ADVERTISEMENT

ಮಂಗಳೂರು: ತೃತೀಯಲಿಂಗಿಗಳ ಪುನರ್ವಸತಿಗೆ ಆಗ್ರಹ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಆಲಿಸುವ ಸಭೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 4:31 IST
Last Updated 24 ಜೂನ್ 2024, 4:31 IST
ಸಭೆಯಲ್ಲಿ ಸದಾಶಿವ ಉರ್ವಸ್ಟೋರ್‌ ಮಾತನಾಡಿದರು
ಸಭೆಯಲ್ಲಿ ಸದಾಶಿವ ಉರ್ವಸ್ಟೋರ್‌ ಮಾತನಾಡಿದರು   

ಮಂಗಳೂರು: ನಗರದಲ್ಲಿರುವ ತೃತೀಯಲಿಂಗಿಗಳಿಗೆ ವಸತಿ ಹಾಗೂ ಉದ್ಯೋಗ ಒದಗಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡರು ಒತ್ತಾಯಿಸಿದರು.

ಇಲ್ಲಿ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಆಲಿಸುವ ಸಭೆಯಲ್ಲಿ ಭಾನುವಾರ ಈ ವಿಚಾರ ಪ್ರಸ್ತಾಪಿಸಿದ ದಲಿತ ಮುಖಂಡ ಸದಾಶಿವ ಉರ್ವಸ್ಟೋರ್‌, ‘ತೃತೀಯಲಿಂಗಿಗಳ ಸೋಗಿನಲ್ಲಿ ನಗರದ ಕದ್ರಿ ಉದ್ಯಾನ ಹಾಗೂ ಇತರ ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಪೊಲೀಸ್‌, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು  ತೃತೀಯಲಿಂಗಿಗಳ  ಪುನರ್ವಸತಿಗೂ ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದರು.

ದಲಿತ ಮುಖಂಡ ಗಿರೀಶ್ ಕುಮಾರ್‌ ಮಾತನಾಡಿ, ‘ಕೆಲವರು ತೃತೀಯಲಿಂಗಿಗಳ ವೇಷಧರಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಜಿಲ್ಲಾಡಳಿತವು ತೃತೀಯ ಲಿಂಗಿಗಳಿಗೆ ಗುರುತಿನ ಚೀಟಿ ನೀಡಿದೆ. ಅವುಗಳನ್ನು ಮರುಪರಿಶೀಲನೆ ಮಾಡುವ ಅಗತ್ಯವಿದೆ’ ಎಂದು ಎಸ್‌.ಪಿ. ಆನಂದ್‌ ಹೇಳಿದರು. 

ಪ್ರತಿಕ್ರಿಯಿಸಿದ ಡಿಸಿಪಿ (ಅಪರಾಧ ಮತ್ತು ಸಂಚಾರ) ಬಿ.ಪಿ.ದಿನೇಶ್ ಕುಮಾರ್‌, ‘ಈ ಕುರಿತು ಸಾರ್ವಜನಿಕರಿಂದ ದೂರು ಬಂದಿದ್ದರಿಂದ ಕದ್ರಿ ಉದ್ಯಾನದ ಬಳಿ ಪೊಲೀಸ್ ಚೌಕಿಯನ್ನು ತೆರೆಯಲಾಗಿದೆ.  ಇಲ್ಲಿಹಗಲು ಹಾಗೂ ರಾತ್ರಿ ಗಸ್ತು ಹೆಚ್ಚಿಸಲಾಗಿದೆ. ಎರಡು ಇಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ತೃತೀಯಲಿಂಗಿಗಳಿಗೂ ಎಚ್ಚರಿಕೆ ನೀಡಲಾಗಿದೆ‘ ಎಂದರು.

‘ತೃತೀಯಲಿಂಗಿಗಳಿಗೆ ಉದ್ಯೋಗ ಮತ್ತು ಪುನರ್ವಸತಿ ಕಲ್ಪಿಸುವ ಅಗತ್ಯದ ಬಗ್ಗೆ ಜಿಲ್ಲಾಧಿಕಾರಿಯವರಿಗೆ  ವರದಿ ಸಲ್ಲಿಸುತ್ತೇವೆ. ಅವರ ಗುರುತಿನ ಚೀಟಿಗಳನ್ನು ಪರಿಶೀಲಿಸುವಂತೆ ಪೊಲೀಸ್‌ ಅಧಿಕಾರಿಗಳಿಗೂ ನಿರ್ದೇಶನ ನೀಡುತ್ತೇವೆ’ ಎಂದು ತಿಳಿಸಿದರು.

 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆಗಳಿಗೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಕೆಲವರು ದೂರಿದರು. 

ಕಿನ್ನಿಗೋಳಿಯಲ್ಲಿ ಸ್ಥಾಪಿಸಿರುವ ರಸ್ತೆ ಉಬ್ಬುಗಳಿಗೆ ಪೇಂಟಿಂಗ್‌ ಮಾಡಿಲ್ಲ. ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗಿದೆ ಎಂದು ಶಂಕರ ಮಾಸ್ಟರ್‌ ದೂರಿದರು. 

ನಾಗೇಶ್ ಕೈರಂಗಳ, ‘ಪೊಲೀಸರು ದಲಿತ ಕಾಲೊನಿಗಳಲ್ಲಿ ಪ್ರತಿ ತಿಂಗಳೂ ಸಭೆ ನಡೆಸಬೇಕು ಎಂದು ಒತ್ತಯಿಸಿದರು.

 ಈ ಬಗ್ಗೆ ಕ್ರಮ ವಹಿಸುವಂತೆ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ)  ಸಿದ್ಧಾರ್ಥ ಗೋಯಲ್‌ ನಿರ್ದೇಶನ ನೀಡಿದರು.  ಉಳ್ಳಾಲ– ಮಾಸ್ತಿಕಟ್ಟೆ ಪ್ರದೇಶದಲ್ಲಿ ಸಮಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಹಾಗೂ ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಜೂಜು ಹಾಗು ಕೋಳಿ ಅಂಕದ ಹಾವಳಿ ಹೆಚ್ಚಾಗಿರುವ ಬಗ್ಗೆಯೂ ಕೆಲ ದಲಿತ ನಾಯಕರು ಗಮನ ಸೆಳೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.