ADVERTISEMENT

ಮಂಗಳೂರು: ಮೊಗ್ಲಿಂಗ್ ಹೆಸರಿನ ವೃತ್ತ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 14:13 IST
Last Updated 1 ಜುಲೈ 2024, 14:13 IST
ಕರ್ನಾಟಕ ಥಿಯೊಲಾಜಿಕಲ್ ಕಾಲೇಜು ಆವರಣದಲ್ಲಿ ಮಂಗಳೂರ ಸಮಾಚಾರದ ಸಂಪಾದಕ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಅವರನ್ನು ಸ್ಮರಿಸಲಾಯಿತು
ಕರ್ನಾಟಕ ಥಿಯೊಲಾಜಿಕಲ್ ಕಾಲೇಜು ಆವರಣದಲ್ಲಿ ಮಂಗಳೂರ ಸಮಾಚಾರದ ಸಂಪಾದಕ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಅವರನ್ನು ಸ್ಮರಿಸಲಾಯಿತು   

ಮಂಗಳೂರು: ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರದ ಸಂಪಾದಕ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಅವರ ಹೆಸರನ್ನು ಮಂಗಳೂರಿನ ಪ್ರಮುಖ ರಸ್ತೆಗೆ ಇರಿಸಬೇಕು, ಅವರ ಹೆಸರಿನಲ್ಲಿ ವೃತ್ತವೊಂದನ್ನು ನಿರ್ಮಿಸಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೊಕಿಂ ಸ್ಟ್ಯಾನಿ ಆಲ್ವಾರಿಸ್ ಆಗ್ರಹಿಸಿದರು.

ನಗರದ ಬಲ್ಮಠದಲ್ಲಿರುವ ಕರ್ನಾಟಕ ಥಿಯೊಲಾಜಿಕಲ್ ಕಾಲೇಜು ಆವರಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸೋಮವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಹರ್ಮನ್ ಮೊಗ್ಲಿಂಗ್ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್ ಮಾತನಾಡಿ, ಮಂಗಳೂರ ಸಮಾಚಾರ ಪತ್ರಿಕೆ ಆರಂಭಿಸುವ ಮೂಲಕ ಪತ್ರಿಕೋದ್ಯಮಕ್ಕೆ ಅಡಿಪಾಯ ಹಾಕಿದವರು ಹರ್ಮನ್ ಮೋಗ್ಲಿಂಗ್. ಪತ್ರಿಕಾ ಧರ್ಮವನ್ನು ಪಾಲಿಸುವ ಬಗ್ಗೆ ಬದ್ಧತೆಯಿಂದ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರು ಕಾರ್ಯನಿರ್ವಹಿಸಬೇಕಾದ ಅಗತ್ಯ ಈಗ ಒದಗಿದೆ ಎಂದು ಹೇಳಿದರು.

ADVERTISEMENT

ಕಿಟೆಲ್, ಮೊಗ್ಲಿಂಗ್, ಬ್ರಿಗೆಲ್, ಗುಂಡರ್ಟ್ ಮೊದಲಾದ ಯುಗ ಪ್ರವರ್ತಕರ ನೆನಪಿನಲ್ಲಿ ಬಾಸೆಲ್ ಮಿಷನ್ ಮ್ಯೂಸಿಯಂ ಆರಂಭಿಸುವ ಉದ್ದೇಶ ಇದೆ ಎಂದು ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಫಾದರ್ ಎಚ್.ಎಂ.ವಾಟ್ಸನ್ ತಿಳಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಯೂನಿಯನ್ ಗೌರವ ಅಧ್ಯಕ್ಷ ಹರೀಶ್ ಬಂಟ್ವಾಳ್ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಪಿಂಟೊ ನಿರ್ವಹಿಸಿದರು. ಕಾರ್ಯದರ್ಶಿ ಗಿರಿಧರ್ ಶೆಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.