ADVERTISEMENT

ವರದಕ್ಷಿಣೆ ಕಿರುಕುಳದ ಸಾವು ಪ್ರಕರಣ: ಗಂಡ ಸೇರಿ ನಾಲ್ವರಿಗೆ 7ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 5:51 IST
Last Updated 19 ಜುಲೈ 2024, 5:51 IST

ಮಂಗಳೂರು: ವರದಕ್ಷಿಣೆ ಕಿರುಕುಳದ ಸಾವು ಪ್ರಕರಣ ಸಂಬಂಧ ಮೃತ ಮಹಿಳೆಯ ಪತಿ, ಆತನ ಮೊದಲ ಪತ್ನಿ, ಆತನ ತಾಯಿ ಹಾಗೂ ಭಾವನಿಗೆ ಇಲ್ಲಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಗುರುವಾರ ಆದೇಶ ಮಾಡಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ತಿಪ್ಲಾಪುರದ ಮಜೀದ್‌ ಅಹ್ಮದ್‌, ಆತನ ಮೊದಲ ಪತ್ನಿ ಸಫೂರಾ ಅಂಜುಂ, ಆತನ ತಾಯಿ ಮಮ್ತಾಜ್ ಬಾನು, ಮೊದಲ ಪತ್ನಿಯ ಸೋದರ  ಜಮೀರ್ ಅಹ್ಮದ್‌ ಶಿಕ್ಷೆಗೆ ಒಳಗಾದವರು.

‘ಮಜೀದ್ ಅಹ್ಮದ್  ಮೊದಲ ಪತ್ನಿ ಸಫೂರ ಅಂಜುಂ ಇರುವಾಗಲೇ, ಚನ್ನಗಿರಿಯ ರೇಷ್ಮಾ ಬಾನು ಅವರನ್ನು ಹೊಳಲ್ಕೆರೆ ಮಸೀದಿಯಲ್ಲಿ 2018ರ ಅ.8ರಂದು ಎರಡನೇ ವಿವಾಹವಾಗಿದ್ದರು. ರೇಷ್ಮಾ ಅವರಿಗೂ ಅದು ಎರಡನೇ ವಿವಾಹ. ಮದುವೆ ಬಳಿಕ ಮಜೀದ್‌ ‌ಕಾಟಿಪಳ್ಳದಲ್ಲಿ ರೇಷ್ಮಾ ಬಾನು ಜೊತೆ ನೆಲೆಸಿದ್ದರು. ಸ್ವಲ್ಪ ಸಮಯದ ನಂತರ ಮೊದಲನೇ ಪತ್ನಿ ಸಫೂರ ಹಾಗೂ ತಾಯಿ ಮುಮ್ತಾಜ್ ಬಾನು ಅವರನ್ನೂ ಆ ಮನೆಗೆ ಕರೆಸಿಕೊಂಡಿದ್ದ’ ಎಂದು ಪ್ರಕರಣದ ಸರ್ಕಾರಿ ವಕೀಲ ಚೌಧರಿ ಮೋತಿಲಾಲ್ ಮಾಹಿತಿ ನೀಡಿದರು.

ADVERTISEMENT

‘ರೇಷ್ಮಾ ತವರುಮನೆಯಿಂದ ಮಜೀದ್‌ ಚಿನ್ನಾಭರಣ, ಪೀಠೋಪಕರಣ ಹಾಗೂ ಇತರ ಗೃಹೋಪಯೋಗಿ ಸಾಮಗ್ರಿಗಳನ್ನು ವರದಕ್ಷಿಣೆಯಾಗಿ ಪಡೆದಿದ್ದರು. ಸುರತ್ಕಲ್‌ನಲ್ಲಿ ಗ್ಯಾರೇಜ್ ಆರಂಭಿಸಲು ಮಜೀದ್‌ಗೆ ಮಾವ ಮಹಮ್ಮದ್ ನಜೀರ್ ₹ 1 ಲಕ್ಷ ನೀಡಿದ್ದರು. ಮತ್ತಷ್ಟು ವರದಕ್ಷಿಣೆ ತರುವಂತೆ ಮಜೀದ್‌ ಮತ್ತು ಆತನ ತಾಯಿ, ಮೊದಲ ಪತ್ನಿ ಹಾಗೂ ಆತನ ಬಾವ ಕಿರುಕುಳ ನೀಡಿದ್ದರು. ಕಾಟಿಪಳ್ಳದ ಮನೆಯಲ್ಲಿ ರೇಷ್ಮಾ ಬಾನು ಮೃತದೇಹ ಫ್ಯಾನಿಗೆ ‌ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ 2019ರ ಏ. 28ರಂದು ಮಧ್ಯಾಹ್ನ ಪತ್ತೆಯಾಗಿತ್ತು.’

