ADVERTISEMENT

ಕೋವಿಡ್‌: ಗುತ್ತಿಗೆ ನರ್ಸ್‌ಗಳಿಗೆ 2 ತಿಂಗಳಿಂದ ವೇತನವಿಲ್ಲ

ವಿಷ್ಣು ಭಾರದ್ವಾಜ್
Published 5 ಮೇ 2021, 5:14 IST
Last Updated 5 ಮೇ 2021, 5:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಕಳೆದ ವರ್ಷ ಕೋವಿಡ್‌ ಪ್ರಕರಣಗಳು ಜಿಲ್ಲೆಯಲ್ಲಿ ಪಾರಮ್ಯದಲ್ಲಿದ್ದಾಗ ರೋಗಿಗಳ ಶುಶ್ರೂಷೆಗೆಂದೇ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರು ಕೋವಿಡ್‌ ವಾರಿಯರ್‌ ನರ್ಸ್‌ಗಳು (ಪುರುಷರು, ಮಹಿಳೆಯರು ಇದ್ದಾರೆ). ಆದರೆ ಇವರಿಗೆ ಕಳೆದ ಎರಡು ತಿಂಗಳಿಂದ ಮಾಸಿಕ ವೇತನ ಬಂದಿಲ್ಲ. ಪ್ರತಿ ತಿಂಗಳ ಸಂಬಳವೂ ವಿಳಂಬವಾಗಿಯೇ ಬರುತ್ತಿತ್ತು. ಇವರ ಅಳಲು ಕೇಳುವವರಿಲ್ಲ.

ನಗರದ ವೆನ್ಲಾಕ್‌ ಸರ್ಕಾರಿ ಜಿಲ್ಲಾ ಆಸ್ಪತ್ರೆಯ 58 ಮಂದಿ ಸೇರಿದಂತೆ ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು 75 ಮಂದಿಯನ್ನು ‘ಕೋವಿಡ್‌ ವಾರಿಯರ್ಸ್‌ ನರ್ಸ್‌’ಗಳಾಗಿ ಜಿಲ್ಲಾ ಆರೋಗ್ಯ ಇಲಾಖೆಯ ಅಧೀನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 6 ತಿಂಗಳ ಅವಧಿಗೆ ನೇಮಿಸಿತ್ತು. 6 ತಿಂಗಳು ಕಳೆದ ಬಳಿಕ ಸೇವೆಯನ್ನು ವಿಸ್ತರಿಸಿತ್ತು. ಹೀಗಾಗಿ ಇವರು ವೆನ್ಲಾಕ್‌, ತಾಲ್ಲೂಕು ಆಸ್ಪತ್ರೆಗಳಲ್ಲಿ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗ ಸೆಪ್ಟೆಂಬರ್‌ವರೆಗೆ ಸೇವೆಯನ್ನು ವಿಸ್ತರಿಸಿದೆ.

ಕೋವಿಡ್‌ ರೋಗಿಗಳ ನೇರ ಸಂಪ ರ್ಕದ ಅಪಾಯಕಾರಿ ಕೆಲಸವಾಗಿದ್ದರೂ ಕಾಯಂ ನರ್ಸ್‌ಗಳಿಗೆ ಸಮಾನವಾಗಿ ಇವರೂ ಕೆಲಸ ನಿರ್ವಹಿಸುತ್ತಾರೆ. ಎಲ್ಲ ಕಾರ್ಯಭಾರ ಸಮಾನವಾಗಿದ್ದರೂ, ಇವರು ಗುತ್ತಿಗೆ ಆಧಾರಿತ, ತಾತ್ಕಾಲಿಕ ಅವಧಿಗೆ ನೇಮಕ ಆಗಿದ್ದರಿಂದ ಇತರ ಭತ್ಯೆಗಳು ಇವರಿಗೆ ಇಲ್ಲ. (ಸುರಕ್ಷಾ ಸಲಕರಣೆಗಳನ್ನು ನೀಡಲಾಗಿದೆ).

ADVERTISEMENT

‘ಸಮಸ್ಯೆ ಎಂದರೆ ಕಳೆದೊಂದು ವರ್ಷದಿಂದಲೂ ಪ್ರತಿ ತಿಂಗಳು ನಿಯಮಿತವಾಗಿ ನಿಗದಿತ ದಿನಾಂಕದಂದು ಹಣ ಬ್ಯಾಂಕ್‌ ಖಾತೆಗೆ ಜಮಾ ಆಗುತ್ತಿಲ್ಲ. ಎರಡು ತಿಂಗಳ ವೇತನ ಒಟ್ಟಿಗೆ ಜಮಾ ಆಗುವುದೇ ಹೆಚ್ಚು. ಈ ಬಾರಿಯಂತೂ ಮಾರ್ಚ್‌, ಏಪ್ರಿಲ್‌ ತಿಂಗಳ ವೇತನ ಬಂದಿಲ್ಲ. ವೇತನ ಒದಗಿಸುವ ಪ್ರಕ್ರಿಯೆಯನ್ನೂ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮೇ ತಿಂಗಳಾದರೂ ಮಾಡಿಲ್ಲ’ ಎಂಬುದು ಈ ಕೋವಿಡ್‌ ವಾರಿಯರ್‌ ನರ್ಸ್‌ಗಳ ಅಳಲು.

