ADVERTISEMENT

ಮಳೆಯ ನಡುವೆ ಹಬ್ಬದ ಸಂಭ್ರಮ

ದೇವಾಲಯಗಳಲ್ಲಿ ಭಕ್ತರ ದಂಡು: ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ; ಮುಂಜಾನೆ ಓಟದ ಗಮ್ಮತ್ತು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 4:48 IST
Last Updated 7 ಅಕ್ಟೋಬರ್ 2024, 4:48 IST
ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯಗಳಲ್ಲಿ ದೇವಿದರ್ಶನ ಪಡೆದ ಭಕ್ತರು :ಪ್ರಜಾವಾಣಿ ಚಿತ್ರ 
ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯಗಳಲ್ಲಿ ದೇವಿದರ್ಶನ ಪಡೆದ ಭಕ್ತರು :ಪ್ರಜಾವಾಣಿ ಚಿತ್ರ    

ಮಂಗಳೂರು: ಭಕ್ತಿಗಾಯನ, ಮೋಹಕ ನರ್ತನ, ನಾಟಕದ ಸೊಬಗು ಮುಂತಾದವು ಸಂಜೆಗೆ ರಂಗು ತುಂಬಿದರೆ ಚುಮುಚುಮು ಚಳಿಯಲ್ಲಿ ನಡೆದ ಓಟದ ಸ್ಪರ್ಧೆ ಮುಂಜಾನೆಗೆ ಬಿಸುಪು ನೀಡಿತು. ದಿನವಿಡೀ ನಡೆದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ದಸರೆಯ ನಾಲ್ಕನೇ ದಿನ ಜನರ ಮನಸ್ಸಿಗೆ ಪುಳಕ ತುಂಬಿತು.

ನಾಲ್ಕನೇ ದಿನವೂ ನಗರದ ದೇವಿ ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರಗಳು ಭಕ್ತಿಭಾವದಿಂದ ನಡೆದವು. ಭಾನುವಾರವಾದುದರಿಂದ ಎಲ್ಲ ದೇವಾಲಯಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚು ಇತ್ತು. ದಿನವಿಡೀ ಬಿಟ್ಟುಬಿಟ್ಟು ಬಂದ, ಸಂಜೆ ಗುಡುಗುಸಹಿತ ಸುರಿದ ಮಳೆ ತಂಪೆರೆಯಿತು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಝ್ಯೂಯಿಸ್ ಫಿಟ್‌ನೆಸ್ ಕ್ಲಬ್ ಆಯೋಜಿಸಿದ್ದ ಓಟದ ಸ್ಪರ್ಧೆ ಮುಂಜಾನೆಯೇ ನಗರದಲ್ಲಿ ಸಂಚಲನ ಮೂಡಿಸಿತು. 41 ಕಿಲೊಮೀಟರ್‌, 10 ಕಿಮೀ ಮತ್ತು 5 ಕಿಮೀ ಓಟದಲ್ಲಿ ರಾಜ್ಯ ಮತ್ತು ನೆರೆರಾಜ್ಯಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಒಂದು ನಗರ, ಒಂದೇ ಹುಮ್ಮಸ್ಸು ಎಂಬ ಘೋಷವಾಕ್ಯದಲ್ಲಿ ನಡೆದ ಸ್ಪರ್ಧೆಯಲ್ಲಿ ಮಂಗಳೂರನ್ನು ವ್ಯಸನಮುಕ್ತ ಮಾಡುವ ಆಶಯವೂ ಇತ್ತು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕುದ್ರೋಳಿ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಟ್ರಸ್ಟಿ ಸಂತೋಷ್ ಜೆ.ಪೂಜಾರಿ, ಕುದ್ರೋಳಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಝ್ಯೂಯಿಸ್‌ ಫಿಟ್‌ನೆಸ್ ಕ್ಲಬ್‌ನ ರಾಜೇಶ್ ಪಾಟಾಲಿ, ಕಬಡ್ಡಿಪಟು ರವಿ ಉರ್ವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಮಂಗಳ ಕ್ರೀಡಾಂಗಣದಲ್ಲಿ ತಾಲ್ಲೂಕು ಬಿಲ್ಲವ ಸಂಘ ಆಯೋಜಿಸಿದ್ದ ದಸರಾ ಕ್ರೀಡಾಕೂಟದಲ್ಲಿ ಓಟ, ಜಿಗಿತ, ಕಬಡ್ಡಿ ಸ್ಪರ್ಧೆಗಳು ದಿನವಿಡೀ ರೋಮಾಂಚನ ಮೂಡಿಸಿದವು. ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಉದ್ಘಾಟಿಸಿದರು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ  ಮಮತಾ ಗಟ್ಟಿ, ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್, ಶಾಸಕ ಐವನ್ ಡಿಸೋಜ, ಮುಖಂಡರಾದ ಮಾಧವ ಸುವರ್ಣ, ಶಾಂತಲಾ ಗಟ್ಟಿ, ಜಿತೇಂದ್ರ ಸುವರ್ಣ, ಹರೀಶ್, ಜಗನ್ನಾಥ್ ಬಂಗೇರಾ, ದಯಾನಂದ ಪೂಜಾರಿ ಇದ್ದರು.

