ADVERTISEMENT

ಡೆಂಗಿ ಪರಿಣಾಮಕಾರಿ ತಡೆಗೆ ಸೊಳ್ಳೆ ನಿಯಂತ್ರಣವೇ ದಾರಿ: ಚ್‌.ಆರ್‌.ತಿಮ್ಮಯ್ಯ

ಸಂವಾದದಲ್ಲಿ ಡಿಎಚ್‌ಒ ಡಾ.ಎಚ್‌.ಆರ್‌.ತಿಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 5:09 IST
Last Updated 21 ಜೂನ್ 2024, 5:09 IST
ಸಂವಾದದಲ್ಲಿ ಡಾ.ಎಚ್‌.ಆರ್‌.ತಿಮ್ಮಯ್ಯ ಮಾತನಾಡಿದರು. ಡಾ.ನವೀನಚಂದ್ರ ಹಾಗೂ ಖಾದರ್ ಶಾ ಭಾಗವಹಿಸಿದ್ದರು
ಸಂವಾದದಲ್ಲಿ ಡಾ.ಎಚ್‌.ಆರ್‌.ತಿಮ್ಮಯ್ಯ ಮಾತನಾಡಿದರು. ಡಾ.ನವೀನಚಂದ್ರ ಹಾಗೂ ಖಾದರ್ ಶಾ ಭಾಗವಹಿಸಿದ್ದರು   

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಡೆಂಗಿ ರೋಗ ಹರಡುವ ಈಡಿಸ್‌ ಸೊಳ್ಳೆಗಳ ಸಂತಾನೋತ್ಪತ್ತಿಗೆ  ಅನುಕೂಲಕರ ವಾತಾವರಣ ರೂಪುಗೊಳ್ಳುತ್ತಿದೆ. ಈ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯುವ ಮೂಲಕ ಡೆಂಗಿ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್‌.ಆರ್‌.ತಿಮ್ಮಯ್ಯ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಾರ್ತಾ ಇಲಾಖೆಯ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಡೆಂಗಿ ನಿಯಂತ್ರಣ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

'ಈಡೀಸ್‌ ಸೊಳ್ಳೆ ಜೀವಿತಾವಧಿಯಲ್ಲಿ ಆರು ಸಾವಿರದಷ್ಟು ಮೊಟ್ಟೆಗಳನ್ನು ಇಡಬಲ್ಲುದು. ಈ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಣವೇ ಡೆಂಗಿ ತಡೆಗೆ ಪರಿಣಾಮಕಾರಿ ವಿಧಾನ. ಇದಕ್ಕಾಗಿ ಮನೆಯ ಸುತ್ತ ಮುತ್ತ  ಸ್ವಚ್ಛ ನೀರು ನಿಲ್ಲದಂತೆ ನೋಡಿಕೊಳ್ಳಬೇಕು’ ಎಂದರು.

ADVERTISEMENT

‘ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ಪತ್ತೆ ಹಚ್ಚಿ ನಿರ್ಮೂಲನೆ ಮಾಡಲು ತಿಂಗಳ ಮೊದಲ ಮತ್ತು ಮೂರನೇ ಶುಕ್ರವಾರ ಲಾರ್ವಾ ಸಮೀಕ್ಷೆ ನಡೆಸಲಾಗುತ್ತದೆ. ಈ ಸಲುವಾಗಿ ಮನೆ ಮನೆಗೆ ಭೇಟಿ ನೀಡುವ ಆರೋಗ್ಯ ಕಾರ್ಯಕರ್ತರಿಗೆ ಸಹಕರಿಸಿ’ ಎಂದು ಅವರು ಕೋರಿದರು. 

ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನಚಂದ್ರ, ‘ಜಿಲ್ಲೆಯಲ್ಲಿ ಈ ವರ್ಷ ಡೆಂಗಿಯ 211 ಪ್ರಕರಣಗಳು ಪತ್ತೆಯಾಗಿವೆ. ಸದ್ಯಕ್ಕೆ  29 ಮಂದಿ ಡೆಂಗಿ ಹೊಂದಿದ್ದಾರೆ’ ಎಂದರು.

‘ಬಾಟಲಿ ಮುಚ್ಚಳದಲ್ಲಿ ನಿಲ್ಲುವ ನೀರು ಕೂಡಾ ಸೊಳ್ಳೆ ಉತ್ಪತ್ತಿಗೆ ನೆರವಾಗಬಹುದು. ಮನೆ ಒಳಗೆ ಸೊಳ್ಳೆ ಉತ್ಪತ್ತಿಯಾಗುವ ತಾಣಗಳನ್ನು ಗುರುತಿಸುವುದು ಕಷ್ಟ.‌ ಈ ಸೊಳ್ಳೆಗಳ ಮೊಟ್ಟೆ ಎರಡು ವರ್ಷ ಜೀವಂತವಿರುತ್ತದೆ. ನೀರಿನ ಸಂಪರ್ಕ ಸಿಕ್ಕಾಗ ಅದರಿಂದ ಸೊಳ್ಳೆ ಉತ್ಪತ್ತಿಯಾಗುತ್ತದೆ. ನೀರು ಸಂಗ್ರಹಿಸುವ ತೊಟ್ಟಿಗಳನ್ನು ವಾರಕ್ಕೆ ಒಮ್ಮೆಯಾದರೂ ತಿಕ್ಕಿ ತೊಳೆದು ಸ್ವಚ್ಛಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ಈ ಸೊಳ್ಳೆ ಹಗಲಿನಲ್ಲಿ ಸಕ್ರಿಯವಾಗಿರುತ್ತದೆ. ಸೊಳ್ಳೆ ಕಡಿತದಿಂದ ರಕ್ಷಣೆಗೆ ಕಹಿಬೇವಿನ ಎಣ್ಣೆ, ಲಿಂಬೆಹುಲ್ಲಿನ ಎಣ್ಣೆಯನ್ನು ಮೈಗೆ ಹಚ್ಚಬಹುದು’ ಎಂದರು.

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಭಾಗವಹಿಸಿದ್ದರು.

ಡೆಂಗಿ ಲಕ್ಷಣಗಳು:  ಇದ್ದಕ್ಕಿದ್ದಂತೆ ತೀವ್ರ ಜ್ವರ, ಮೈ–ಕೈ ನೋವು, ಕೀಲು ನೋವು, ತೀವ್ರ ತಲೆನೋವು, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತು, ಉಲ್ಬಣದ ಸ್ಥಿತಿಯಲ್ಲಿ ಬಾಯಿ, ಮೂಗು, ವಸಡುಗಳಲ್ಲಿ ರಕ್ತಸ್ರಾವ, ವಾಕರಿಕೆ, ವಾಂತಿ.

ದಕ್ಷಿಣ ಕನ್ನಡ: ಡೆಂಗಿ ಪ್ರಕರಣಗಳ ವಿವರ ವರ್ಷ;ಪ್ರಕರಣಗಳು 2020;239 2021;295 2022;388 2023;566 2024;211 –0–

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.