‘ನಾವು ವೆನ್ಲಾಕ್‌ ಆಸ್ಪತ್ರೆಯಲ್ಲೇ 58 ಮಂದಿ ಇದ್ದೇವೆ. ತಾಲ್ಲೂಕು ಆಸ್ಪತ್ರೆಗಳಲ್ಲೂ ಇದ್ದಾರೆ. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ಸಂಬಳ ಇನ್ನೂ ಬಂದಿಲ್ಲ. ಕೆಲವು ಕುಟುಂಬ ಸಮೇತ ಬಾಡಿಗೆ ಮನೆಯಲ್ಲಿದ್ದರೆ, ಇನ್ನು ಕೆಲವರು ಪಿ.ಜಿ.ಗಳಲ್ಲಿ ನೆಲೆಸಿದ್ದೇವೆ. ಬಾಡಿಗೆ ಕೊಡಬೇಕು, ಆಹಾರ ದಿನಸಿ, ಕುಟುಂಬ ನಿರ್ವಹಣೆ, ಮನೆ ಸಾಮಗ್ರಿ, ಮಕ್ಕಳು ಮರಿ ಕರ್ಚು ಇತ್ಯಾದಿ ಆಗಬೇಕು. ಎರಡೆರಡು ತಿಂಗಳು ವೇತನ ವಿಳಂಬ ಆದರೆ ಏನು ಮಾಡುವುದು‘ ಇನ್ನೂ ನಮ್ಮ ವೇತನ ಪ್ರಕ್ರಿಯೆ ಜಿಲ್ಲಾ ಜಿಲ್ಲಾ ಖಜಾನೆಗೆ ಹೋಗಿಲ್ಲ ಎಂಬ ಮಾಹಿತಿ ಇದೆ. ಮುಂದಿನ ತಿಂಗಳೂ ಸಂಬಳ ಬರುತ್ತದೋ ಇಲ್ಲವೋ ಎಂಬ ಆತಂಕ. ಬೇಗ ಸಂಬಳ ಲಭಿಸಲು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಅವರಲ್ಲಿ ಕೆಲವು ಸಿಬ್ಬಂದಿ.

‘ಈ ಮಧ್ಯೆ, ಮುಂದಿನ ಅವಧಿಗೆ ಮತ್ತೆ 19 ಮಂದಿ ಕೋವಿಡ್‌ ವಾರಿಯರ್‌ ಶುಶ್ರೂಷಕರನ್ನು ಆರೋಗ್ಯ ಇಲಾಖೆ ಗುತ್ತಿಗೆ ಆಧಾರದಲ್ಲಿ ನೇಮಿಸಲು ಪ್ರಕ್ರಿಯೆ ನಡೆಸಿದೆ. ಇವರಿಗೂ ವೇತನ ನೀಡಬೇಕಿದೆ. ಈಗಾಗಲೇ ಇರುವವರಿಗೂ ವಿಳಂಬವಿಲ್ಲದೆ ನಿಗದಿತ ವೇತನ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಅವರ ಒತ್ತಾಯ.

ಈಗ ಬಿಡುಗಡೆ ಆಗಿದೆ: ‘ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಕೋವಿಡ್‌ ವಾರಿಯರ್ ನರ್ಸ್‌ಗಳ ಎರಡು ತಿಂಗಳ ವೇತನ ಬಟವಾಡೆಗೆ ಕ್ರಮ ಆಗಿದೆ. ಮಾರ್ಚ್‌ ತಿಂಗಳ ವೇತನ ಬಿಡುಗಡೆಯಾಗಿದ್ದು, ಏಪ್ರಿಲ್‌ನ ವೇತನ ಬಿಡುಗಡೆಗೂ ಕ್ರಮ ಆಗಿದೆ. ಸಿಬ್ಬಂದಿ ವೇತನ ಖಾತೆಗೆ ಜಮಾ ಆಗುತ್ತಿದೆ ಎಂದು ಡಿಎಚ್ಒ ಡಾ.ಕಿಶೋರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ರಿಸ್ಕ್‌ ಅಲವೆನ್ಸ್‌: ರಿಸ್ಕ್‌ ಅಲವೆನ್ಸ್‌ ಎಂದು ಬೇರೆ ಮೊತ್ತ ಇಲ್ಲ ಅವರ ವೇತನದ ಜತೆ ಸೇರಿಸಿ, ಮೊತ್ತ ಏರಿಸಿ ನೀಡಲಾಗಿದೆ ಎಂದು ಡಾ. ಕಿಶೋರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.