ಪುತ್ತೂರು: ‘ತಾಲ್ಲೂಕಿನಲ್ಲಿ ಒಟ್ಟು 13 ಸಾವಿರ ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದ ಅರ್ಜಿಗಳು ವಿಲೇವಾರಿಗೆ ಬಾಕಿಯಿದ್ದು, ಎಲ್ಲವನ್ನೂ ಹಂತ ಹಂತವಾಗಿ ವಿಲೇವಾರಿ ಮಾಡಲಾಗುವುದು. ಅಕ್ರಮ ಸಕ್ರಮ ಕಡತ ವಿಲೇವಾರಿಗೆ ಸಂಬಂಧಿಸಿ ಯಾರಾದರೂ ಲಂಚ ಕೇಳಿದರೆ ತಕ್ಷಣ ನನ್ನ ಗಮನಕ್ಕೆ ತನ್ನಿ. ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇನೆ. ಭ್ರಷ್ಟಾಚಾರ ನಡೆಸಲು ಬಿಡುವುದಿಲ್ಲ’ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಕ್ರಮ ಸಕ್ರಮ ಬೈಠಕ್ ಹಾಗೂ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಚುನಾವಣಾ ಪ್ರಚಾರದ ವೇಳೆ ನನ್ನ ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನು ಎಂದೂ ತಪ್ಪಲಾರೆ. ಗ್ರಾಮದ ಪ್ರತಿ ಮನೆ ಮನೆಗೂ ಹಕ್ಕು ಪತ್ರ ತಲುಪಿಸುವ ಕೆಲಸವನ್ನು ಮಾಡಿಯೇ ಸಿದ್ಧ’ ಎಂದು ಅವರು ಹೇಳಿದರು.
‘ನಾನು ರಾಜಕೀಯಕ್ಕೆ ಬರುವ ಮೊದಲೇ ಅಕ್ರಮ ಸಕ್ರಮ ಮತ್ತು 94ಸಿ ಮತ್ತು 94ಸಿಸಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ತಿಳಿದಿತ್ತು. ಶಾಸಕನಾಗಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು, ಭ್ರಷ್ಟಾಚಾರದ ವಿಚಾರದಲ್ಲಿ ಎಂದೂ ರಾಜಿಯಿಲ್ಲ. ಅಕ್ರಮ ಸಕ್ರಮ 94 ಸಿ ಹಕ್ಕು ಪತ್ರ ವಿತರಣೆಯಲ್ಲೂ ರಾಜಕೀಯ ಮಾಡುವುದಿಲ್ಲ. ಅರ್ಹರೆಲ್ಲರಿಗೂ ಹಕ್ಕು ಪತ್ರ ಕೊಡುವುದೇ ನನ್ನ ಉದ್ದೇಶ’ ಎಂದರು.
ಇದುವರೆಗೆ ರಾಜ್ಯದಲ್ಲಿ ಎಲ್ಲೂ ಅಕ್ರಮ ಸಕ್ರಮ ಬೈಠಕ್ ನಡೆದಿಲ್ಲ. ಮೊದಲ ಬಾರಿಗೆ ಪುತ್ತೂರಿನಲ್ಲಿ ಇಂದು ಬೈಠಕ್ ನಡೆದಿದ್ದು, ಅಕ್ರಮ ಸಕ್ರಮ ಹಕ್ಕು ಪತ್ರ ವಿತರಣೆಗೆ ಚಾಲನೆ ನೀಡಲಾಗಿದೆ. 12 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. 19 ಮಂದಿಗೆ 94ಸಿ ಹಕ್ಕು ಪತ್ರವನ್ನು ವಿತರಣೆ ಮಾಡುತ್ತಿದ್ದೇವೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ 94 ಸಿ ಹಕ್ಕು ಪತ್ರ ದೊರೆಯಲಿದೆ ಎಂದು ಹೇಳಿದರು.
ತಹಶೀಲ್ದಾರ್ ಪುರಂದರ ಮಾತನಾಡಿ, ಈ ಬಾರಿ ಆನ್ ಲೈನ್ ಮೂಲಕ ಅರ್ಜಿ ವಿಲೇವಾರಿ ಮಾಡಲಾಗುತ್ತದೆ. 94 ಸಿ ಹಕ್ಕು ಪತ್ರವನ್ನೂ ನೀಡಲಾಗುತ್ತದೆ ಎಂದರು.
ಅಕ್ರಮ ಸಕ್ರಮ ಸಮಿತಿಯ ಸದಸ್ಯ ಮಹಮ್ಮದ್ ಬಡಗನ್ನೂರು, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಮಾತನಾಡಿದರು.
ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖ ಆಳ್ವ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮ ಮೇನಾಲ ಭಾಗವಹಿಸಿದ್ದರು. ಗ್ರಾಮ ಆಡಳಿತಾಧಿಕಾರಿ ರಾಧಾಕೃಷ್ಣ ಸ್ವಾಗತಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.