‘ಮಜೀದ್‌, ಸಫೂರಾ ಅಂಜುಂ, ಮಮ್ತಾಜ್‌ ಬಾನು ಹಾಗೂ ಜಮೀರ್ ಅಹ್ಮದ್‌ ವಿರುದ್ಧ  ಸುರತ್ಕಲ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 498 ಎ (ವರದಕ್ಷಿಣೆ ಕಿರುಕುಳ) 302 (ಕೊಲೆ) ಮತ್ತು 304 ಬಿ (ವರದಕ್ಷಿಣೆ ಕಿರುಕುಳದ ಸಾವು), ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್‌  3 ಮತ್ತು 4ರ ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಗೌಡ 2019ರ ಜುಲೈ 24ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.’

‘ನಾಲ್ವರು ಅಪರಾಧಿಗಳ ವಿರುದ್ಧದ ಕೊಲೆ ಆರೋಪ ಸಾಬೀತಾಗಿಲ್ಲ. ಆದರೆ, ವರದಕ್ಷಿಣೆ ಕಿರುಕುಳದ ಸಾವು (ಐಪಿಸಿ 304 ಬಿ) ಆರೋಪ ಸಾಬೀತಾಗಿದ್ದು, ಇದರಡಿ ನಾಲ್ವರಿಗೂ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ವರದಕ್ಷಿಣೆ ಕಿರಕುಳ (ಐಪಿಸಿ 498 ಎ) ನೀಡಿದ್ದಕ್ಕೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ₹ 5 ಸಾವಿರ ದಂಡ, ಪತ್ನಿಯ ಮನೆಯವರಿಂದ ವರದಕ್ಷಿಣೆ ಪಡೆದಿದ್ದಕ್ಕೆ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್‌ 3ರ ಅಡಿ 6 ತಿಂಗಳ ಕಠಿಣ ಕಾರಾಗೃಹವಾಸ ಮತ್ತು ತಲಾ ₹ 5 ಸಾವಿರ ದಂಡ ಹಾಗೂ ಸೆಕ್ಷನ್‌ 4ರ ಅಡಿ  5 ವರ್ಷ ಕಠಿಣ ಕಾರಾಗೃಹವಾಸ ಮತ್ತು ತಲಾ 15 ಸಾವಿರ ದಂಡ ವಿಧಿಸಿ ನ್ಯಾಯಾಧೀಶರಾದ ಕಾಂತರಾಜು ಎಸ್‌.ವಿ ಅವರು ಗುರುವಾರ ತೀರ್ಪು ನೀಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. 

‘ರೇಷ್ಮಾ ಬಾನು ಮಗಳಿಗೆ (ಮೊದಲ ಗಂಡನಿಂದ ಪಡೆದ ಮಗು) ಪ್ರಸ್ತುತ 12 ವರ್ಷವಾಗಿದ್ದು, ಆ ಮಗುವಿಗೆ ಸೂಕ್ತ ಪರಿಹಾರ ನಿರ್ಧರಿಸುವಂತೆ ನ್ಯಾಯಾಲಯವು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದೆ. ಆ ಮಗುವು ರೇಷ್ಮಾ ಅವರ ತಂದೆ ಮಹಮ್ಮದ್ ನಜೀರ್‌ ಅವರ ಆಶ್ರಯದಲ್ಲಿದೆ’ ಎಂದರು.

ಸರ್ಕಾರ ಪರ ವಕೀಲರಾದ  ಚೌಧರಿ ಮೋತಿಲಾಲ್‌ ವಾದಿಸಿದ್ದರು. ಪ್ರಕರಣದಲ್ಲಿ 25 ಮಂದಿ ಸಾಕ್ಷ್ಯ ನುಡಿದಿದ್ದರು. ಸಾಕ್ಷ್ಯಗಳನ್ನು ಚೌಧರಿ ಮೋತಿಲಾಲ್‌ ಜೊತೆಗೆ ಇನ್ನಿಬ್ಬರು ಸರ್ಕಾರಿ ವಕೀಲರಾದ ಜ್ಯೋತಿ ಪಿ.ನಾಯಕ್‌, ಬಿ.ಶೇಖರ ಶೆಟ್ಟಿ ವಿಚಾರಣೆಗೆ ಒಳಪಡಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.