ADVERTISEMENT

ಧರ್ಮಸ್ಥಳದ ಬಗ್ಗೆ ವದಂತಿ | ಯಾವ ತನಿಖೆಗೂ ಸಿದ್ಧ: ವೀರೇಂದ್ರ ಹೆಗ್ಗಡೆ

ಧರ್ಮಸಂರಕ್ಷಣ ರಥಯಾತ್ರೆ: ಭಕ್ತರು, ಅಭಿಮಾನಿಗಳ ಪಾದಯಾತ್ರೆಯಲ್ಲಿ ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2023, 20:09 IST
Last Updated 29 ಅಕ್ಟೋಬರ್ 2023, 20:09 IST
ಪಾದಯಾತ್ರೆಯಲ್ಲಿ ಬಂದ ಭಕ್ತರು ಹಾಗೂ ಧರ್ಮಸ್ಥಳದ ಅಭಿಮಾನಿಗಳು
ಪಾದಯಾತ್ರೆಯಲ್ಲಿ ಬಂದ ಭಕ್ತರು ಹಾಗೂ ಧರ್ಮಸ್ಥಳದ ಅಭಿಮಾನಿಗಳು   

ಉಜಿರೆ: ‘ಧರ್ಮಸ್ಥಳದ ಬಗ್ಗೆ ವದಂತಿಯನ್ನು ಹಬ್ಬಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಯಾವ ಬಗೆಯ ತನಿಖೆಗೂ ಸಿದ್ಧ’ ಎಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಎರಡು ಧರ್ಮ ಸಂರಕ್ಷಣ ರಥಗಳು ಭಾನುವಾರ ಧರ್ಮಸ್ಥಳಕ್ಕೆ ಮೆರವಣಿಗೆಯಲ್ಲಿ ಬಂದಾಗ ದೇವಸ್ಥಾನದ ಎದುರು ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಂಜುನಾಥ ಸ್ವಾಮಿ ವಿಷವನ್ನು ಕಂಠದಲ್ಲಿ ಇರಿಸಿಕೊಂಡು ಲೋಕಕಲ್ಯಾಣ ಮಾಡುವ ದೇವರು. ಇಂಥ ಮಂಜುನಾಥನ ಧರ್ಮಸ್ಥಳದ ಅಭಿಮಾನಿ ಭಕ್ತರು ಸ್ವಯಂಪ್ರೇರಿತರಾಗಿ ಫಲಾಪೇಕ್ಷೆ ಇಲ್ಲದೆ ಕ್ಷೇತ್ರದ ರಕ್ಷಣೆಗಾಗಿ ಮಾಡಿರುವ ಸೇವೆ ಶ್ಲಾಘನೀಯ’ ಎಂದರು.

ಕುಂದಾಪುರದಿಂದ ಹೊರಟ ಮೆರವಣಿಗೆ ಭಾನುವಾರ ಬೆಳಿಗ್ಗೆ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಿಂದ ಮುಂದುವರಿಯಿತು. ಉಜಿರೆಯಿಂದ ಸಾವಿರಾರು ಭಕ್ತರು ಮತ್ತು ಧರ್ಮಸ್ಥಳದ ಅಭಿಮಾನಿಗಳು ಪಾದಯಾತ್ರೆಯಲ್ಲಿ ಬಂದರು. ಅವರನ್ನು ಉದ್ದೇಶಿಸಿ ವೀರೇಂದ್ರ ಹೆಗ್ಗಡೆ ಅವರು ಮಾತನಾಡಿದರು.

