ADVERTISEMENT

ಪುತ್ತೂರು | ಸಾಹಿತಿ ನುಳಿಯಾಲು ರಘುನಾಥ ರೈ ನಿಧನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 14:09 IST
Last Updated 29 ಸೆಪ್ಟೆಂಬರ್ 2024, 14:09 IST
ನುಳಿಯಾಲು ರಘುನಾಥ ರೈ
ನುಳಿಯಾಲು ರಘುನಾಥ ರೈ   

ಪುತ್ತೂರು: ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದ ನಿವೃತ್ತ ಶಿಕ್ಷಕ, ಸಾಹಿತಿ, ಯಕ್ಷಗಾನ ವೇಷಧಾರಿ ಹಾಗೂ ಅರ್ಥಧಾರಿಯಾಗಿದ್ದ ನುಳಿಯಾಲು ರಘುನಾಥ ರೈ (80) ಅವರು ಅನಾರೋಗ್ಯದಿಂದಾಗಿ ಶನಿವಾರ ರಾತ್ರಿ ನಿಧನರಾದರು.

ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ನುಳಿಯಾಲು ನಿವಾಸಿಯಾಗಿದ್ದ ಅವರು ಸುಳ್ಯಪದವಿನ ಬಾಲಸುಬ್ರಹ್ಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 33 ವರ್ಷ ಶಿಕ್ಷಕರಾಗಿದ್ದರು.

ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸಿದ್ದರು. 1993ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 2015ರಲ್ಲಿ ಎನ್.ಎಸ್.ಕಿಲ್ಲೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅವರು ಹಲವಾರು ಸಂಘ-ಸಂಸ್ಥೆಗಳ ಗೌರವ ಪಡೆದಿದ್ದರು. 2018ರಲ್ಲಿ ಪುತ್ತೂರಿನಲ್ಲಿ ನಡೆದಿದ್ದ ಕರ್ನಾಟಕ ಏಕೀಕರಣ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ಚೂರಿಪದವು ಸರ್ಕಾರಿ ಶಾಲೆಯಲ್ಲಿ ನಡೆದಿದ್ದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ಗಡಿನಾಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು.

ADVERTISEMENT

ಪುತ್ತೂರಿನ ರಾಮಕೃಷ್ಣ ಪ್ರೌಢ ಶಾಲೆ ಮತ್ತು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿ, ನುಳಿಯಾಲು ತರವಾಡು ಟ್ರಸ್ಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಅವರಿಗೆ ಪತ್ನಿ, ಮುಂಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ವಾರಿಜಾ ಕೆ.ರೈ, ಪುತ್ರ, ಮಂಗಳೂರಿನ ಯನೆಪೋಯ ಡೀಮ್ಡ್ ಯುನಿವರ್ಸಿಟಿಯ ವೈದ್ಯಕೀಯ ಅಧೀಕ್ಷಕ ಡಾ.ಸುಭಾಸ್ ರೈ ನುಳಿಯಾಲು, ಪುತ್ರಿ, ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ ಸ್ಮಿತಾ  ಕೆ.ಎನ್.ರೈ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.