ADVERTISEMENT

ಅರ್ಹರಿಗೆ ಅಗತ್ಯ ಸವಲತ್ತು ಕಲ್ಪಿಸಿ: ರಾಜೇಂದ್ರ

ಇಲಾಖೆಗಳ ಪ್ರಗತಿಯ ಪರಿಶೀಲನೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 7:11 IST
Last Updated 1 ಏಪ್ರಿಲ್ 2022, 7:11 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ‘ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನ’ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿದರು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ‘ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನ’ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿದರು   

ಮಂಗಳೂರು: ‘ಅಲ್ಪಸಂಖ್ಯಾತ ವರ್ಗದ ಕಲ್ಯಾಣಕ್ಕೆ ಸರ್ಕಾರದಿಂದ ಜಾರಿಗೊಳಿಸಿದ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಂಗಮೇಶ್ವರ ಅವರಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ‘ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನ’ ಸಭೆಯಲ್ಲಿ ಅವರು ವಿವಿಧ ಇಲಾಖೆಗಳ ಪ್ರಗತಿಯ ಪರಿಶೀಲನೆ ನಡೆಸಿದರು.

‘ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಆ ಯೋಜನೆಗಳ ಸಮರ್ಪಕ ಅನುಷ್ಠಾನ ಆಗಬೇಕು. ಯೋಜನೆಗಳ ಗುರಿ ಸಾಧಿಸುವುದು ಮಾತ್ರವಲ್ಲ, ಯೋಜನೆಗಳ ಫಲ ನೈಜ ಫಲಾನುಭವಿಗಳಿಗೆ ಸಿಗಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ವಿವಿಧ ಯೋಜನೆಗಳು ಹಾಗೂ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಬೇಕು’ ಎಂದರು.

ADVERTISEMENT

‘ವಿದೇಶಗಳಲ್ಲಿ ವೃತ್ತಿ ನಿರ್ವಹಿಸುತ್ತಿರುವ ಭಾರತೀಯರಿಗೆ ಮತದಾರರ ಗುರುತಿನ ಚೀಟಿಗೆ ಫಾರಂ-6ಎ ಮುಖಾಂತರ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಪ್ರಯೋಜನ ಪಡೆಯುವಂತೆ ಜಾಗೃತಿ ಮೂಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಲಾಭವನ್ನು ಅಲ್ಪಸಂಖ್ಯಾತರ ಫಲಾನುಭವಿಗಳು ಪಡೆಯಬೇಕು. ಅದರ ಪ್ರಯೋಜನ ಪಡೆದಿರುವ ಗರ್ಭಿಣಿಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು. ಶಾಲೆಯಿಂದ ಹೊರಗುಳಿದ ಪ್ರತಿ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ, ಅಲ್ಪಸಂಖ್ಯಾತರ ಇಲಾಖೆಯ ಯೋಜನೆಗಳ ಮಾಹಿತಿ ನೀಡಿ ಅಂತಹ ಮಕ್ಕಳ ಪೋಷಕರ ಮನವೊಲಿಸಿ ಅವರನ್ನು ಮರಳಿ ಶಾಲೆಗೆ ಕರೆತರುವಲ್ಲಿ ಕ್ರಮಕೈಗೊಳ್ಳಬೇಕು’ ಎಂದರು.

‘ಕೌಶಲ ಕರ್ನಾಟಕ ಯೋಜನೆ ಅಡಿ ಅಲ್ಪಸಂಖ್ಯಾತರ ಯುವಕರನ್ನು ನೋಂದಾಯಿಸಿಕೊಂಡುಅವರಿಗೆ ವಿವಿಧ ಕೌಶಲಗಳ ತರಬೇತಿ ನೀಡಬೇಕು. ಅದಕ್ಕಾಗಿ ಸಮುದಾ ಯದಲ್ಲಿ ಜಾಗೃತಿ ಮೂಡಿಸಿ ಯುವಕರನ್ನು ನೋಂದಾಯಿಸುವ ಕೆಲಸ ಮಾಡಬೇಕು. ವಿವಿಧ ರೀತಿಯ ಸ್ವಯಂ ಉದ್ಯೋಗಕ್ಕಾಗಿ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳು ಹಾಗೂ ತರಬೇತಿ ಕಾರ್ಯಕ್ರಮಗಳಿಗೆ ವ್ಯಾಪಕ ಪ್ರಚಾರ ನೀಡಬೇಕು’ ಎಂದು ತಿಳಿಸಿದರು.

ಡಿಎಚ್‌ಒ ಡಾ.ಕಿಶೋರ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪಾಪ ಬೋವಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ವೀರಭದ್ರಪ್ಪ, ವಿಸ್ತರಣಾಧಿಕಾರಿ ಮಂಜುನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.