ಪುತ್ತೂರು: ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರರಾದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಎರಡು ವರ್ಷಗಳಲ್ಲಿ 6ನೇ ವೇತನ ಆಯೋಗದಡಿಯಲ್ಲಿ ಪಿಂಚಣಿ ಸೌಲಭ್ಯ ನೀಡುತ್ತಿದ್ದು, ಇದನ್ನು ಪರಿಷ್ಕರಿಸಿ 7ನೇ ವೇತನ ಆಯೋಗದಡಿಯೂ ನೀಡಬೇಕು ಎಂದು ಹಕ್ಕೊತ್ತಾಯ ಮಂಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸಹಸಂಚಾಲಕಿ ಮಂಜುಳಾ ಹೇಳಿದರು.
ಪುತ್ತೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
2022ರ ಜೂನ್ 7ರಿಂದ 2024ರ ಜೂನ್ 7ರ ಅವಧಿಯಲ್ಲಿ ರಾಜ್ಯದಲ್ಲಿ 17,632 ಮಂದಿ ನೌಕರರು ವಿವಿಧ ಇಲಾಖೆಗಳಿಂದ ನಿವೃತ್ತರಾಗಿದ್ದಾರೆ. ಈ ನಿವೃತ್ತ ನೌಕರರಿಗೆ ಈಗ ನೀಡುತ್ತಿರುವ ಪಿಂಚಣಿ ವ್ಯವಸ್ಥೆಯಲ್ಲಿ ಕಡಿಮೆ ಸೌಲಭ್ಯ ಸಿಗುತ್ತಿದೆ. ಇದರಿಂದ ನಿವೃತ್ತ ನೌಕರರಿಗೆ ಸಿಗಲೇಬೇಕಾದ ಹಕ್ಕಿನ ಮೊತ್ತ ಸಿಗುತ್ತಿಲ್ಲ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸಮ್ಮ ಸಮಸ್ಯೆಯನ್ನು ತಲುಪಿಸಲಾಗುತ್ತಿದೆ. ಅದಕ್ಕಾಗಿ ನಾವು ನಮ್ಮ ಸೇವೆಯ ಎಸ್‌ಆರ್ ಸಹಿತ ದಾಖಲೆಗಳನ್ನು ಅರ್ಜಿ ಫಾರಂನಲ್ಲಿ ದಾಖಲಿಸಬೇಕಾಗಿದೆ. ಈ ಅವಧಿಯಲ್ಲಿ ನಿವೃತ್ತರಾದ ಎಲ್ಲ ಸರ್ಕಾರಿ ನೌಕರರೂ ಇದನ್ನು ಮಾಡಬೇಕು ಎಂದು ಅವರು ಹೇಳಿದರು.
ನಮಗೆ ನೀಡುತ್ತಿರುವ ಪಿಂಚಣಿ ಹಾಗೂ 7ನೇ ವೇತನ ಆಯೋಗದಡಿಯಲ್ಲಿ ನೀಡಬೇಕಾದ ಪಿಂಚಣಿಯಲ್ಲಿ ವ್ಯತ್ಯಾಸ ಮೊತ್ತವನ್ನು ಸರ್ಕಾರ ನೀಡಬೇಕು. ಈ ಬಗ್ಗೆ ಸರ್ಕಾರ ಹೊಸ ಆದೇಶ ಮಾಡಬೇಕು. ಮುಂದೆ 7ನೇ ವೇತನ ಆಯೋಗದಡಿಯಲ್ಲೇ ನಮಗೆ ಪಿಂಚಣಿ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. 2022ರ ಜೂನ್ 7ರಿಂದ 2024ರ ಜೂನ್ 7ರ ಅವಧಿಯಲ್ಲಿ ನಿವೃತ್ತರಾದವರಿಗೆ 7ನೇ ವೇತನ ಆಯೋಗದಡಿ ವೇತನ ಪರಿಷ್ಕರಣೆಗೆ ಸರ್ಕಾರವೇ ಅವಕಾಶ ನೀಡಿದೆ. ಹಾಗಾಗಿ ನಮ್ಮ ಬೇಡಿಕೆ ಸಮರ್ಪಕವಾಗಿದ್ದು, ಈ ಅವಧಿಯಲ್ಲಿ ನಿವೃತ್ತರಾದವರ ತಾತ್ಕಾಲಿಕ ಸಂಘವೊಂದನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಸಂಘದ ಮೂಲಕ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಸಂಘದ ಸಹಸಂಚಾಲಕಿ ವಿಜಯಾ ಪೈ ಭಾಗವಹಿಸಿದ್ದರು.
ಪುತ್ತೂರು ಘಟಕದ ಸಂಚಾಲಕ ಜೆರಾಲ್ಡ್ ಮಸ್ಕರೇನಸ್ ಸ್ವಾಗತಿಸಿದರು. ನಿವೃತ್ತ ಎಸಿಡಿಪಿಒ ಭಾರತಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.