ADVERTISEMENT

ಮನ್ಸ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಆಗ್ರಹ 

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 12:54 IST
Last Updated 13 ನವೆಂಬರ್ 2024, 12:54 IST

ಮೂಡುಬಿದಿರೆ: ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸುಮಾರು 25 ಜಾತಿಗಳ ಹೆಸರುಗಳು ಬಿಟ್ಟು ಹೋಗಿದ್ದು, ಇದರಲ್ಲಿ ಅವಿಭಜಿತ ದ.ಕ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮನ್ಸ ಜಾತಿ ಕೂಡ ಸೇರಿದೆ. ಜಾತಿ ಗಣತಿಗೆ ನೇಮಿಸಿದ ಆಯೋಗವು ಜಿಲ್ಲೆಯಲ್ಲಿ ಮನ್ಸ ಜಾತಿಯವರ  ಮನೆಗಳಿಗೆ ತೆರಳಿ, ಸಮೀಕ್ಷೆ ನಡೆಸಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದ ಬಳಿಕವಷ್ಟೇ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ತುಲುನಾಡ್ ಮನ್ಸ ಸಮಾಜ ಸೇವಾ ಸಂಘದ ಗೌರವ ಸಲಹೆಗಾರ ಅಚ್ಯುತ ಸಂಪಿಗೆ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಇವೆರಡೂ ಆಡಳಿತಾತ್ಮಕ ಪರಿಭಾಷೆಯಾಗಿದ್ದು ಜಾತಿ ಸೂಚಕ ಪದಗಳಲ್ಲ. ಈ ಹೆಸರುಗಳನ್ನು ಸರ್ಕಾರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿರುವುದು ದೊಡ್ಡ ಲೋಪ ಎಂದರು. ಈ ಹಿಂದಿನ ಜಾತಿವಾರು ಸಮೀಕ್ಷೆ ಸಂದರ್ಭ ಮನ್ಸ ಜಾತಿಯವರು ತಮ್ಮ ಜಾತಿ ಹೆಸರಿನ ಬಗ್ಗೆ ಕೀಳರಿಮೆ ಮತ್ತು ಅಜ್ಞಾನದಿಂದ ಮನ್ಸ ಹೆಸರಿನ ಬದಲು ಆದಿ ದ್ರಾವಿಡ ಎಂಬ ಮಾಹಿತಿ ನೀಡಿದ್ದರಿಂದ ಅದೇ ಹೆಸರು ಜಾತಿ ಪಟ್ಟಿಯಲ್ಲಿ ಮುಂದುವರಿದಿದೆ. ಇದರಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಕೂಡ ಇದೆ’ ಎಂದರು.

ಆದಿ ದ್ರಾವಿಡ-ಮನ್ಸ ಎಂಬ ಗೊಂದಲ ಸರಿಪಡಿಸಿ ಮನ್ಸ ಎನ್ನುವ ಒಂದೇ ಜಾತಿಯಡಿ ಹೋರಾಟ ನಡೆಸಿ ಸರ್ಕಾರದ ಸವಲತ್ತುಗಳನ್ನು ಪಡೆಯಬೇಕು. ಇದರ ಭಾಗವಾಗಿ ನ.17ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಕನ್ನಡ ಭವನದಲ್ಲಿ `ಪರಿಶಿಷ್ಟ ಜಾತಿಯಲ್ಲಿ ಉಪಜಾತಿಗಳು ಮತ್ತು ಅವುಗಳ ಅಸ್ಮಿತೆ' ಕುರಿತು ವಿಚಾರ ಸಂಕಿರಣ ನಡೆಯಲಿದೆ. ಕರ್ನಾಟಕ ವಿಶ್ವವಿದ್ಯಾಲಯದ ಉಪನ್ಯಾಸಕ ಸದಾನಂದ ಸುಗಂಧಿ ಮತ್ತು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್ ದ್ವಾರಕಾನಾಥ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಸಂಘದ ಗೌರವ ಅಧ್ಯಕ್ಷ ಶಾಂತರಾಮ್ ಅಧ್ಯಕ್ಷತೆ ವಹಿಸುವರು ಎಂದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ವೆಂಕಣ್ಣ ಕೊಯ್ಯೂರು, ಎಂ.ರಮೇಶ್ ಬೋದಿ, ಉದಯ ಗೋಳಿಯಂಗಡಿ, ಶಾಂತರಾಮ್, ಗೋಪಾಲ ಮುತ್ತೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.