ಉಳ್ಳಾಲ: 'ಕಿವಿ ಹಾಗೂ ಬಾಯಿ ದೋಷವಿರುವ ಮಕ್ಕಳು ಸರ್ಕಾರದ ನೆರವಿನೊಂದಿಗೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು’ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಹೇಳಿದರು.
ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯಲ್ಲಿ, ಕಿವುಡುತನ ಸಮಸ್ಯೆ ಇದ್ದ 2 ವರ್ಷದ ಮಗುವಿಗೆ ಕಾಕ್ಯುಲರ್ ಇಂಫ್ಲ್ಯಾಂಟ್ ಶಸ್ತ್ರಚಿಕಿತ್ಸೆಯಡಿ, ಕಿವಿಯಲ್ಲಿ ಅಳವಡಿಸಲಾಗಿದ್ದ ಉಪಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಿವುಡುತನ ನಿರ್ಮೂಲನೆ ಕಾರ್ಯಕ್ರಮದಡಿ ಮಗುವಿಗೆ ಈ ಅತ್ಯಾಧುನಿಕ ಉಪಕರಣ ಅಳವಡಿಸಲಾಗಿದೆ. ಕರಾವಳಿ ಭಾಗದ ಖಾಸಗಿ ಆಸ್ಪತ್ರೆಗಳಲ್ಲಿ ನಿಟ್ಟೆ ವಿಶ್ವವಿದ್ಯಾಲಯ ಪ್ರಥಮವಾಗಿ ಈ ಶಸ್ತ್ರಚಿಕಿತ್ಸೆ ನಡೆಸಿದೆ’ ಎಂದರು.
ಉಪಕುಲಾಧಿಪತಿ ಡಾ. ಶಾಂತರಾಮ ಶೆಟ್ಟಿ, ಉಪಕುಲಪತಿ ಡಾ.ಎಂ.ಎಸ್ ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ವೈದ್ಯಕೀಯ ಅಧೀಕ್ಷಕ ಡಾ.ಸುಮಲತಾ ಶೆಟ್ಟಿ, ಡಾ.ವಾದೀಶ್ ಭಟ್, ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಡಾ. ಗೌತಮ್ ಅಜಿಲ , ಮಕ್ಕಳ ವಿಭಾಗ ಮುಖ್ಯಸ್ಥೆ ಡಾ.ರತಿಕಾ ಶೆಣೈ, ಅರಿವಳಿಕೆ ವಿಭಾಗ ಮುಖ್ಯಸ್ಥ ಡಾ.ಶ್ರೀಪಾದ್ ಮೆಹೆಂದಲೆ, ಮಾನಸಿಕ ವಿಭಾಗ ಮುಖ್ಯಸ್ಥ ಡಾ.ಸತೀಶ್ ರಾವ್, ಆಡಿಯಾಲಜಿ ವಿಭಾಗದ ನಿರ್ದೇಶಕ ಡಾ.ಟಿ. ದತ್ತಾತ್ರೇಯ, ಪ್ರಾಂಶುಪಾಲೆ ಡಾ.ಶ್ವೇತಾ, ಸ್ಪೂರ್ತಿ, ಧನಂಜಯ್ ಇದ್ದರು.
‘4 ತಿಂಗಳ ಹಿಂದೆ ಈ ಮಗುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ತಪಾಸಣೆಯಲ್ಲಿ ಮಗುವಿಗೆ ನರದೋಷದಿಂದ ಕಿವಿ ಕೇಳದಿರುವುದು ಗಮನಕ್ಕೆ ಬಂತು. ಆಯುಷ್ಮಾನ್ ಯೋಜನೆಯಡಿ ಬಿಡುಗಡೆಯಾದ ₹6.20 ಲಕ್ಷ ಮೊತ್ತದಲ್ಲಿ ಕಾಕ್ಯುಲರ್ ಇಂಫ್ಲ್ಯಾಂಟ್ ಶಸ್ತ್ರಚಿಕಿತ್ಸೆ ನಡೆಸಿ, ಧ್ವನಿ ಕೇಳಿಬಲ್ಲ ಉಪಕರಣ ಅಳವಡಿಸಲಾಗಿತ್ತು. ಸೋಮವಾರ ಈ ಉಪಕರಣವನ್ನು ಚಾಲನೆಗೊಳಿಸಲಾಗಿದ್ದು, ಮಗುವಿಗೆ ಕಿವಿ ಕೇಳಿಸಲು ಆರಂಭಿಸಿದೆ’ ಎಂದು ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಡಾ. ಗೌತಮ್ ಅಜಿಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.