ಉಜಿರೆ: ‘ಧರ್ಮದ ಮರ್ಮವನ್ನರಿತು ನಮ್ಮನ್ನು ನಾವು ಶುದ್ಧೀಕರಿಸಿ ಜಾಗೃತಿಗಾಗಿ ಜಾಗರಣೆ ಮಾಡಬೇಕು. ಸಂಸಾರದ ಕಷ್ಟಗಳನ್ನು ಪಾರು ಮಾಡಲು ಧರ್ಮದ ಅನುಷ್ಠಾನದೊಂದಿಗೆ ದೇವರ ಅನುಗ್ರಹವೂ ಅಗತ್ಯ’ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳದಲ್ಲಿ ಮಂಗಳವಾರ ಶಿವರಾತ್ರಿ ಸಂದರ್ಭದಲ್ಲಿ ಶಿವಪಂಚಾಕ್ಷರಿ ಪಠಣದೊಂದಿಗೆ ಅಹೋರಾತ್ರಿ ಜಾಗರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು
‘ನಮ್ಮೆಲ್ಲರ ಸುಖ-ಶಾಂತಿ, ನೆಮ್ಮದಿಯೊಂದಿಗೆ ವಿಶ್ವಶಾಂತಿಗಾಗಿ ನಾವು ಪಾರ್ಥನೆ ಮಾಡಬೇಕಾದ ಅನಿವಾರ್ಯತೆ ಹಾಗೂ ಸಂಕ್ರಮಣ ಕಾಲದಲ್ಲಿ ನಾವು ಈಗ ಇದ್ದೇವೆ. ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಪಾಲನೆ ಮಾಡಬೇಕು. ಹಿತ-ಮಿತ ಆಹಾರ ಸೇವನೆಯೊಂದಿಗೆ ಶಿಸ್ತು, ಸಂಯಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು’ ಎಂದರು.
ಪಾದಯಾತ್ರಿಗಳು ಪರಿಸರ ಮಾಲಿನ್ಯ ಮಾಡಬಾರದು. ಶಿಸ್ತಿನೊಂದಿಗೆ ಪರಿಸರ ಸಂರಕ್ಷಣೆ ಮಾಡಿ ಸ್ವಚ್ಛತೆಯನ್ನೂ ಕಾಪಾಡಬೇಕು. ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಅಲ್ಲಲ್ಲಿ ಬಿಸಾಡಿ ಇತರರಿಗೆ ತೊಂದರೆ ಉಂಟುಮಾಡಬಾರದು ಎಂದು ಅವರು ಕಿವಿಮಾತು ಹೇಳಿದರು.
ಪಾದಯಾತ್ರೆಯ ರೂವಾರಿ ಬೆಂಗಳೂರಿನ ಹನುಮಂತಪ್ಪ ಗುರೂಜಿ ಮತ್ತು ಮರಿಯಪ್ಪ ಗೌಡ ಇದ್ದರು. ರಾತ್ರಿ ಇಡೀ ಭಕ್ತರು ದೇವರ ಪ್ರಾರ್ಥನೆ, ಧ್ಯಾನ, ಭಜನೆಯೊಂದಿಗೆ ಜಾಗರಣೆ ಮಾಡಿದರು.
30 ಸಾವಿರಕ್ಕೂ ಅಧಿಕ ಪಾದಯಾತ್ರಿಗಳು: ರಾಜ್ಯದ ಹಾಗೂ ಹೊರರಾಜ್ಯದ ವಿವಿಧ ಊರುಗಳಿಂದ 30 ಸಾವಿರಕ್ಕೂ ಅಧಿಕ ಪಾದಯಾತ್ರಿಗಳು ಧರ್ಮಸ್ಥಳಕ್ಕೆ ಬಂದಿದ್ದು, ಅವರನ್ನು ಮುಖ್ಯ ಪ್ರವೇಶದ್ವಾರದ ಬಳಿ ಸ್ವಾಗತಿಸಲಾಯಿತು.
ಸಾಕೇತ ಮತ್ತು ಗಂಗೋತ್ರಿ ವಸತಿ ಛತ್ರಗಳಲ್ಲಿ ಹಾಗೂ ಶಾಲೆಯಲ್ಲಿ ಉಚಿತ ವಸತಿ ಸೌಲಭ್ಯ ಮಾಡಲಾಗಿದ್ದು, ಉಜಿರೆಯ ಶಾಲಾ, ಕಾಲೇಜು ಹಾಗೂ ಇತರ ವಿದ್ಯಾಸಂಸ್ಥೆಗಳಲ್ಲಿ ಉಚಿತ ವಸತಿ ಸೌಲಭ್ಯವಿದೆ.
ದೇವಸ್ಥಾನ, ವಸತಿಛತ್ರಗಳು ಹಾಗೂ ಇತರ ಕಟ್ಟಡಗಳನ್ನು ವಿವಿಧ ವಿನ್ಯಾಸಗಳಿಂದ ಅಲಂಕರಿಸಲಾಗಿದೆ. ಉಜಿರೆಯ ಎಸ್‌ಡಿಎಂ ಆಸ್ಪತ್ರೆ, ಸಂಚಾರಿ ಆಸ್ಪತ್ರೆ, ಆಂಬುಲೆನ್ಸ್ ಮೂಲಕ ಪಾದಯಾತ್ರಿಗಳಿಗೆ ಅಗತ್ಯವಿದ್ದಲ್ಲಿ ಉಚಿತ ವೈದ್ಯಕೀಯ ತಪಾಸಣೆ ವ್ಯವಸ್ಥೆ ಮಾಡಲಾಗಿದೆ.
ನೇತ್ರಾವತಿ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು ದೇವರ ದರ್ಶನ ಪಡೆದರು. ನಂತರ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಕೆಎಸ್‌ಆರ್‌ಟಿಸಿಯಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಬಿಗಿಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.