ADVERTISEMENT

ಪಶ್ಚಿಮ ಘಟ್ಟ ವಿನಾಶದಿಂದ ದಕ್ಷಿಣ ಭಾರತಕ್ಕೇ ವಿಪತ್ತು: ವಿಜಯ್‌ ನಿಶಾಂತ್‌

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 15:48 IST
Last Updated 9 ಆಗಸ್ಟ್ 2022, 15:48 IST
ಸಂವಾದದಲ್ಲಿ ವಿಜಯ್‌ ನಿಶಾಂತ್‌ ಮಾತನಾಡಿದರು. ದಿನೇಶ್‌ ಹೊಳ್ಳ, ಗಿರಿಧರ ಕಾಮತ್‌ ಇದ್ದಾರೆ– ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ವಿಜಯ್‌ ನಿಶಾಂತ್‌ ಮಾತನಾಡಿದರು. ದಿನೇಶ್‌ ಹೊಳ್ಳ, ಗಿರಿಧರ ಕಾಮತ್‌ ಇದ್ದಾರೆ– ಪ್ರಜಾವಾಣಿ ಚಿತ್ರ   

ಮಂಗಳೂರು: ‘ಪಶ್ಚಿಮ ಘಟ್ಟಗಳು ನಾಶವಾದರೆ ಕರಾವಳಿ ಪ್ರದೇಶ ಮಾತ್ರವಲ್ಲ ಇಡೀ ದಕ್ಷಿಣ ಭಾರತವೇ ಸಂಕಷ್ಟಕ್ಕೆ ಸಿಲುಕಲಿದೆ. ಜಗತ್ತಿನ ಜೀವವೈವಿಧ್ಯದ ಅತಿಸೂಕ್ಷ್ಮ ತಾಣಗಳಲ್ಲಿ ಪಶ್ಚಿಮ ಘಟ್ಟವೂ ಒಂದು. ಅದಕ್ಕೆ ಉಂಟಾಗುವ ಹಾನಿ ಜಗತ್ತಿನ ಜೀವ ವೈವಿಧ್ಯ ವ್ಯವಸ್ಥೆಯ ಅಸಮತೋಲನಕ್ಕೆ ಕಾರಣವಾಗಲಿದೆ’ ಎಂದು ‘ಪ್ರಾಜೆಕ್ಟ್‌ ವೃಕ್ಷಾ ಫೌಂಡೇಷನ್‌’ನ ಸಂಸ್ಥಾಪಕರಾಗಿರುವ ಸಸ್ಯವೈದ್ಯ ವಿಜಯ್‌ ನಿಶಾಂತ್‌ ಎಚ್ಚರಿಸಿದರು.

ಮಂಗಳೂರು ಸಸ್ಯ ಪ್ರೇಮಿಗಳ ಬಳಗವು ‘ಪಶ್ಚಿಮ ಘಟ್ಟಗಳ ಮಹತ್ವ ಮತ್ತು ಅವುಗಳ ಸಂರಕ್ಷಣೆಯ ಹೆಜ್ಜೆ’ ಕುರಿತು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

’ಉಸಿರಾಡುವ ಗಾಳಿಯಿಂದ ಹಿಡಿದು ನಾವು ಬಳಸುವ ಪ್ರತಿಯೊಂದು ವಸ್ತುವೂ ನಿಸರ್ಗದ ಕೊಡುಗೆ. ರಾಜ್ಯದ ಪ್ರತಿಯೊಬ್ಬರೂ ಒಂದಿಲ್ಲ ಒಂದು ವಿಚಾರಕ್ಕೆ ಪಶ್ಚಿಮ ಘಟ್ಟಗಳನ್ನು ಅವಲಂಬಿಸಿದ್ದೇವೆ. ಸಂಪನ್ಮೂಲಗಳಿಂದ ಸಮೃದ್ಧವಾದ ಈ ಗಿರಿಶ್ರೇಣಿಯ ರಕ್ಷಣೆಗೆ ನಮ್ಮಿಂದಾದಷ್ಟು ಮಟ್ಟಿಗೆ ಕಾಳಜಿ ಪ್ರದರ್ಶಿಸಬೇಕು. ಈಗ ಸುಮ್ಮನಿದ್ದರೆ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದರು.

ADVERTISEMENT

‘ಪ್ರಕೃತಿಗೆ ಮನುಷ್ಯನನ್ನು ಮಟ್ಟ ಹಾಕುವುದು ದೊಡ್ಡ ವಿಷಯವೇ ಅಲ್ಲ. ಒಂದು ಸಣ್ಣ ಕ್ರಿಮಿಯಿಂದ ಸೃಷ್ಟಿಯಾದ ಕೋವಿಡ್‌ ಜಗತ್ತಿನಾದ್ಯಂತ ಏನೆಲ್ಲ ಅವಾಂತರಗಳನ್ನು ಸೃಷ್ಟಿಸಿತು ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಇದು ಪ್ರಕೃತಿ ತೋರಿಸಿರುವ ಒಂದು ಝಲಕ್‌ ಮಾತ್ರ. ಪಶ್ಚಿಮ ಘಟ್ಟದ ಮೇಲೆ ಎಸಗುತ್ತಿರುವ ದೌರ್ಜನ್ಯದ ಮುಂದೆ ನಾವು ಅನುಭವಿಸಿದ ಸಂಕಷ್ಟ ಏನೇನೂ ಅಲ್ಲ. ಪ್ರಕೃತಿಗೆ ವಿರುದ್ಧವಾಗಿ ವರ್ತಿಸಿದರೆ ಉಳಿಗಾಲವಿಲ್ಲ’ ಎಂದು ಕಿವಿಮಾತು ಹೇಳಿದರು.

