ಪುತ್ತೂರು: ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಅನುಕೂಲವಾಗುವಂತೆ ಹವಾಮಾನ ಆಧಾರಿತ ಫಸಲ್ ಬಿಮಾ ಯೋಜನೆಗೆ ಪ್ರೀಮಿಯಂ ಪಾವತಿಯ ದಿನ ಮುಕ್ತಾಯವಾಗುತ್ತಿದ್ದರೂ ಇದುವರೆಗೆ ಯಾವುದೇ ರೀತಿಯ ಮಾಹಿತಿ ಅಡಿಕೆ ಬೆಳೆಗಾರರಿಗೆ ಲಭ್ಯವಾಗಿಲ್ಲ. ಹೀಗಾಗಿ ತಕ್ಷಣವೇ ಸರ್ಕಾರ ಗಮನಹರಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಆಗ್ರಹಿಸಿದೆ.
ಅಡಿಕೆ ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆ ವಿಮೆಗೆ ಜೂನ್ ಅಂತ್ಯದೊಳಗೆ ಪ್ರೀಮಿಯಂ ಪಾವತಿ ಮಾಡಲು ಅವಕಾಶ ಇತ್ತು. ಆದರೆ, ಈ ಬಾರಿ ಇನ್ನೂ ನಿಗದಿಯಾಗಿಲ್ಲ. ಹೀಗಾಗಿ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂಘವು ಮುಖ್ಯಮಂತ್ರಿ, ತೋಟಗಾರಿಕೆ, ಕೃಷಿ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಇ–ಮೇಲ್ ಮೂಲಕ ಮನವಿ ಸಲ್ಲಿಸಿದೆ.
ಅಡಿಕೆ ಬೆಳೆಯು ಹವಾಮಾನ ಆಧಾರಿತವಾಗಿಯೇ ನಿರ್ಧಾರವಾಗುತ್ತದೆ. ಭಾರಿ ಮಳೆಯಾದರೆ ಅಡಿಕೆಗೆ ಕೊಳೆರೋಗ ಬಂದು ಫಸಲು ನಾಶವಾಗುತ್ತದೆ. ಇಂಥ ಸಂದರ್ಭದಲ್ಲಿ ಬೆಳೆಗಾರರು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಕೊಳೆರೋಗ ಪರಿಹಾರಕ್ಕಾಗಿ ಸರ್ಕಾರ ಮೊರೆ ಹೋಗಬೇಕಾಗುತ್ತದೆ. ಆದರೆ, ಇಂಥ ವಿಮಾ ಯೋಜನೆಗಳು ಜಾರಿಯಾದರೆ ಸ್ವಲ್ಪಮಟ್ಟಿನ ಬೆಂಬಲ ಅಡಿಕೆ ಬೆಳೆಗಾರರಿಗೆ ಸಿಕ್ಕಿದಂತಾಗುತ್ತದೆ. ಹೀಗಾಗಿ ಉಪಯುಕ್ತವಾಗಿರುವ ಹವಾಮಾನ ಆಧಾರಿತ ಫಸಲ್ ಬಿಮಾ ಯೋಜನೆ ಅಡಿಕೆ ಬೆಳೆಗಾರರಿಗೂ ಅನ್ವಯವಾಗಬೇಕು ಎಂದು ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಹಾಗೂ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ತಿಳಿಸಿದ್ದಾರೆ.
ಇದುವರೆಗೆ ಈ ಯೋಜನೆಗೆ ಪ್ರೀಮಿಯಂ ಪಾವತಿ ಮಾಡಲು ಮಾಹಿತಿ ಅಡಿಕೆ ಬೆಳೆಗಾರರಿಗೆ ಲಭ್ಯವಾಗಿಲ್ಲ. ತಕ್ಷಣವೇ ಸರ್ಕಾರ ಗಮನಹರಿಸಿ, ಸಮಯಾವಕಾಶದೊಂದಿಗೆ ಹವಾಮಾನ ಆಧಾರಿತ ವಿಮಾ ಯೋಜನೆ ಅಡಿಕೆ ಬೆಳೆಗಾರರಿಗೆ ಜಾರಿಯಾಗಬೇಕು ಹಾಗೂ ಪ್ರೀಮಿಯಂ ಪಾವತಿಗೆ ಕಾಲಾವಕಾಶ ಸಿಗುವಂತಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.