ಪುತ್ತೂರು: ಜಿಲ್ಲೆಯ ರೈತರ ಬದುಕಿನ ಬೆಳೆಯಾದ ಅಡಿಕೆಯನ್ನು ‘ತಿಂದು ಉಗುಳುವ ವಸ್ತು’ ಎಂದು ಅತ್ಯಂತ ಕೀಳಾಗಿ ಮಾತನಾಡಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಅವರ ನಡೆ ಖಂಡನೀಯ. ಅಡಿಕೆಗೆ ಬೆಂಬಲ ಬೆಲೆ ರಾಜ್ಯ ಸರ್ಕಾರ ನೀಡಬೇಕು ಎಂದು ಹೇಳುವ ಬದಲು ಅಡಿಕೆ ಕಳ್ಳಸಾಗಾಣಿಕೆ ತಡೆಯಲು ಕೇಂದ್ರ ಸರ್ಕಾರ ಆಗ್ರಹ ಮಾಡಬೇಕಿತ್ತು ಎಂದು ಕೆಪಿಸಿಸಿ ಜಿಲ್ಲಾ ವಕ್ತಾರ ಅಮಲ ರಾಮಚಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಬೆಂಬಲ ಬೆಲೆ ಯಾವ ರೀತಿ ಕೊಡುತ್ತಾರೆ ಎಂಬುದೇ ಮಾಜಿ ಶಾಸಕರಿಗೆ ಗೊತ್ತಿಲ್ಲ. ಅಡಿಕೆಗೆ ಬೆಂಬಲ ಬೆಲೆ ಬೇಕಾಗಿಲ್ಲ. ಅಕ್ರಮ ಆಮದುನ್ನು ಕೇಂದ್ರ ಸರ್ಕಾರ ತಡೆಯಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಸುರೇಶ್ ಕುಮಾರ್ ಕೊಡ್ಗಿ ಅವರು ಆಗ್ರಹಿಸಿದ್ದಾರೆ. ರಾಜಕೀಯ ದೃಷ್ಟಿಯಿಂದ ರಾಜ್ಯ ಸರ್ಕಾರವನ್ನು ರೈತವಿರೋಧಿ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ’ ಎಂದು ದೂರಿದರು.
ಅಡಿಕೆ ಬೆಳೆಗಾರರ ಲಾಬಿ ಇಲ್ಲ ಎನ್ನುವ ಮಾಜಿ ಶಾಸಕ ಸಂಜೀವ ಮಠಂದೂರು ಶಾಸಕನಾಗಿದ್ದಾಗ ಏನು ಮಾಡಿದ್ದರು. ಯಾಕೆ ರೈತ ಲಾಬಿ ಸೃಷ್ಟಿಸಲು ಸಾಧ್ಯವಾಗಿಲ್ಲ. ಈಗಿನ ಶಾಸಕ ಅಸೋಕ್ ರೈ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಅಡಿಕೆಯ ಕಳ್ಳಸಾಗಾಣಿಕೆ ತಡೆಯುವಂತೆ ಆಗ್ರಹಿಸಿದ್ದಾರೆ. ರೈತರಿಗೆ ಕುಮ್ಕಿ ಭೂಮಿ ಕೊಡುವಂತೆ ಆಗ್ರಹಿಸಿದ್ದಾರೆ ಎಂದರು.
ಕಾಂಗ್ರೆಸ್ ಕಿಸಾನ್ ಘಟಕದ ತಾಲ್ಲೂಕು ಅಧ್ಯಕ್ಷ ಮುರಳೀಧರ ಕೆಮ್ಮಾರ, ಕಾಂಗ್ರೆಸ್ ಮುಖಂಡರಾದ ಶಕೂರ್, ಶಶಿಕಿರಣ್ ರೈ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.