ADVERTISEMENT

‘ದೇಶ ಹಾಳು ಮಾಡಲು ಅಲ್ಲಿನ ಧರ್ಮ, ಸಂಸ್ಕೃತಿಗೆ ಹಾನಿ ಮಾಡುತ್ತಾರೆ. ಧರ್ಮಸ್ಥಳದ ಬಗ್ಗೆಯೂ ಇಂಥ ಪಿತೂರಿ ನಡೆದಿದೆ. ನನ್ನ ಮನ, ವಚನ, ಕಾಯ ಪವಿತ್ರವಾಗಿದೆ. ಶ್ರೀ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಹಾಗೂ ಧರ್ಮದೇವತೆಯ ಅಭಯ, ಅನುಗ್ರಹ ನನ್ನ ಕಾರ್ಯಗಳಿಗೆ ಇದೆ’ ಎಂದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಠಾಧಿಪತಿಗಳು ಹಣ್ಣು, ತಾಂಬೂಲ, ಕಾಯಿ, ವೀಳ್ಯದೆಲೆ ಇರುವ ಹರಿವಾಣಕ್ಕೆ ಮಂತ್ರಾಕ್ಷತೆ ಹಾಕಿದರು. ಅದನ್ನು ವೇದಿಕೆಯ ಮಧ್ಯದಲ್ಲಿ ಕುಳಿತಿದ್ದ ಹೆಗ್ಗಡೆಯವರಿಗೆ ಹಸ್ತಾಂತರಿಸಲಾಯಿತು. ‘ಧರ್ಮ ಹಾಗೂ ಧರ್ಮಸ್ಥಳದ ರಕ್ಷಣೆಗೆ ಸದಾ ನಿಮ್ಮೊಂದಿಗಿದ್ದೇವೆ’ ಎಂದು ಎಲ್ಲರೂ ಸಂಕಲ್ಪ ಮಾಡಿದರು.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ, ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕರಿಂಜೆಯ ಮುಕ್ತಾನಂದ ಸ್ವಾಮೀಜಿ, ಫಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ, ಸಂಸದ ನಳಿನ್‍ ಕುಮಾರ್ ಕಟೀಲ್ ಮತ್ತು ಶಾಸಕ ಹರೀಶ್‍ಪೂಂಜ ಇದ್ದರು.

ಕೊಲ್ಲೂರು ಮತ್ತು ಮಂಗಳೂರಿನ ಕದ್ರಿ ದೇವಸ್ಥಾನದಿಂದ ಹೊರಟ ಧರ್ಮಸಂರಕ್ಷಣ ರಥ ಉಜಿರೆಯ ಶ್ರೀ ಜನಾರ್ದನಸ್ವಾಮಿ ದೇವಸ್ಥಾನಕ್ಕೆ ತಲುಪಿದಾಗ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‍ ಕೃಷ್ಣ ಪಡ್ವೆಟ್ನಾಯ, ಶಾಸಕ ಹರೀಶ್ ಪೂಂಜ, ಸಂಚಾಲಕ ಶಶಿಧರ ಶೆಟ್ಟಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಸ್ವಾಗತಿಸಿದರು.

ಕನ್ಯಾಡಿ ಬದ್ರಿಯಾ ಮಸೀದಿ ಬಳಿ ಮುಸ್ಲಿಮರು ಪಾದಯಾತ್ರಿಗಳಿಗೆ ಪಾನೀಯ ವಿತರಿಸಿದರು. ಸಾವಿರಾರು ಭಕ್ತರು ಉಜಿರೆಯಿಂದ ಧರ್ಮಸ್ಥಳಕ್ಕೆ ‘ಹರಹರ ಮಹಾದೇವ’ ಘೋಷಣೆಯೊಂದಿಗೆ ಸಾಗಿದರು. ಧರ್ಮಸ್ಥಳದ ಮುಖ್ಯ ಪ್ರವೇಶದ್ವಾರದ ಬಳಿ ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್ ಪಾದಯಾತ್ರಿಗಳನ್ನು ಸ್ವಾಗತಿಸಿದರು.

ಪಾದಯಾತ್ರೆಯಲ್ಲಿ ಬಂದ ಭಕ್ತರು ಹಾಗೂ ಧರ್ಮಸ್ಥಳದ ಅಭಿಮಾನಿಗಳು

ಯಾತ್ರೆಯಲ್ಲಿ ಯು.ಟಿ.ಖಾದರ್ ಭಾಗಿ

ಮಂಗಳೂರಿನ ಕದ್ರಿ ದೇವಸ್ಥಾನದಿಂದ ಭಾನುವಾರ ಬೆಳಿಗ್ಗೆ ಹೊರಟ ಯಾತ್ರೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪಾಲ್ಗೊಂಡು ಶುಭ ಕೋರಿದರು. ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಅವರು ನಂತರ ಜ್ಯೋತಿ ಬೆಳಗಿಸಲು ಸ್ವಾಮೀಜಿಯವರ ಜೊತೆಯಾದರು. ಕದ್ರಿ ಯೋಗೀಶ್ವರ ಮಠದ ಸ್ವಾಮೀಜಿ ಶರವು ದೇವಾಲಯದ ರಾಘವೇಂದ್ರ ಶಾಸ್ತ್ರಿ ಕಟೀಲು ದೇವಸ್ಥಾನದ ಲಕ್ಷ್ಮಿನಾರಾಯಣ ಅಸ್ರಣ್ಣ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.