ಉಜಿರೆ (ದಕ್ಷಿಣ ಕನ್ನಡ): ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮಗಳಿಗೆ ಶನಿವಾರ ಚಾಲನೆ ನೀಡಲಾಯಿತು.ಸರ್ವಧರ್ಮೀಯರೂ ಪಾಲ್ಗೊಂಡಿದ್ದು, 25 ಸಾವಿರಕ್ಕೂ ಹೆಚ್ಚು ಮಂದಿ ಭೋಜನ ಸ್ವೀಕರಿಸಿದರು.
ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ವಸ್ತುಪ್ರದರ್ಶನ ಉದ್ಘಾಟಿಸಿದರು. ಕೃಷಿ, ಆರೋಗ್ಯ, ಶಿಕ್ಷಣ, ವಾಣಿಜ್ಯಸೇರಿ ಇನ್ನೂರಕ್ಕೂ ಹೆಚ್ಚು ಮಳಿಗೆಗಳಿವೆ.
ದೇವಸ್ಥಾನ, ಬಸದಿ, ಬಾಹುಬಲಿ ಬೆಟ್ಟ (ರತ್ನಗಿರಿ), ವಸತಿ ಛತ್ರಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.
ಪಾದಯಾತ್ರೆ: ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಶನಿವಾರ ಮಧ್ಯಾಹ್ನ 25 ಸಾವಿರಕ್ಕೂ ಹೆಚ್ಚು ಭಕ್ತರು ಭಜನೆ, ಪ್ರಾರ್ಥನೆ ಹಾಗೂ ಶಿವ ಪಂಚಾಕ್ಷರಿ ಪಠಣದೊಂದಿಗೆ ಧರ್ಮಸ್ಥಳದವರೆಗೆ ಪಾದಯಾತ್ರೆ ಮಾಡಿದರು.
ಇದೇ 24ರ ವರೆಗೆ ನಿತ್ಯ ರಾತ್ರಿ 9ರಿಂದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, 21ರಂದು ಅಲಿತಕಲಾಗೋಷ್ಠಿ ನಡೆಯಲಿದೆ. 22ರಂದು ಸಂಜೆ 5ಕ್ಕೆ ಸರ್ವಧರ್ಮ ಸಮ್ಮೇಳನವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸುವರು.
23ರಂದು ಸಂಜೆ 5ಕ್ಕೆ ಸಾಹಿತ್ಯ ಸಮ್ಮೇಳನವನ್ನು ಚಿತ್ರನಿರ್ದೇಶಕ ಪಿ.ಶೇಷಾದ್ರಿ ಉದ್ಘಾಟಿಸುವರು. ವಿದ್ವಾಂಸ ಡಾ.ಎಚ್.ವಿ. ನಾಗರಾಜ ರಾವ್ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಸುಶಿಕ್ಷಣ ಸೇವಾಪರ ಸಂಸ್ಥೆಯ ಸ್ಥಾಪಕ ಸತ್ಯೇಶ್ ಎನ್.ಬೆಳ್ಳೂರ್, ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಲೇಖಕಿ ಡಾ.ಗೀತಾ ವಸಂತ ಉಪನ್ಯಾಸ ನೀಡುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.