ಕುದ್ರೋಳಿ ಕ್ಷೇತ್ರದಲ್ಲಿ ಶರಧಿ ಪ್ರತಿಷ್ಠಾನ, ಮಕ್ಕಳಿಗಾಗಿ ಆಯೋಜಿಸಿದ್ದ ಮುದ್ದು ಶಾರದೆ ವೇಷ ಸ್ಪರ್ಧೆಯಲ್ಲಿ 1 ವರ್ಷದಿಂದ 12 ವರ್ಷದ ವರೆಗಿನ ಮಕ್ಕಳು ದೇವಿಯರ ವೇಷ ತೊಟ್ಟು ಸಂಭ್ರಮಿಸಿದರು. ಕ್ಷೇತ್ರದಲ್ಲಿ ಬೆಳಿಗ್ಗೆ ಆರ್ಯದುರ್ಗಾ ಹೋಮ, ಮಧ್ಯಾಹ್ನ ಪುಷ್ಪಾಲಂಕಾರ ಮಹಾಪೂಜೆ, ರಾತ್ರಿ ಭಜನೆ, ದೇವಿ ಪುಷ್ಪಾಲಂಕಾರ ಮಹಾಪೂಜೆ ನಡೆಯಿತು. ಪುಣೆಯ ಕಲ್ಪನಾ ಬಾಲಾಜಿ ಕಲಾವಂದನದಿಂದ ನೃತ್ಯಾರ್ಚನಾ ಮತ್ತು ಕರಾವಳಿಯ ಗಾಯಕರಿಂದ ಗಾನಾಮೃತ ನಡೆಯಿತು.

ಮಂಗಳಾದೇವಿಯಲ್ಲಿ ನೃತ್ಯ ವೈವಿಧ್ಯ

ಮಂಗಳಾದೇವಿ ದೇವಸ್ಥಾನದಲ್ಲಿ ಸಂಜೆ ಶಾದರಾ ಶ್ರೀನಿವಾಸ ಐಗಳ ತಂಡದಿಂದ ಭಜನೆ, ಸತ್ಯಸಾಯಿ ಬಾಲವಿಕಾಸ ಕೇಂದ್ರದಿಂದ ಭಜನಾ ಸಂಕಿರ್ತನೆ, ಭರತಾಂಜಲಿ ತಂಡದಿಂದ ನೃತ್ಯ ವೈವಿಧ್ಯ, ನಾಟ್ಯಾಲಯದ ಕಮಲಾ ಭಟ್ ಅವರಿಂದ ಭರತನಾಟ್ಯ ನೆರವೇರಿತು.

ಉರ್ವದ ಬೋಳೂರು ಮಾರಿಯಮ್ಮ ದೇವಸ್ಥಾನಲ್ಲಿ ಬೆಳಿಗ್ಗೆ ಶ್ರೀರಾಮ ಭಜನಾ ಮಂದಿರ, ಮುಲ್ಲಕ್ಕಾಡು ಮತ್ತು ಸಂಜೆ ಶ್ರೀರಾಮ ಭಜನಾ ಮಂದಿರ ಕರ್ನಲ್ ಗಾರ್ಡನ್‌ ತಂಡದಿಂದ ಭಜನೆ ನಡೆಯಿತು. ಉರ್ವದ ನರ್ತನ ಆರ್ಟ್ಸ್ ಕಲಾವಿದರಿದಂ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಶ್ರೀ ಮಂಗಳಾದೇವಿ ಕಲಾಕ್ಷೇತ್ರದ ಮಕ್ಕಳಿಂದ ಸಂಗೀತ ಕಾರ್ಯಕ್ರಮ, ಮೇಘಾ ಭಟ್ ಅವರಿಂದ ಭಕ್ತಿ ಗಾಯನ, ವಿಧಾತ್ರಿ ಕಲಾವಿದೆರ್ ತಂಡದಿಂದ ನಾಟಕ ಇತ್ತು.

ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಕದ್ರಿಯ ‘ಮಂಜುಪ್ರಸಾದ’ದಲ್ಲಿ ಆಯೋಜಿಸಿದ್ದ ದಸರಾ ಗೊಂಬೆ ಪ್ರದರ್ಶನ ಮತ್ತು ಪ್ರಾಚ್ಯ, ಪಾರಂಪರಿಕ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಇದ್ದರು. ಪ್ರದರ್ಶನ ಇದೇ 12ರ ತನಕ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ.

ದಸರಾ ರನ್‌ನ ವಿವಿಧ ವಿಭಾಗಗಳಲ್ಲಿ ಬಹುಮಾನ ಗೆದ್ದ ಕ್ರೀಡಾಪಟುಗಳು ಗಣ್ಯರ ಜೊತೆ
ಮಂಗಳೂರು ತಾಲ್ಲೂಕು ಬಿಲ್ಲವ ಸಂಘ ಆಯೋಜಿಸಿದ್ದ ಕ್ರೀಡಾಕೂಟದ ಮಹಿಳೆಯರ ಕಬಡ್ಡಿಯ ಸೆಮಿಫೈನಲ್‌ನಲ್ಲಿ ವಿವೇಕಾನಂದ ಮತ್ತು ಶ್ರೀರಾಮ ತಂಡಗಳ ನಡುವೆ ನಡೆದ ಪೈಪೋಟಿ
ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ್ದ ದಸರಾ ಗೊಂಬೆ ಮತ್ತು ಪ್ರಾಚ್ಯ ಪಾರಂಪರಿಕ ವಸ್ತುಗಳ ಪ್ರದರ್ಶನವನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವೀಕ್ಷಿಸಿದರು. ಎಸ್.ಪ್ರದೀಪ ಕುಮಾರ ಪಾಲ್ಗೊಂಡಿದ್ದರು

ಸಾಹಿಲ್‌ ಸನಿಹಾಗೆ ಸ್ಪ್ರಿಂಟ್ ‘ಡಬಲ್‌’

