ಬಂಟ್ವಾಳ: ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಅಜ್ಜಿಬೆಟ್ಟು ಸರ್ಕಾರಿ ಪ್ರೌಢಶಾಲೆ ಕಟ್ಟಡದಲ್ಲಿ 2007ರಲ್ಲಿ ತಾತ್ಕಾಲಿಕ ನೆಲೆಯಲ್ಲಿ ಏಳು ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಬಿ.ಸಿ.ರೋಡು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇದೀಗ 529 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರಥಮ ವರ್ಷದಲ್ಲಿ 60, ದ್ವಿತೀಯ ವರ್ಷ 48, ವಾಣಿಜ್ಯ ವಿಭಾಗದಲ್ಲಿ ಪ್ರಥಮ ವರ್ಷ 152, ದ್ವಿತೀಯ ವರ್ಷ 121, ಕಲಾ ವಿಭಾಗದಲ್ಲಿ ಪ್ರಥಮ ವರ್ಷ 83, ದ್ವಿತೀಯ ವರ್ಷ 65 ವಿದ್ಯಾರ್ಥಿಗಳು ದಾಖಲಾಗಿದ್ದು, 255 ಮಂದಿ ಬಾಲಕರು ಮತ್ತು 273 ಬಾಲಕಿಯರು ಇದ್ದಾರೆ.
ಪ್ರಸಕ್ತ ಬಿ.ಸಿ. ರೋಡು- ಪಾಣೆಮಂಗಳೂರು ರಸ್ತೆ ನಡುವಿನ ಗೂಡಿನಬಳಿ ಎಂಬಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಕಾಲೇಜು ಮುನ್ನಡೆಯುತ್ತಿದ್ದು, 2013ರಲ್ಲಿ ಸಚಿವರಾಗಿದ್ದ ಬಿ.ರಮಾನಾಥ ರೈ ಮತ್ತು ಕಾಲೇಜಿನ ಪ್ರಾಂಶುಪಾಲೆ ಸರಸ್ವತಿ ಭಟ್ ಅವರ ಮುತುವರ್ಜಿಯಿಂದ ಕಾಲೇಜಿಗೆ ಸ್ವಂತ ಕಟ್ಟಡ ಹಾಗೂ ಇತರ ಸವಲತ್ತು ಒದಗಿಸಲಾಗಿತ್ತು.
ಪ್ರಾಂಶುಪಾಲರ ಬೇಡಿಕೆಯಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರಾಡ್ರಿಗಸ್ ಸಹಕಾರದಲ್ಲಿ ಪೆಟ್ರೊನೆಟ್ ಎಂ.ಎಚ್.ಬಿ. ಲಿಮಿಟೆಡ್ ವತಿಯಿಂದ ರಾಸಾಯನಿಕ ವಿಜ್ಞಾನ ಮತ್ತು ಜೀವಶಾಸ್ತ್ರ ಪ್ರಯೋಗಾಲಯ ನಿರ್ಮಾಣಗೊಂಡಿದೆ
ನಿಟ್ಟೆ ಕೆ.ಎಸ್. ಹೆಗ್ಡೆ ಶಿಕ್ಷಣ ಸಂಸ್ಥೆ ಮತ್ತು ಕರ್ಣಾಟಕ ಬ್ಯಾಂಕ್ ನೆರವಿನಿಂದ ಕಚೇರಿ ಕೊಠಡಿ ನಿರ್ಮಾಣ, ಎಂಆರ್‌ಪಿಎಲ್‌ನಿಂದ 40 ಜತೆ ಬೆಂಚ್– ಡೆಸ್ಕ್, ಶೆಲ್ ನಿಂದ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆಯಾಗಿ ದೊರೆತಿದೆ.
ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ 2022ರಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ₹1 ಕೋಟಿ ವೆಚ್ಚದಲ್ಲಿ ವಿಸ್ತೃತ ಕಟ್ಟಡ ಒದಗಿಸಿದ್ದಾರೆ.
ಪ್ರತಿ ವರ್ಷ ಫಲಿತಾಂಶವೂ ಶೇ 90ರ ಮೇಲೆ ಇದ್ದು, ಜನವರಿಯಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಎಲ್ಲ ತರಗತಿಯಲ್ಲಿ ವಿದ್ಯಾರ್ಥಿಗಳು ಭರ್ತಿಯಾಗುತ್ತಿದ್ದಾರೆ. ಶಿಸ್ತು ಮತ್ತು ಶೈಕ್ಷಣಿಕ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್, ಮೊದಲಾದ 6 ಕ್ಲಬ್ ಸಕ್ರಿಯವಾಗಿವೆ. ಎಲ್ಲ ತರಗತಿಗಳಿಗೂ ಸಿಸಿಟಿವಿ ಕ್ಯಾಮೆರಾ, ಧ್ವನಿವರ್ಧಕ ವ್ಯವಸ್ಥೆ ಅಳವಡಿಸಲಾಗಿದೆ. ಈಗಾಗಲೇ ಕಂಪ್ಯೂಟರ್ ವಿಜ್ಞಾನ ಮಂಜೂರಾಗಿದ್ದು, ಹೆಚ್ಚಿನ ಕೊಠಡಿ ಸಹಿತ ಬೋಧಕರು ಮತ್ತು ಪ್ರಯೊಗಾಲಯ ಅಗತ್ಯವಿದೆ ಎಂದು ಪ್ರಾಂಶುಪಾಲ ಮಹಮ್ಮದ್ ಯೂಸುಫ್ ತಿಳಿಸಿದರು. ಕಾಲೇಜಿನಲ್ಲಿ ಪ್ರಾಂಶುಪಾಲರ ಸಹಿತ ಆರು ಮಂದಿ ಖಾಯಂ ಉಪನ್ಯಾಸಕರು ಇದ್ದಾರೆ. ಹತ್ತು ಮಂದಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ದ್ವಿತೀಯ ದರ್ಜೆ ಗುಮಾಸ್ತರು, ಗ್ರೂಪ್ ಡಿ ಸಿಬ್ಬಂದಿ ಇಲ್ಲ. ಸುಸಜ್ಜಿತ ಗ್ರಂಥಾಲಯ ಮತ್ತು ಆಟದ ಮೈದಾನ ಅಗತ್ಯವಿದ್ದು, ಇಲ್ಲಿನ ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಕೊಠಡಿ, ಆವರಣಗೋಡೆ, ರಂಗ ಮಂದಿರ ಬೇಕು ಎನ್ನುತ್ತಾರೆ ಮಕ್ಕಳ ಪೋಷಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.