ADVERTISEMENT

ಸಾಲ್ಮರದಲ್ಲಿ ನಡೆದ ದಲಿತ ದೌರ್ಜನ್ಯ ಘಟನೆ: ಉದ್ಯಮಿ ಸಹಿತ ಮೂವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 4:27 IST
Last Updated 19 ನವೆಂಬರ್ 2024, 4:27 IST
ಶಿವಪ್ಪ
ಶಿವಪ್ಪ   

ಪುತ್ತೂರು: ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರದ ವುಡ್ ಇಂಡಸ್ಟ್ರೀಸ್‌ನಲ್ಲಿ ಮರದ ಕೆಲಸದ ಮೇಸ್ತ್ರಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಕೂಲಿ ಶಿವಪ್ಪ ಅವರ ಮೃತದೇಹವನ್ನು ಪಿಕಪ್ ವಾಹನದಲ್ಲಿ ಮರದ ದಿಮ್ಮಿಗಳ ಮೇಲೆ ತುಂಬಿಕೊಂಡು ಬಂದು ಅವರ ಮನೆಯ ಮುಂಭಾಗದ ರಸ್ತೆ ಬದಿಯಲ್ಲಿ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಾಲ್ಮರದ ತಾವ್ರೋ ವುಡ್ ಇಂಡಸ್ಟ್ರೀಸ್‌ ಮಾಲೀಕ ಸೇರಿ ಸಹಿತ ಮೂವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸಂಬಂಧಿಸಿ ಶಿವಪ್ಪ ಅವರ ಅಳಿಯ ಶಶಿ ಕೆರೆಮೂಲೆ ಪೊಲೀಸರಿಗೆ ದೂರು ನೀಡಿದ್ದಾರೆ.

ಶಿವಪ್ಪ ಅವರು ಶನಿವಾರ ಬೆಳಿಗ್ಗೆ ಮನೆಯಲ್ಲಿದ್ದ ವೇಳೆ ಹೆನ್ರಿ ತಾವ್ರೊ ಅವರು ಬಂದು ಮರದ ಕೆಲಸಕ್ಕೆಂದು ಅವರನ್ನು ಪಿಕಪ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನದ ಹೆನ್ರಿ ತಾವ್ರೊ ಮತ್ತು ಮೇಸ್ತ್ರಿ ಸ್ಟ್ಯಾನಿ ಹಾಗೂ ಇನ್ನೊಬ್ಬರು ಅದೇ ಪಿಕಪ್ ವಾಹನದಲ್ಲಿ ಮರದ ದಿಮ್ಮಿಗಳ ಮೇಲೆ ಮಲಗಿಸಿಕೊಂಡು ಬಂದು ಶಿವಪ್ಪ ಅವರ ಮನೆಯ ಬಳಿಯ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು.

ADVERTISEMENT

ಹೆನ್ರಿ ಅವರು ಶಿವಪ್ಪ ಅವರ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದಲ್ಲದೆ ಅಮಾನವೀಯವಾಗಿ ನಡೆದುಕೊಳ್ಳುವ ಮೂಲಕ ಪರಿಶಿಷ್ಟ ಜಾತಿಯ ನಮಗೆ ಅನ್ಯಾಯ ಮಾಡಿದ್ದಾರೆ, ದಲಿತ ದೌರ್ಜನ್ಯ ಎಸಗಿದ್ದಾರೆ ಎಂದು ಮೃತರ ಶಶಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಪುತ್ತೂರು ನಗರ ಪೊಲೀಸರು ಮೃತದೇಹ ಸಾಗಾಟಕ್ಕೆ ಬಳಸಿದ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದು, ಹೆನ್ರಿ ತಾವ್ರೊ, ಸ್ಟ್ಯಾನಿ ಮತ್ತು ಇನ್ನೊಬ್ಬರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.