ADVERTISEMENT

₹700 ಕೂಲಿಗಾಗಿ ಜೀವ ಪಣಕ್ಕಿಟ್ಟು ಕೆಲಸ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 6:08 IST
Last Updated 4 ಜುಲೈ 2024, 6:08 IST
<div class="paragraphs"><p>ಮಣ್ಣಿನಡಿ ಸಿಲುಕಿದ್ದ ಕಾರ್ಮಿಕನ ರಕ್ಷಣೆ ಮಾಡಲಾಯಿತು.</p></div>

ಮಣ್ಣಿನಡಿ ಸಿಲುಕಿದ್ದ ಕಾರ್ಮಿಕನ ರಕ್ಷಣೆ ಮಾಡಲಾಯಿತು.

   

ಮಂಗಳೂರು: ‘ತಂದೆಯನ್ನು ಕಳೆದುಕೊಂಡ ಬಳಿಕ ಕುಟುಂಬವನ್ನು ಸಾಕುವ ಸಂಪೂರ್ಣ ಜವಾವ್ದಾರಿ ಹೊತ್ತಿದ್ದ ಯುವಕ ಅವನು. ಕಳೆದ ಏಪ್ರಿಲ್‌ನಲ್ಲಿ ಊರಿಗೆ ತೆರಳಿ, ತಂಗಿಯ ಮದುವೆ ಮಾಡಿಸಿದ್ದ. 20 ದಿನಗಳ ಹಿಂದಷ್ಟೇ ಕೆಲಸಕ್ಕೆ ಮರಳಿದ್ದ. ಮಣ್ಣಿನಡಿ ಅವನೀಗ ಹೇಗೆ ಸಂಕಟ ಪಡುತ್ತಿದ್ದಾನೋ ಏನೋ.... ’

ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಚಂದನ್‌ ಕುಮಾರ್‌ ಹತ್ತಿರದ ಬಂಧು ಪಪ್ಪು ಬೈಠಾ ಅವರು ಹೀಗೆ ಹೇಳುವಾಗ ಅವರ ಧ್ವನಿ ನಡುಗುತ್ತಿತ್ತು. ಕಣ್ಣಾಲಿಗಳು ತೇವ ಗೊಂಡಿದ್ದವು.

ADVERTISEMENT

ಬಲ್ಮಠದ ‘ರೋಹನ್ ಸ್ಯೂಟ್ಸ್ ಕಮರ್ಷಿಯಲ್ ಆ್ಯಂಡ್ ಫುಲ್ಲಿ ಫರ್ನಿಷ್ಡ್ ಸ್ಟುಡಿಯೊ’ ಕಟ್ಟಡ ಸಂಕೀರ್ಣದ ಕಾಮಗಾರಿ ವೇಳೆ ತಳಪಾಯದ ತಡೆಗೋಡೆ ಪಕ್ಕದ ಕುಸಿದ ಮಣ್ಣಿನಡಿ ಸಿಲುಕಿದ್ದ ಚಂದನ್‌ ದೇಹವನ್ನು ಹೊರ ತೆಗೆಯಲು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಿನ್ನೂ ಹರಸಾಹಸಪಡುತ್ತಿದ್ದರು. ಕಾರ್ಮಿಕ ರಾಜ್‌ ಕುಮಾರ್ ಅವರನ್ನು ಜೀವಂತವಾಗಿ ರಕ್ಷಣೆ ಮಾಡಿದ ರೀತಿಯಲ್ಲೇ, ಚಂದನ್‌ ಜೀವವನ್ನೂ ಉಳಿಸಬಹುದೆಂಬ ಆಶೆ ಇತ್ತು. ಆದರೆ, ಕೆಲವೇ ಹೊತ್ತಿನಲ್ಲಿ ಆ ಆಶೆಯೂ ‘ಮಣ್ಣು’ ಪಾಲಾಯಿತು. ‘ಚಂದನ್‌ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಕೈಗೂಡಲೇ ಇಲ್ಲ.

‘ಚಂದನ್‌ ಆರೇಳು ವರ್ಷಗಳಿಂದ ಮಂಗಳೂರಿನಲ್ಲಿ ವಾಟರ್ ಪ್ರೂಫಿಂಗ್‌ ಕೆಲಸ ಮಾಡುತ್ತಿದ್ದಾರೆ. ಈ ಕೆಲಸದಲ್ಲಿ ಅವರು ಪರಿಣಿತರು. ಬಲ್ಮಠದ ಈ ಕಟ್ಟಡ ಸಂಕೀರ್ಣದಲ್ಲಿ ವಾಟರ್ ಪ್ರೂಫಿಂಗ್‌ ಕೆಲಸವನ್ನು ಬುಧವಾರವಷ್ಟೇ ಆರಂಭಿಸಿದ್ದರು. ಅವರ ಜೊತೆ ರಾಜ್‌ಕುಮಾರ್‌ನನ್ನು ಕರೆದುಕೊಂಡು ಬಂದಿದ್ದರು’ ಎಂದು ಪಪ್ಪು ತಿಳಿಸಿದರು.

