ADVERTISEMENT

ಭಗವಾನ್ ಬಾಹುಬಲಿ ಸ್ವಾಮಿಗೆ 504 ಕಲಶಗಳಿಂದ ಮಸ್ತಕಾಭಿಷೇಕ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 4:23 IST
Last Updated 1 ಮಾರ್ಚ್ 2024, 4:23 IST
ಮಹಾಮಸ್ತಕಾಭಿಷೇಕದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು
ಮಹಾಮಸ್ತಕಾಭಿಷೇಕದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು   

ಉಜಿರೆ: ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದ ಅಂಗವಾಗಿ ಗುರುವಾರ ವೇಣೂರಿನಲ್ಲಿ ನಿತ್ಯವಿಧಿ ಜೊತೆಗೆ ಗಂಧ ಯಂತ್ರಾರಾಧನಾ ವಿಧಾನ, ಕೇವಲಜ್ಞಾನ ಕಲ್ಯಾಣ ಮೊದಲಾದ ಧಾರ್ಮಿಕ ವಿಧಿಗಳು ನಡೆದವು.

ಭಗವಾನ್ ಬಾಹುಬಲಿ ಸ್ವಾಮಿಗೆ 504 ಕಲಶಗಳಿಂದ ಮಸ್ತಕಾಭಿಷೇಕ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಮತ್ತು ಕುಟುಂಬಸ್ಥರು ಸೇವಾಕರ್ತೃಗಳಾಗಿ ಸಹಕರಿಸಿದರು.

‘ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಉಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಸಕಲ ಜೀವಿಗಳಿಗೂ ಅವರವರ ಭಾಷೆಯಲ್ಲಿ ಉಪದೇಶ ಕೇಳುವ ಸದವಕಾಶವಿದೆ’ ಎಂದು ಅಮೋಘಕೀರ್ತಿ ಮುನಿಮಹಾರಾಜರು ಹೇಳಿದರು.

ADVERTISEMENT

ಗುರುವಾರ ನಡೆದ ಸಮವಸರಣದಲ್ಲಿ ಅವರು ಮಾತನಾಡಿದರು. ಬಾಹುಬಲಿ ಸ್ವಾಮಿಗೆ ರಾತ್ರಿ ಮಸ್ತಕಾಭಿಷೇಕ ಮಾಡುವುದು ಶಾಸ್ತ್ರಸಮ್ಮತವಾಗಿದೆ. ಇದರಿಂದ ಯಾವುದೇ ದೋಷವಿಲ್ಲ. ಹಿಂಸೆ ಆಗುವುದಿಲ್ಲ. ನಿತ್ಯವೂ ಅಡುಗೆ ಮಾಡುವಾಗ, ಬಸದಿ ಜೀರ್ಣೋದ್ಧಾರ ಮಾಡುವಾಗಲೂ ಪ್ರಾಣಿ ಹಿಂಸೆ ಆಗುತ್ತದೆ. ಆದರೆ, ಅಭಿಪ್ರಾಯ, ಸಂಕಲ್ಪ, ಉದ್ದೇಶ ಪರಿಶುದ್ಧವಾಗಿದ್ದರೆ ಹಿಂಸೆ ಆಗುವುದಿಲ್ಲ ಎಂದು ಜಿನಸೇನಾಚಾರ್ಯರ ಮಹಾಪುರಾಣದಲ್ಲಿ ಹೇಳಲಾಗಿದೆ. ಹಾಗಾಗಿ ಕಾರ್ಕಳ ಮತ್ತು ವೇಣೂರಿನಲ್ಲಿ ರಾತ್ರಿ ಮಸ್ತಕಾಭಿಷೇಕ ನಡೆಸುವುದು ಶಾಸ್ತ್ರ ಸಮ್ಮತವಾಗಿದೆ ಎಂದರು.

ನೃತ್ಯ, ಸುಶ್ರಾವ್ಯ ಸಂಗೀತ, ಪಂಚ ನಮಸ್ಕಾರ ಮಂತ್ರಪಠಣದೊಂದಿಗೆ ಅಷ್ಟವಿಧಾರ್ಚನೆ ಪೂಜೆ ನಡೆಯಿತು. ಅಷ್ಟಮಂಗಳ ದ್ರವ್ಯಗಳಿಂದ ಶಾಂತಿನಾಥ ಸ್ವಾಮಿಪೂಜೆ, 24 ತೀರ್ಥಂಕರರ ಪೂಜೆ, ಶ್ರುತದೇವಿ ಪೂಜೆ ಮತ್ತು ಗಣಧರ ಪರಮೇಷ್ಟಿಗಳ ಪೂಜೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.