ADVERTISEMENT

ಭಗವದ್ಗೀತೆಯ ಸಮರ್ಪಣೆಯಿಂದ ಬದುಕು ಅರ್ಥಪೂರ್ಣ: ಸುಗುಣೇಂದ್ರ ಸ್ವಾಮೀಜಿ

ಪುತ್ತೂರಿನಲ್ಲಿ ಪೌರ ಸನ್ಮಾನ ಸ್ವೀಕರಿಸಿದ ಪುತ್ತಿಗೆ ಸುಗುಣೇಂದ್ರ ಶ್ರೀ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 13:43 IST
Last Updated 5 ಜನವರಿ 2024, 13:43 IST
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪೌರ ಸನ್ಮಾನ ಕಾರ್ಯಕ್ರಮವನ್ನು ಉಡುಪಿ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪೌರ ಸನ್ಮಾನ ಕಾರ್ಯಕ್ರಮವನ್ನು ಉಡುಪಿ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು   

ಪುತ್ತೂರು: ‘ಭಗವಂತನ ಅನುಗ್ರಹಕ್ಕಾಗಿ ನಾವೆಲ್ಲ ದೇವರ ಪೂಜೆ, ಸೇವೆ ಮಾಡಬೇಕು. ಭಗವದ್ಗೀತೆಯನ್ನು ಸಮರ್ಪಣೆ ಮಾಡಿದಾಗ ನಮ್ಮ ಬದುಕು ಇನ್ನಷ್ಟು ಅರ್ಥಪೂರ್ಣವಾಗುತ್ತದೆ ಎಂದು ನಾಲ್ಕನೆಯ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಉಡುಪಿ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಪುತ್ತೂರಿನ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಗುರುವಾರ ರಾತ್ರಿ ಪುತ್ತೂರು ಪೌರ ಸನ್ಮಾನ ಸಮಿತಿಯ ವತಿಯಿಂದ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಲೋಕ ಕಲ್ಯಾಣಾರ್ಥವಾದ ಪೂಜೆಯನ್ನು ಎಲ್ಲರು ಸೇರಿಕೊಂಡು ಮಾಡಿದರೆ ಅದಕ್ಕೆ ವಿಶೇಷವಾದ ಅರ್ಥ ಬರುತ್ತದೆ. ವಿಶ್ವದ ಎಲ್ಲಾ ಭಕ್ತರು ಸೇರಿಕೊಂಡು ಮಾಡಬೇಕೆಂಬ ಉದ್ದೇಶದಿಂದ ವಿಶ್ವಗೀತಾ ಪರ್ಯಾಯ ಮಾಡಿದ್ದೇವೆ. ಭಗವಂತನ ಅನುಗ್ರಹ ವಿಶ್ವಕ್ಕೆ ಅಗತ್ಯವಿದೆ. ದೇವತಾರಾಧನೆ ಎಷ್ಟು ಜಾಸ್ತಿ ನಡೆಯುತ್ತದೆಯೋ ಅಷ್ಟು ಒಳ್ಳೆಯದಾಗುತ್ತದೆ’ ಎಂದರು.

ADVERTISEMENT

ಪೌರ ಸನ್ಮಾನ ಸಮಿತಿ ಅಧ್ಯಕ್ಷ ಬಲರಾಮ ಆಚಾರ್ಯ ಮಾತನಾಡಿ, ‘ಜನತೆಗೆ ಸನಾತನ ಧರ್ಮದ ತಿರುಳನ್ನು ತಿಳಿಸುವ ಕೆಲಸ ಆಗಬೇಕು. ಅದನ್ನು ತಿಳಿದಾಗ ಮಾತ್ರ ನಮ್ಮ ಧರ್ಮ ಗಟ್ಟಿಯಾಗಲು ಸಾಧ್ಯ ಎಂಬ ನಂಬಿಕೆಯೊಂದಿಗೆ ಪುತ್ತಿಗೆ ಶ್ರೀಗಳು ಪರ್ಯಾಯವನ್ನು ವಿಶ್ವಗೀತಾ ಪರ್ಯಾಯವನ್ನಾಗಿಸಿದ್ದಾರೆ. ಅವರ ದೂರದೃಷ್ಟಿ, ಸಮಾಜದ ಬಗ್ಗೆ ಅವರಲ್ಲಿರುವ ಚಿಂತನೆಯನ್ನು ಇದರಿಂದ ಅರಿಯಬಹುದು’ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ‘ಋಷಿ ಪರಂಪರೆ ಜಗತ್ತಿಗೆ ಮತ್ತೊಮ್ಮೆ ಮಾರ್ಗದರ್ಶನ ಮಾಡುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿಮರ್ಾಣಗೊಂಡು ಲೋಕಾರ್ಪಣೆಯಾಗುವ ಸಂದರ್ಭ ಪುತ್ತಿಗೆ ಶ್ರೀಗಳ ಪರ್ಯಾಯವು ವಿಶೇಷವಾಗಿದೆ’ ಎಂದರು. 

ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಚ್ ಮಾಧವ ಭಟ್ ಅಭಿನಂದನಾ ಭಾಷಣ ಮಾಡಿದರು. ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿದರು.

ನಾಲ್ಕನೆಯ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಉಡುಪಿ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ಸುಶೀಂದ್ರ ತೀರ್ಥ ಶ್ರೀಪಾದ ಸ್ವಾಮೀಜಿ ಅವರನ್ನು  ಪೌರ ಸನ್ಮಾನ ಸಮಿತಿಯಿಂದ ಗೌರವಿಸಲಾಯಿತು. ₹1.75ಲಕ್ಷ ನಿಧಿ ಸಮರ್ಪಣೆ ಮಾಡಲಾಯಿತು. ಎ.ಅವಿನಾಶ್ ಕೊಡೆಂಕಿರಿ ಸನ್ಮಾನ ಪತ್ರ ವಾಚಿಸಿದರು.

ನಾಲ್ಕನೆಯ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಉಡುಪಿ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ಸುಶೀಂದ್ರ ತೀರ್ಥ ಶ್ರೀಪಾದ ಸ್ವಾಮೀಜಿ ಅವರನ್ನು  ಪೌರ ಸನ್ಮಾನ ಸಮಿತಿಯಿಂದ ಗೌರವಿಸಲಾಯಿತು

ಕೆ.ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ನಿಡ್ವಣ್ಣಾಯ ವಂದಿಸಿದರು. ಸಮಿತಿ ಸದಸ್ಯ ರಾಜೇಶ್ ಬನ್ನೂರು, ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಮನ್ಮಥ ಶೆಟ್ಟಿ ನಿರೂಪಿಸಿದರು.

ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.