ಟ ಕೆರೆ) ಬಿದ್ದಿದ್ದ ಎರಡು ಮರಿಯಾನೆಗಳು ಸೇರಿ ನಾಲ್ಕು ಆನೆಗಳನ್ನು ಗುರುವಾರ ರಕ್ಷಣೆ ಮಾಡಿ ಸಮೀಪದ ಕಾಡಿಗೆ ಬಿಡಲಾಗಿತ್ತು. ಅದರಲ್ಲಿ ಮೂರು ತಿಂಗಳ ಮರಿಯಾನೆಯು ಹಿಂಡನ್ನು ಸೇರಿಕೊಳ್ಳದೇ ಅದೇ ದಿನ ಸಂಜೆ ಮತ್ತೆ ಊರಿಗೆ ಮರಳಿತ್ತು. ಅರಣ್ಯ ಇಲಾಖೆ ಸಿಬ್ಬಂದಿಯು ವಲಯ ಅರಣ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಎರಡು ದಿನಗಳಿಂದ ಅದರ ಆರೈಕೆ ಮಾಡಿದ್ದರು. ಆದರೂ ತಾಯಿ ಆನೆಯು ಮರಿಯನ್ನು ಹುಡುಕಿಕೊಂಡು ಬರಲಿಲ್ಲ.
‘ತಾಯಿ ಆನೆಯು ಬಂದು ಕರೆದೊಯ್ಯಲಿ ಎಂಬ ಕಾರಣಕ್ಕೆ ಮೂರು ದಿನ ಮರಿಯಾನೆಯನ್ನು ಅಲ್ಲೇ ಇಟ್ಟಿದ್ದೆವು. ಆದೆ ತಾಯಿ ಆನೆ ಬರಲೇ ಇಲ್ಲ. ಮರಿಯಾನೆಯನ್ನು ಇನ್ನಷ್ಟು ದಿನ ಅಲ್ಲೇ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹೆಚ್ಚಿನ ಆರೈಕೆ ಸಲುವಾಗಿ ಅದನ್ನು ದುಬಾರೆಯ ಆನೆ ಶಿಬಿರಕ್ಕೆ ರವಾನಿಸುತ್ತಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ದಿನೇಶ್ ಕುಮಾರ್ ‘ಪ್ರಜಾವಾಣಿ‘ಗೆ ತಿಳಿಸಿದರು.
‘ಆನೆ ಮರಿಯು ಆಹಾರ ಸೇವಿಸುತ್ತಿದೆ. ತಾಯಿ ಹಾಲು ಕುಡಿಯುತ್ತಿದ್ದ ಅದಕ್ಕೆ ಲ್ಯಾಕ್ಟೊಮಿಕ್ಸ್ ನೀಡಿದ್ದೇವೆ. ಆನೆ ಮರಿಯು ಆರೋಗ್ಯಯುತವಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.