ಪರಿಸರ ಕಾರ್ಯಕರ್ತ ದಿನೇಶ್‌ ಹೊಳ್ಳ, ‘ಗುಜರಾತ್‌ನಿಂದ ಕನ್ಯಾಕುಮಾರಿವರೆಗೆ ವ್ಯಾಪಿಸಿರುವ 1,600 ಕಿ.ಮೀ. ಉದ್ದದ ಪಶ್ಚಿಮಘಟ್ಟಗಳ ಶ್ರೇಣಿ ಅನೇಕ ಜೀವನದಿಗಳ ಉಗಮಸ್ಥಾನ. ಗಿರಿಕಂದರಗಳ ಹುಲ್ಲುಗಾವಲು, ನೆಲದಡಿಯ ಶಿಲಾಪದರಗಳು, ಶೋಲಾ ಕಾಡುಗಳು ಅವುಗಳ ನಡುವೆ ಅಡಗಿರುವ ಜಲನಾಡಿಗಳನ್ನು ಒಳಗೊಂಡ ಇಲ್ಲಿನ ಪರಿಸರ ವ್ಯವಸ್ಥೆ ಮಳೆ ನೀರನ್ನು ಹಿಡಿದಿಟ್ಟುಕೊಂಡು ನದಿಗಳಿಗೆ ವರ್ಷಪೂರ್ತಿ ನೀರುಣಿಸುತ್ತದೆ’ ಎಂದರು.

‘ಪಶ್ಚಿಮ ಘಟ್ಟಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾಮಗಾರಿಗಳು, ಎತ್ತಿನಹೊಳೆಯಂತಹ ಮಾರಕ ಯೋಜನೆಗಳು, ನಿರ್ಮಾಣವಾಗಿರುವ ರೆಸಾರ್ಟ್‌ಗಳು ಇಲ್ಲಿನ ಪರಿಸರ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿವೆ. ಪಶ್ಚಿಮ ಘಟ್ಟಗಳಲ್ಲಿ ಮಾನವ ಹಸ್ತಕ್ಷೇಪದಿಂದಾಗಿ ಭೂಕುಸಿತದಂತಹ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗಿ ಬಂದಿದೆ. ಜನ ಇನ್ನಾದರೂ ಎಚ್ಚೆತ್ತು, ಪಶ್ಚಿಮಘಟ್ಟಗಳನ್ನು ಅದರ ಪಾಡಿಗೆ ಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದರು.

ಪರಿಸರ ಕಾರ್ಯಕರ್ತ ಗಿರಿಧರ ಕಾಮತ್‌, ‘ಹೂಬಿಡುವ ಸಸ್ಯಗಳ 4 ಸಾವಿರಕ್ಕೂ ಅಧಿಕ ಪ್ರಭೇದಗಳನ್ನು ಪಶ್ಚಿಮ ಘಟ್ಟ ಹೊಂದಿದ್ದು, ಇವುಗಳಲ್ಲಿ ಶೇ 38ರಷ್ಟು ಸಸ್ಯಗಳು ಈ ಪ್ರದೇಶದಲ್ಲಿ ಮಾತ್ರ ಕಂಡುಬರುವಂತಹವು. 330 ಪ್ರಭೇದಗಳ ಚಿಟ್ಟೆಗಳಿಗೆ ಈ ಗಿರಿಶ್ರೇಣಿ ನೆಲೆ ಕಲ್ಪಿಸಿದ್ದು, ಅವುಗಳಲ್ಲಿ ಶೆ 11ರಷ್ಟು ಇಲ್ಲಿ ಮಾತ್ರ ಕಾಣಸಿಗುವಂತಹವು. ಇಲ್ಲಿರುವ 156ಕ್ಕೂ ಅಧಿಕ ಸರೀಸೃಪ ಪ್ರಭೇದಗಳಲ್ಲಿ ಶೇ 62ರಷ್ಟು ಇಲ್ಲಿ ಮಾತ್ರ ಸೀಮಿತ. 508 ಹಕ್ಕಿಗಳ ಪ್ರಭೇದ ಇಲ್ಲಿ ಕಾಣಸಿಗುತ್ತದೆ. ಅವುಗಳಲ್ಲಿ ಶೇ 4ರಷ್ಟು ಹಕ್ಕಿಗಳು ಬೇರೆಲ್ಲೂ ಕಂಡು ಬರುವುದಿಲ್ಲ. ಇಂತಹ ವಿರಳಾತಿ ವಿರಳ ಜೀವ ವೈವಿಧ್ಯ ತಾಣವನ್ನು ಉಳಿಸಿಕೊಳ್ಳುವ ಕಳಕಳಿಯನ್ನು ಎಲ್ಲರೂ ಪ್ರದರ್ಶಿಸಬೇಕು’ ಎಂದರು.

ಸೇಂಟ್‌ ಅಲೋಷಿಯಸ್‌ ಕಾಲೇಜಿನ ಪ್ರಾಂಶುಪಾಲರಾದ ಪ್ರವೀಣ್‌ ಮಾರ್ಟಿಸ್‌ ಸ್ವಾಗತಿಸಿದರು. ಸಸ್ಯ ಪ್ರೇಮಿಗಳ ಬಳಗದ ಡೆರಿಲ್‌ ತಾವ್ರೊ ಕಾರ್ಯಕ್ರಮ ನಿರ್ವಹಿಸಿದರು. ಚಾರ್ಲ್ಸ್‌ ಡಿಸೋಜ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.