ADVERTISEMENT

ಕಟೀಲು ಮೇಳ ಯಕ್ಷಗಾನಕ್ಕೆ ಕಾಲಮಿತಿ ಬೇಡ: ಸೇವಾರ್ಥಿಗಳ ಒತ್ತಾಯ

ಕದ್ರಿ ದೇವಸ್ಥಾನದಲ್ಲಿ ನಡೆದ ಸೇವಾರ್ಥಿಗಳ ಸಭೆಯಲ್ಲಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 4:38 IST
Last Updated 20 ಸೆಪ್ಟೆಂಬರ್ 2022, 4:38 IST
   

ಮಂಗಳೂರು: ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಮೇಳಗಳು ಪ್ರದರ್ಶಿಸುವ ಹರಕೆಯ ಆಟಗಳಿಗೆ ಕಾಲಮಿತಿ ನಿಗದಿಪಡಿಸಬಾರದು ಎಂದು ಸೇವಾರ್ಥಿಗಳು ಒತ್ತಾಯಿಸಿದ್ದಾರೆ.

ಕದ್ರಿ ಮಂಜುನಾಥ ದೇವಸ್ಥಾನದ ಅಭಿಷೇಕ ಮಂದಿರದಲ್ಲಿ ಭಾನುವಾರ ಸಭೆ ನಡೆಸಿದ ಸೇವಾರ್ಥಿಗಳು, ಯಕ್ಷಗಾನ ಬಯಲಾಟ ಸೇವಾ ಸಮಿತಿಗಳು ಮತ್ತು ಹತ್ತು ಸಮಸ್ತರ ಪ್ರತಿನಿಧಿಗಳು ಈ ಕುರಿತು ನಿರ್ಣಯ ಕೈಗೊಂಡರು.

ಕಟೀಲು ಮೇಳದ ಸೇವೆಯ ಆಟವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಊರ ಹಬ್ಬದ ರೀತಿ ರಾತ್ರಿ ಇಡೀ ಏರ್ಪಡಿಸುವುದು ಸಂಪ್ರದಾಯ. ಬಯಲಾಟದ ಮೂಲ ಸ್ವರೂಪಕ್ಕೆ ಧಕ್ಕೆ ತರುವುದು ಉಚಿತವಲ್ಲ. ಯಕ್ಷಗಾನವನ್ನು ಕಾಲಮಿತಿಗೊಳಪಡಿಸಲು ಮೇಳದ ಆಡಳಿತವು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಸೇವೆಯ ಯಕ್ಷಗಾನವನ್ನು ರಾತ್ರಿ10.30ರ ಕಾಲಮಿತಿಗೆ ಒಳಪಡಿಸುವ ನಿರ್ಧಾರವನ್ನು ಕೈಬಿಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲು 15 ಮಂದಿ ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ರಚಿಸಲಾಯಿತು.

ADVERTISEMENT

‘ಸೇವೆಯ ಆಟವನ್ನು ಕಾಲಮಿತಿಗೆ ಒಳಪಡಿಸುವ ಬಗ್ಗೆ ಮೇಳದ ಆಡಳಿತ ಅಧಿಕೃತವಾಗಿ ಪ್ರಕಟಿಸಿಲ್ಲ. ಇನ್ನು ಏಳು ದಿನಗಳ ಒಳಗೆ ಸಂಬಂಧಿಸಿದವರು ಅಧಿಕೃತವಾಗಿ ಸ್ಪಷ್ಟನೆ ನೀಡಬೇಕು’ ಎಂದೂ ಕೆಲವರು ಸಭೆಯಲ್ಲಿ ಒತ್ತಾಯಿಸಿದರು.

‘ಕಟೀಲು ಮೇಳದ ಪ್ರದರ್ಶನವನ್ನು ಕೂಡ ಮುಂದಿನ ತಿರುಗಾಟದಿಂದಲೇ ಕಾಲಮಿತಿಗೊಳಪಡಿಸಲಾಗುವುದು ಎಂಬ ಮಾಹಿತಿ ದೊರೆತಿದೆ. ಭಕ್ತರ ಭಾವನೆ ದಾಖಲಿಸಲು ಈ ಸಭೆ ನಡೆಸಿದ್ದೇವೆ. ಇಲ್ಲಿ ಚರ್ಚೆಯಾದ ವಿಚಾರಗಳನ್ನು ಮೇಳದ ಆಡಳಿತ ಮಂಡಳಿ, ಜನಪ್ರತಿನಿಧಿಗಳು, ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ’ ಎಂದು ಸೇವಾರ್ಥಿ ಅಶೋಕ್ ಕೃಷ್ಣಾಪುರ ತಿಳಿಸಿದರು.

ಹಿರಿಯ ಸೇವಾರ್ಥಿ ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕದ್ರಿ ದೇವಸ್ಥಾನದ ಟ್ರಸ್ಟಿ ರಾಜೇಶ್ ಕೊಂಚಾಡಿ, ಸೇವಾರ್ಥಿಗಳಾದ ಕೃಷ್ಣಪ್ಪ ಪೂಜಾರಿ, ದುರ್ಗಾಪ್ರಸಾದ್ ಹೊಳ್ಳ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.