ಮಂಗಳೂರು:ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಪ್ರಯುಕ್ತ ನಿರ್ಮಿಸಲಾದ ಪಂಚ ಮಹಾವೈಭವ ವೇದಿಕೆ ಗುರುವಾರ ಕುಸಿದಿದೆ.
ಮಧ್ಯಾಹ್ನ ಊಟದ ವಿರಾಮದ ವೇಳೆ ಈ ಘಟನೆ ನಡೆದಿದ್ದರಿಂದ ಹೆಚ್ಚಿನ ಅನಾಹುತ ಆಗಿಲ್ಲ. ಬಾಲಕ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ.
ಕುಸಿದಿರುವ ವೇದಿಕೆಒಳಗೆ ಯಾರೂ ಸಿಕ್ಕಿ ಹಾಕಿಕೊಂಡಿಲ್ಲ. ಇಬ್ಬರಿಗಷ್ಟೇ ಸಣ್ಣಪುಟ್ಟ ಗಾಯವಾಗಿದೆ ಎಂದು ದಕ್ಷಿಣ ಕನ್ನಡ ಎಸ್ಪಿ ಲಕ್ಷ್ನೀಪ್ರಸಾದ್ ತಿಳಿಸಿದ್ದಾರೆ.
ಮಹಾಮಸ್ತಕಾಭಿಷೇಕ ಪ್ರಯುಕ್ತ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದ ಬಳಿ ಈ ಭವ್ಯ ವೇದಿಕೆ ನಿರ್ಮಿಸಲಾಗಿತ್ತು. ಮೂರು ದಿನ ಇದೇ ವೇದಿಕೆಯಲ್ಲಿ ಆದಿನಾಥನ ಕಥೆ, ಭರತ-ಬಾಹುಬಲಿ ಅವರ ಜನನ, ವಿದ್ಯಾಭ್ಯಾಸ, ಆದಿನಾಥನ ವೈರಾಗ್ಯ ಸಹಿತ ಹಲವು ಕಥಾನಕಗಳು ನೃತ್ಯ ರೂಪಕದ ಮೂಲಕ ಪ್ರದರ್ಶನಗೊಂಡಿತ್ತು.
ಗುರುವಾರ ಮಧ್ಯಾಹ್ನದ ವರೆಗೆ ಇದೇ ವೇದಿಕೆಯಲ್ಲಿ ನೃತ್ಯ ರೂಪಕ ನಡೆದಿತ್ತು. ಈ ವೇದಿಕೆಯಲ್ಲಿನ ಕಾರ್ಯಕ್ರಮಗಳು ಮುಗಿದು ಎಲ್ಲರೂ ಊಟಕ್ಕೆ ತೆರಳಿದ್ದ ವೇಳೆ ವೇದಿಕೆಯ ಒಂದು ಭಾಗದ ಕಂಬ ಕುಸಿಯಿತು. ನಿಧಾನವಾಗಿ ಚಾವಣಿ ಕುಸಿದುದರಿಂದ ಯಾವುದೇ ದೊಡ್ಡ ಅನಾಹುತ ನಡೆಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.