‘ನಾನು ಇವತ್ತು ನಂತೂರಿನ ಕಟ್ಟಡವೊಂದರಲ್ಲಿ ವಾಟರ್‌ ಫ್ರೂಫಿಂಗ್‌ ಕೆಲಸಕ್ಕೆ ತೆರಳಿದ್ದೆ. ಬೆಳಿಗ್ಗೆ 10 ಗಂಟೆಗೆ ಚಂದನ್ ಜೊತೆ ಮಾತನಾಡಿದ್ದೆ. ಆದರೆ ಮಧ್ಯಾಹ್ನ 1ಗಂಟೆ ಸುಮಾರಿಗೆ ಅವರು ಮಣ್ಣಿನಡಿ ಸಿಲುಕಿರುವುದು ಗೊತ್ತಾಯಿತು. ಮನಸ್ಸು ಕೇಳಲಿಲ್ಲ. ತಕ್ಷಣವೇ ಇಲ್ಲಿಗೆ ಧಾವಿಸಿದೆ’ ಎಂದರು.

‘ಚಂದನ್‌ಗೆ ಐದು ವರ್ಷದ ಮಗ, ಎಂಟು ವರ್ಷದ ಮಗಳು, ಪತ್ನಿ ಹಾಗೂ ತಾಯಿ ಇದ್ದಾರೆ’ ಎಂದು ಪಪ್ಪು ಬೈಠಾ ತಿಳಿಸಿದರು.

ಉತ್ತರ ಪ್ರದೇಶದ ಪಾರಸಿಗೂ ಮಂಗಳೂರಿಗೂ 2000 ಕಿ.ಮೀ.ಗೂ ಹೆಚ್ಚು ದೂರವಿದೆ. ಬಿಹಾರ ಹಾಗೂ ಉತ್ತರ ಪ್ರದೇಶದ ಗಡಿಭಾಗದ ಗ್ರಾಮಗಳ 24 ಮಂದಿ ಅಷ್ಟು ದೂರದಿಂದ ಬಂದು ಇಲ್ಲಿ ದೊಡ್ಡ ದೊಡ್ಡ ಕಟ್ಟಡಗಳ ತಳಪಾಯದ ತಡೆಗೋ‌ಡೆಯಲ್ಲಿ ನೀರು ಸೋರಿಕೆ ತಡೆಯುವ (ವಾಟರ್‌ಫ್ರೂಫಿಂಗ್‌) ಕೆಲಸದಲ್ಲಿ ತೊಡಗಿದೆ. ‘ನಾವು 24 ಮಂದಿಯೂ ಕೊಟ್ಟಾರಚೌಕಿ ಬಳಿ ಮಾಲೆಮಾರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ’ ಎಂದು ಕಾರ್ಮಿಕ ಗುಲ್ಹನ್ ಸಿಂಗ್ ತಿಳಿಸಿದರು.

‘ಇಲ್ಲಿ ಮಳೆ ಜಾಸ್ತಿ ಇರುವುದರಿಂದ ಹಾಗೂ ಬಹುಮಹಡಿಕಟ್ಟಡಗಳು ನಿರ್ಮಾಣವಾಗುವುದರಿಂದ ವಾಟರ್‌ ಫ್ರೂಫಿಂಗ್‌ ಕೆಲಸಕ್ಕೆ ಬೇಡಿಕೆ ಜಾಸ್ತಿ ಇದೆ. ನಮಗೆ ಈ ಕೆಲಸಕ್ಕೆ ದಿನಕ್ಕೆ ₹ 600ರಿಂದ ₹ 700 ಸಂಬಳ ಕೊಡುತ್ತಾರೆ. ಹತ್ತು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ಈ ಕೆಲಸದಲ್ಲಿ ಅಪಾಯ ತುಸು ಜಾಸ್ತಿ. ಆದರೆ, ಇಂತಹ ಅವಘಡ ನಮ್ಮ ಪಾಲಿಗೆ ಇದೇ ಮೊದಲು’ ಎಂದರು.

