ADVERTISEMENT

ದಕ್ಷಿಣ ಕನ್ನಡ ಕೋಮುವಾದದ ಲ್ಯಾಬ್‌: ಸಿದ್ದರಾಮಯ್ಯ ಟೀಕೆ

ಉಳ್ಳಾಲ, ಮುಡಿಪು ಬ್ಲಾಕ್ ಕಾಂಗ್ರೆಸ್ ಸಾರ್ವಜನಿಕ ಜನಜಾಗೃತಿ ಸಭೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 6:19 IST
Last Updated 6 ಜನವರಿ 2023, 6:19 IST
ಹರೇಕಳದಲ್ಲಿ ನಡೆದ ಉಳ್ಳಾಲ, ಮುಡಿಪು ಬ್ಲಾಕ್ ಕಾಂಗ್ರೆಸ್ ಸಾರ್ವಜನಿಕ ಜನಜಾಗೃತಿ ಸಭೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು (ಎಡಚಿತ್ರ). ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥಸ್ವಾಮಿ ದೇವಾಲಯಕ್ಕೆ ಗುರುವಾರ ಭೇಟಿ ನೀಡಿದ ಸಿದ್ದರಾಮಯ್ಯ ಅವರು ನಾರಾಯಣ ಗುರು ಪ್ರತಿಮೆಗೆ ಗೌರವ ಸಲ್ಲಿಸಿದರು           –ಪ್ರಜಾವಾಣಿ ಚಿತ್ರ
ಹರೇಕಳದಲ್ಲಿ ನಡೆದ ಉಳ್ಳಾಲ, ಮುಡಿಪು ಬ್ಲಾಕ್ ಕಾಂಗ್ರೆಸ್ ಸಾರ್ವಜನಿಕ ಜನಜಾಗೃತಿ ಸಭೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು (ಎಡಚಿತ್ರ). ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥಸ್ವಾಮಿ ದೇವಾಲಯಕ್ಕೆ ಗುರುವಾರ ಭೇಟಿ ನೀಡಿದ ಸಿದ್ದರಾಮಯ್ಯ ಅವರು ನಾರಾಯಣ ಗುರು ಪ್ರತಿಮೆಗೆ ಗೌರವ ಸಲ್ಲಿಸಿದರು           –ಪ್ರಜಾವಾಣಿ ಚಿತ್ರ   

ಕೊಣಾಜೆ: ಕೋಮುವಾದದ ಬೀಜ ದಕ್ಷಿಣ ಕನ್ನಡದ ಲ್ಯಾಬ್‌ನಲ್ಲಿ ಉತ್ಪತ್ತಿ ಯಾಗುತ್ತಿದ್ದು ಈ ಕಾರಣದಿಂದಲೇ ಇದು ಹಿಂದುತ್ವದ ಫ್ಯಾಕ್ಟರಿಯಂತಾಗಿದೆ ಎಂದು ವಿಧಾನಸಭೆಯಲ್ಲಿ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಹರೇಕಳ ಕಡವಿನ ಬಳಿಯ ಯು.ಟಿ ಫರೀದ್ ವೇದಿಕೆಯಲ್ಲಿ ಗುರುವಾರ ಆಯೋಜಿಸಿದ್ದ ಸಾರ್ವಜನಿಕ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರಕ್ಕೆ ಬಂದ ನಂತರ ಭರವಸೆಗಳನ್ನು ಮರೆತ ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಅವರಿಗೆ ಅಸಮಾನತೆಯ ಸಮಾಜ ಮಾತ್ರ ಬೇಕಿದೆ ಎಂದು ದೂರಿದರು.

‘ಜಾತಿ ವ್ಯವಸ್ಥೆ ಇದ್ದರೆ ಒಂದು ಜಾತಿಯನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟಲು ಸಾಧ್ಯ. ಅಸಮಾನತೆಯಿದ್ದರೆ ದೌರ್ಜನ್ಯ ಮಾಡಲು ಸುಲಭವಾಗುತ್ತದೆ. ಗ್ರಾಮ ಪಂಚಾಯಿತಿ ಸದಸ್ಯನಾಗಲೂ ನಾಲಾಯಕ್ ಅಗಿರುವ, ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವ ಅನಂತ ಕುಮಾರ್ ಹೆಗಡೆಯನ್ನು ಮೋದಿ ಮತ್ತು ಅಮಿತ್‌ ಶಾ ಅಂತಹವರೇ ಬೆಂಬಲಿಸಿದ್ದಾರೆ‌’ ಎಂದು ಅವರು ಹೇಳಿದರು.

ADVERTISEMENT

ರಾಜ್ಯಕ್ಕೆ ಅಡಿಕೆ ಕಳ್ಳಸಾಗಾಣಿಕೆ ಯಲ್ಲೂ ಬರುತ್ತಿದ್ದು ಇದರಿಂದ ಅಡಿಕೆ ನಾಶದತ್ತ ಸಾಗುತ್ತಿದೆ. ಗುತ್ತಿಗೆಯಲ್ಲಿ ಆಗಿರುವ ಭ್ರಷ್ಟಾಚಾರದ ತನಿಖೆ ಆಗಿಲ್ಲ. ಈಗಲೂ ಗುತ್ತಿಗೆದಾರರ ನಿಗೂಢ ಸಾವು ಆಗುತ್ತಿದೆ ಎಂದು ಅವರು ದೂರಿದರು.

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ,‌ ದೇಶ ಮಾರಾಟವಾಗುವ ಮೊದಲು ಎಚ್ಚೆತ್ತು ಕೊಳ್ಳಬೇಕು. ಬಿಜೆಪಿಯವರ ಕೈಗೆ ಅಧಿಕಾರ ಕೊಟ್ಟರೆ ಅವರು ಪೆನ್ ಬದಲು ಮಕ್ಕಳಿಗೆ ಚೂರಿ, ತಲ್ವಾರ್ ಕೊಡುತ್ತಾರೆ. ದೇಶ ಕಾಪಾಡಬೇಕಾದರೆ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.

ವಿಧಾನಸಭೆಯಲ್ಲಿ ಪ್ರತಿಪಕ್ಷ ಉಪ‌ನಾಯಕ ಯು.ಟಿ. ಖಾದರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮುಖಂಡರಾದ ಹರೀಶ್ ಕುಮಾರ್, ಕೋಡಿಜಾಲ್ ಇಬ್ರಾಹಿಂ, ಕಣಚೂರು ಮೋನು, ಪ್ರಶಾಂತ್ ಕಾಜವ, ಸದಾಶಿವ ಉಳ್ಳಾಲ, ನಿಖೇತ್ ರಾಜ್ ಮೌರ್ಯ, ಹರ್ಷ ರಾಜ್ ಮುದ್ಯ, ಮಹಮ್ಮದ್ ಮೋನು, ಇನಾಯತ್ ಅಲಿ, ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಹರೇಕಳ ಗ್ರಾಮ ಪಂಚಾಯತಿ ಅಧ್ಯಕ್ಷ ಬದ್ರುದ್ದೀನ್ ಹರೇಕಳ, ಮಹಮ್ಮದ್ ಮುಸ್ತಫಾ ಹರೇಕಳ ಇದ್ದರು. ಮಮತಾ ಡಿ.ಎಸ್.ಗಟ್ಟಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.