ಆಳ್ವಾಸ್ ಸಂಸ್ಥೆಯ ಸಾಹಿಲ್ ಮಂಗಳೂರು ತಾಲ್ಲೂಕು ಬಿಲ್ಲವ ಸಂಘ ಭಾನುವಾರ ಮಂಗಳಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದಸರಾ ಕ್ರೀಡಾಕೂಟದ ಬಾಲಕರ 100 ಮೀಟರ್ಸ್ ಮತ್ತು 200 ಮೀಓಟದಲ್ಲಿ ಮೊದಲಿಗರಾದರು. ಖೇಲೊ ಇಂಡಿಯಾದ ಸನಿಹಾ ಶೆಟ್ಟಿ ಬಾಲಕಿಯರ 200 ಮತ್ತು 400 ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದರೆ ಆಳ್ವಾಸ್‌ನ ಗೋಪಿಕಾ ಬಾಲಕಿಯರ 100 ಮೀಟರ್ಸ್ ಓಟದ ಬಹುಮಾನ ಗೆದ್ದುಕೊಂಡರು. ಫಲಿತಾಶಂಗಳು: ಬಾಲಕರ ವಿಭಾಗ: 100ಮೀ ಓಟ: ಸಾಹಿಲ್ (ಆಳ್ವಾಸ್)–1 ರೆನಿಶ್ (ಖೇಲೊ ಇಂಡಿಯಾ)–2 ದಿಶಾಂತ್‌ (ಮಂಗಳಾ ಕ್ಲಬ್‌)–3; 200ಮೀ: ಸಾಹಿಲ್–1 ರೆನಿಶ್–2 ಗುರು ಎಂ.ಎಸ್ (ಅಳ್ವಾಸ್)–3; 400ಮೀ:  ನಿಹಾಲ್ ಕರ್ಕರ (ಖೇಲೊ ಇಂಡಿಯಾ)–1 ಭವೀಶ್ (ಮಂಗಳಾ)–2 ಆಕಾಶ್ (ಆಳ್ವಾಸ್)–3; 800 ಮೀ: ಸಮರ್ಥ್ (ಆಳ್ವಾಸ್)–1 ತನುಷ್ ಅಮೀನ್ (ಮಂಗಳಾ)–2 ಪ್ರಶಾಂತ್ (ಅಳ್ವಾಸ್)–3; ಲಾಂಗ್ ಜಂಪ್‌: ರಕ್ಷಕ್ (ಜೆರೋಸ ಹೈಸ್ಕೂಲ್)–1 ದಿಶಾಂತ್ (ಮಂಗಳಾ)–2 ಅದ್ವಿತ್ ಯಾದವ್ (ಖೇಲೊ ಇಂಡಿಯಾ)–3; ಹೈಜಂಪ್‌: ರಕ್ಷಕ್ (ಜೆರೋಸ)–1 ಹರ್ಷಲ್ (ಜೆರೋಸ)–2 ನವೀನ್ ಎಂ.ಡಿ (ಆಳ್ವಾಸ್‌)–3; ಶಾಟ್‌ಪಟ್: ಧನುಷ್‌ಚಂದ್ರ (ಆಳ್ವಾಸ್)–1 ಗಗನ್ (ಬೋಂದೆಲ್ ಶಾಲೆ)–2 ರಿತೇಶ್ (ಭಗವತಿ ಕ್ಲಬ್)–3. ಬಾಲಕಿಯರ ವಿಭಾಗ: 100 ಮೀ: ಗೋಪಿಕಾ (ಆಳ್ವಾಸ್)–1 ಸಾನ್ವಿ (ಖೇಲೊ ಇಂಡಿಯ)–2 ಹರಿಪ್ರಿಯ (ಐಡಿಎನ್‌ಸಿ)–3; 200 ಮೀ: ಸನಿಹಾ ಶೆಟ್ಟಿ (ಖೇಲೊ ಇಂಡಿಯ)–1 ಗೋಪಿಕಾ (ಆಳ್ವಾಸ್)–2 ಸಾನ್ವಿ (ಖೇಲೊ ಇಂಡಿಯ)–3; 400 ಮೀ: ಸನಿಹಾ ಶೆಟ್ಟಿ (ಖೇಲೊ ಇಂಡಿಯ) ಪ್ರಾರ್ಥನಾ (ಆಳ್ವಾಸ್)–2 ಪ್ರೀತಿ (ಆಳ್ವಾಸ್)–3; 800 ಮೀ: ಕಿರಣಾ (ಆಳ್ವಾಸ್)–1 ಅಂಜಲಿ (ಆಳ್ವಾಸ್)–2 ದಿವ್ಯಾ (ಆಳ್ವಾಸ್)–3; ಹೈಜಂಪ್‌: ರಕ್ಷಿತಾ (ಆಳ್ವಾಸ್)–1 ಕೀರ್ತಿ (ವಿವೇಕಾನಂದ ಪುತ್ತೂರು)–2 ದಿವ್ಯಾ ಶೆಟ್ಟಿ (ಶಾರದಾ ವಿದ್ಯಾಲಯ)–3; ಲಾಂಗ್ ಜಂಪ್‌: ಹರಿಪ್ರಿಯಾ (ಮಂಗಳ)–1  ಸಾನ್ವಿ ಶೆಟ್ಟಿ (ಖೇಲೊ ಇಂಡಿಯ)–2. ಬಾಲಕರ ಕಬಡ್ಡಿ: ತೌಹೀದ್ ಬಂಟ್ವಾಳ–1 ವಿವೇಕಾನಂದ ಪುತ್ತೂರು–2 ಇಂದಿರಾಗಾಂಧಿ ಕ್ಲಬ್‌ ಕೊಂಚಾಡಿ–3; ಬಾಲಕಿಯರ ವಿಭಾಗ: ವಿವೇಕಾನಂದ ಪುತ್ತೂರು–1 ಭಗವತಿ ಸಂಕೊಳಿಗೆ–2 ಶ್ರೀರಾಮ ಕಲ್ಲಡ್ಕ–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.