ಮಣ್ಣಿನಡಿ ಸಿಲುಕಿದ್ದು ಹೇಗೆ?: ‘ತಳಪಾಯದ ತಡೆಗೋಡೆ ನಿರ್ಮಿಸಿದ ಬಳಿಕವೂ ಮಣ್ಣಿನ ಧರೆಗೆ ಸುಮಾರು ಎರಡು ಅಡಿ 3 ಅಡಿಗಳಷ್ಟು ಅಂತರವಿದೆ. ಈ ಜಾಗದಲ್ಲಿ ರಾಜ್‌ ಕುಮಾರ್‌ ಹಾಗೂ ಚಂದನ್ ವಾಟರ್ ಫ್ರೂಫಿಂಗ್‌ ಕೆಲಸ ಮಾಡುತ್ತಿದ್ದರು. ಇದಕ್ಕಾಗಿ ನಿವೇಶನದ ಪಶ್ಚಿಮ ದಿಕ್ಕಿನ ತಡೆಗೋಡೆ ಬಳಿ ರಾಸಾಯನಿಕಗಳನ್ನು ಬಳಿಯುವಾಗ ಪಕ್ಕದ ಧರೆ ಬೆಳಿಗ್ಗೆ 11.30ರ ಸುಮಾರಿಗೆ ‌ಕುಸಿದಿತ್ತು. ಅವರು ನೆಲಮಟ್ಟದಿಂದ ಸುಮಾರು 20 ಅಡಿ ಆಳದಲ್ಲಿ ಮಣ್ಣಿನಡಿ ಸಿಲುಕಿದ್ದರು. ಘಟನೆ ನಡೆಯುವಾಗ ತಳಪಾಯದ ಇನ್ನೊಂದು ಬದಿಯಲ್ಲಿ ಬೇರೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು’ ಎಂದು ಭದ್ರತಾ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಮಳೆಗಾಲದಲ್ಲಿ ಕಾರ್ಮಿಕರ ಸುರಕ್ಷತೆಗೆ ಕ್ರಮಗಳನ್ನು ಕೈಗೊಳ್ಳಬೇಕು, ನಿಯಮ ಉಲ್ಲಂಘಿಸುವ ಬಿಲ್ಡರ್‌ಗಳು, ಗುತ್ತಿಗೆದಾರರನ್ನು, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ಇಂತಹ ಘಟನೆಗಳಿಗೆ ಹೊಣೆಗಾರರನ್ನಾಗಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಎಂದು ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಕುಟುಂಬಕ್ಕಾಗಿ ಶಿಕ್ಷಣ ತೊರೆದ’

‘ಮಣ್ಣಿನಡಿ ಸಿಲುಕಿ ರಕ್ಷಣೆಗೆ ಒಳಗಾದ ರಾಜ್‌ಕುಮಾರ್‌ ಬಿಹಾರದ ರೋಹ್ಟಾಸ್‌ ಜಿಲ್ಲೆಯ ಅಕ್ಹೊರಾ ಗ್ರಾಮದ ಧವನಿಯಾ ಊರಿನವರು. ಅವರ ತಂದೆಯ ಮಾನಸಿಕ ಸ್ಥಿತಿ ಸರಿ ಇಲ್ಲ. ತಾಯಿ ಕೂಲಿ ಕೆಲಸ ಮಾಡುತ್ತಾರೆ. ಕುಟುಂಬಕ್ಕೆ ಜಮೀನೂ ಇಲ್ಲ. ಕುಟುಂಬವನ್ನು ಪೊರೆಯಲು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದ. 2 ತಿಂಗಳ ಈಚೆಗಷ್ಟೇ ವಾಟರ್‌ಫ್ರೂಫಿಂಗ್‌ ಕೆಲಸಕ್ಕೆ ಇಲ್ಲಿಗೆ ಬಂದಿದ್ದ‘ ಎಂದು ಯುವಕನ ಸಮೀಪದ ಬಂಧು ಗುಲ್ಹನ್ ಸಿಂಗ್ ತಿಳಿಸಿದರು.

ತುದಿಗಾಲಲ್ಲಿ ನಿಲ್ಲಿಸಿದ ರಕ್ಷಣಾ ಕಾರ್ಯ!

ಮಣ್ಣನಡಿ ಸಿಲುಕಿದ್ದ ಕಾರ್ಮಿಕರ ರಕ್ಷಣಾ ಕಾರ್ಯ ಸಾರ್ವಜನಿಕರು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಮಣ್ಣು ಕುಸಿತ ಸಂಭವಿಸಿದ ಕಟ್ಟಡದ ಬಳಿ ಸೇರಿದ್ದ ನೂರಾರು ಮಂದಿ, ‘ಏನಾಯಿತು’ ಎಂದು ಪೊಲೀಸ್‌ ಅಧಿಕಾರಿಗಳನ್ನು, ಎನ್‌ಡಿಆರ್‌ಎಫ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಆಗಾಗ ಬಂದು ವಿಚಾರಿಸಿದರು.

