ಮಂಗಳೂರು: ಭಾನುವಾರ ನಾಪತ್ತೆಯಾಗಿದ್ದ ಮುಸ್ಲಿಂ ಮುಖಂಡ, ಉದ್ಯಮಿ ಬಿ.ಎಂ. ಮುಮ್ತಾಜ್ ಅಲಿ ಅವರ ಮೃತದೇಹವು ನಗರ ಹೊರವಲಯದ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಯಲ್ಲಿ ಸೋಮವಾರ ಪತ್ತೆಯಾಗಿದೆ.
ಅಲಿ ಅವರಿಗೆ ಮಾನಸಿಕ ಕಿರುಕುಳ ನೀಡಿ, ಆತ್ಮಹತ್ಯೆಗೆ ಪ್ರಚೋದಿಸಿದ ಹಾಗೂ ಅವರಿಂದ ₹ 50 ಲಕ್ಷ ಸುಲಿಗೆ ಮಾಡಿದ ಆರೋಪದ ಮೇಲೆ ಶಿಕ್ಷಕಿ ರೆಹಮತ್ ಎಂಬ ಮಹಿಳೆ ಸೇರಿದಂತೆ ಆರು ಮಂದಿ ವಿರುದ್ಧ ನಗರದ ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಕೃಷ್ಣಾಪುರದ ರೆಹಮತ್, ಕಾಟಿಪಳ್ಳದ ಅಬ್ದುಲ್ ಸತ್ತಾರ್ (ಸ್ಥಳೀಯ ಕಾಂಗ್ರೆಸ್ ಮುಖಂಡ), ಸಜಿಪಮುನ್ನೂರಿನ ಶಾಫಿ, ಕೃಷ್ಣಾಪುರ ಮಹಮ್ಮದ್ ಮುಸ್ತಫಾ, ಶೋಯಿಬ್ (ರೆಹಮತ್ ಪತಿ) ಹಾಗೂ ಸತ್ತಾರ್ ಅವರ ಕಾರು ಚಾಲಕ ಮಹಮ್ಮದ್ ಸಿರಾಜ್ ಸೇರಿಕೊಂಡು 2024ರ ಜುಲೈನಿಂದ ಮುಮ್ತಾಜ್ ಅಲಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು’ ಎಂದು ಆರೋಪಿಸಿ ಅಲಿ ಅವರ ತಮ್ಮ ಹೈದರ್ ಅಲಿ ದೂರು ನೀಡಿದ್ದರು.
‘ಅಲಿ ಅವರ ಹೆಸರು ಕೆಡಿಸಲು ಆರೋಪಿಗಳು ಷಡ್ಯಂತ್ರ ರೂಪಿಸಿದ್ದರು. ರೆಹಮತ್ ಜೊತೆ ಅಕ್ರಮ ಸಂಬಂಧ ಇದೆ ಎಂದು ಅಪಪ್ರಚಾರ ಮಾಡುತ್ತೇವೆ ಎಂದು ಬೆದರಿಸಿ ₹ 50 ಲಕ್ಷಕ್ಕಿಂತಲೂ ಹೆಚ್ಚು ಮೊತ್ತವನ್ನು ಆರೋಪಿಗಳು ಪಡೆದಿದ್ದಾರೆ. ಇದರಲ್ಲಿ ₹25 ಲಕ್ಷವನ್ನು ಚೆಕ್ ರೂಪದಲ್ಲಿ ಪಡೆದಿದ್ದಾರೆ. ಇನ್ನೂ ₹ 50 ಲಕ್ಷ ನೀಡಬೇಕು ಎಂದು ಬ್ಲಾಕ್‌ಮೇಲ್ ಮಾಡಿದ್ದಾರೆ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ. ಈ ವಿಚಾರವನ್ನು ಅಣ್ಣನೇ ನನ್ನಲ್ಲಿ ತಿಳಿಸಿದ್ದ’ ಎಂದೂ ಹೈದರ್ ದೂರಿನಲ್ಲಿ ಆರೋಪಿಸಿದ್ದರು.
‘ತಮ್ಮನ್ನು ಇಕ್ಕಟ್ಟಿನ ಪರಿಸ್ಥಿತಿಗೆ ತಳ್ಳಿದವರ ಹೆಸರನ್ನು ಉಲ್ಲೇಖಿಸಿ, ಅಲಿ ಅವರು, ಧ್ವನಿಮುದ್ರಿತ ಸಂದೇ
ಶವನ್ನು ಬಂಧುಗಳಿಗೆ ಕಳುಹಿಸಿದ್ದರು’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.