ಮಧ್ಯಾಹ್ನ 11.30ರ ಸುಮಾರಿಗೆ ಮಣ್ಣು ಕುಸಿದಿತ್ತು. 20 ನಿಮಿಷದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವಾ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ನಗರದಲ್ಲೇ ಬೀಡು ಬಿಟ್ಟಿರುವ ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ಎಫ್‌ ತಂಡಗಳನ್ನು ಬಳಿಕ ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು.  ತಜ್ಞ ವೈದ್ಯರ ತಂಡವನ್ನು, ಜೀವ ರಕ್ಷಕ ವ್ಯವಸ್ಥೆ ಹೊಂದಿದ್ದ ಎರಡು ಆಂಬುಲೆನ್ಸ್‌ಗಳನ್ನು ಸಜ್ಜಾಗಿ ನಿಲ್ಲಿಸಲಾಗಿತ್ತು. ವೈದ್ಯರ ತಂಡವು ಮಣ್ಣಿನಡಿ ಸಿಲುಕಿದ್ದ ಚಂದನ್‌ಗೆ ಆಮ್ಲಜನಕ ಪೂರೈಸುವ ಪ್ರಯತ್ನವನ್ನೂ ಮಾಡಿತು. ರಕ್ಷಣಾ ಸಿಬ್ಬಂದಿ ತಡೆಗೋಡೆಯಲ್ಲಿ ರಂಧ್ರ ಕೊರೆದು, ಕಾರ್ಮಿಕ ಸಿಲುಕಿದ್ದ ಸ್ಥಳದಲ್ಲಿ ಗಾಳಿಯಾಡುವಂತೆ ಮಾಡಿದರು. ದೇಹವನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸಪಡುತ್ತಿದ್ದರೆ, ರಕ್ಷಣಾ ಕಾರ್ಯವನ್ನು ವೀಕ್ಷಿಸುತ್ತಿದ್ದ ಸಾರ್ವಜನಿಕರು ಚಡಪಡಿಸುತ್ತಿದ್ದರು. ಹಲವರಂತೂ ಮಧ್ಯಾಹ್ನ 1 ಗಂಟೆಯಿಂದ ರಕ್ಷಣಾ ಕಾರ್ಯ ಮುಗಿವವರೆಗೂ (ರಾತ್ರಿ 7.30) ಸ್ಥಳದಲ್ಲೇ ಕಾದಿದ್ದರು. ಕೆಲವರು ಸಮೀಪದ ಕಟ್ಟಡಗಳ ಮಹಡಿಗಳನ್ನು ಏರಿ ರಕ್ಷಣಾ ಕಾರ್ಯವನ್ನು ನೋಡಿದರು. 

ನಿರ್ಮಾಣ ಕಾಮಗಾರಿ ನಿಲ್ಲಿಸಿ: ಪಾಲಿಕೆ

ಪರವಾನಗಿ ಪಡೆದ ಕಟ್ಟಡ ನಿರ್ಮಾಣದಾರರು ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಅವೈಜ್ಞಾನಿಕವಾಗಿ ಭೂಮಿ ಅಗೆದು  ಕಾಮಗಾರಿ ನಡೆಸುತ್ತಿದ್ದು, ‌‌ಇದರಿಂದ ಭೂ ಕುಸಿತ ಉಂಟಾಗಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ, ಜೀವಹಾನಿ ಸಂಭವಿಸುತ್ತಿದೆ. ನಗರದಲ್ಲಿ ಅತ್ಯಧಿಕ ಮಳೆಯಾಗುವ ಬಗ್ಗೆ ಭಾರತೀಯ  ಹವಾಮಾನ ಇಲಾಖೆ ಆಗಾಗ್ಗೆ ಮುನ್ಸೂಚನೆ ನೀಡುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಮಳೆಗಾಲ ಮುಕ್ತಾಯವಾಗುವವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡದ ಕಾಮಗಾರಿ ನಡೆಸಬಾರದು. ಈಗಾಗಲೇ ಪ್ರಾರಂಭಿಸಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು, ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಅಳವಡಿಸಿಕೊಂಡು ನಿಲ್ಲಿಸಬೇಕು. ಇದನ್ನು  ಉಲ್ಲಂಘಿಸಿದರೆ  ವಿಪತ್ತು ನಿರ್ವಹಣಾ ಕಾಯ್ದೆಯಡಿ  ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಆನಂದ್ ಸಿಎಲ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.