ADVERTISEMENT

ಚಿಣ್ಣರ ನೃತ್ಯ ವೈಭವ, ಚಿತ್ತಾರಗಳ ಬೆಡಗಿನ ಲೋಕ

ಡಿಎಚ್ಐಇ 'ಎಕ್ಸ್‌ಪ್ರೆಷನ್ಸ್': ಎಸ್‌ಡಿಎಂ ಶಾಲೆಗೆ ನೃತ್ಯ ಸ್ಪರ್ಧೆಯ ಎರಡು ವಿಭಾಗದ ಮೊದಲ ಬಹುಮಾನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 4:53 IST
Last Updated 26 ನವೆಂಬರ್ 2024, 4:53 IST
ಡಿಎಚ್‌ಐಇ ‘ಎಕ್ಸ್‌ಪ್ರೆಷನ್ಸ್‌’ ನೃತ್ಯ ಸ್ಪರ್ಧೆಯ ಬಹುಮಾನ ವಿಜೇತ ತಂಡಗಳು
ಡಿಎಚ್‌ಐಇ ‘ಎಕ್ಸ್‌ಪ್ರೆಷನ್ಸ್‌’ ನೃತ್ಯ ಸ್ಪರ್ಧೆಯ ಬಹುಮಾನ ವಿಜೇತ ತಂಡಗಳು   

ಮಂಗಳೂರು: ರಂಗು ರಂಗಿನ ದಿರಿಸುಗಳಲ್ಲಿ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು ಸುಶ್ರಾವ್ಯ ಸಂಗೀತಕ್ಕೆ ಲಯಬದ್ದವಾಗಿ ನರ್ತಿಸಿದರು. ಇನ್ನೊಂದೆಡೆ, ಮದರ್ ತೆರೆಸಾ ಶಾಂತಿ ಉದ್ಯಾನದ ಹಸಿರ ಮಡಿಲಿನಲ್ಲಿ ತಮ್ಮ‌ ಕಲ್ಪನಾ ಲಹರಿಗೆ ಚಿಣ್ಣರು ಬಣ್ಣತುಂಬಿದರು...

‘ಪ್ರಜಾವಾಣಿ‘ ಬಳದ ಡೆಕ್ಕನ್ ಹೆರಾಲ್ಡ್ ಇನ್ ಎಜುಕೇಷನ್ (ಡಿಎಚ್‌ಐಇ)  ವತಿಯಿಂದ  ಪೈಲಟ್‌, ವಂಡರ್‌ಲಾ ಪಾರ್ಕ್ಸ್‌ ಆ್ಯಂಡ್‌ ರೆಸಾರ್ಟ್ಸ್ ಹಾಗೂ ಪೂರ್ವಿಕಾ ಮೊಬೈಲ್ ಸಹಯೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಇಲ್ಲಿನ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತರ ಶಾಲಾ ಪ್ರತಿಭಾ ಸ್ಪರ್ಧೆ 'ಎಕ್ಸ್‌ಪ್ರೆಷನ್ಸ್', ಪುಟಾಣಿಗಳ ನೃತ್ಯ ಹಾಗೂ ಚಿತ್ರಕಲಾ ಕೌಶಲ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತು.

ಹಿರಿಯ ಹಾಗೂ ಕಿರಿಯ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ADVERTISEMENT

ನೃತ್ಯ ಸ್ಪರ್ಧೆಯ ಹಿರಿಯರ ಹಾಗೂ ಕಿರಿಯರ ವಿಭಾಗಗಳೆರಡರಲ್ಲೂ ಉಜಿರೆಯ ಎಸ್‌ಡಿಎಂ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳ ತಂಡಗಳು ಮೊದಲ ಬಹುಮಾನ ಗೆದ್ದುಕೊಂಡವು.

ಚಿತ್ರಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಪುತ್ತೂರಿನ ವಿವೇಕಾನಂದ ಶಾಲೆಯ ನಿಲಿಷ್ಕಾ ಕೆ. ಹಾಗೂ ಕಿರಿಯರ ವಿಭಾಗದಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ ಸಿದ್ಧಿಕ್ಷಾ ಮೊದಲ ಬಹುಮಾನ ಗೆದ್ದುಕೊಂಡರು.

ಜಾನಪದ ಸೊಗಡಿನ ನೃತ್ಯ, ಸಿನಿಮಾ ಗೀತೆಗಳ ರಿಮಿಕ್ಸ್ ಹಾಡಿನ‌ ನೃತ್ಯ, ಕಂಸಾಳೆ, ಲಡಾಕ್‌ನ ಸಾಂಪ್ರದಾಯಿಕ ನೃತ್ಯ... ಹೀಗೆ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ಹೊಸ ಸಂಚಲನ ಮೂಡಿಸಿದವು. ಕರಾವಳಿಯ ಯಕ್ಷಗಾನ, ಕೇರಳದ ಕಥಕ್ಕಳಿ, ಭರತ ನಾಟ್ಯ, ಆಧುನಿಕ ಶೈಲಿ... ಹೀಗೆ ಬೇರೆ ಬೇರೆ ಬಗೆಯ ನೃತ್ಯ ಪ್ರಕಾರಗಳ ಝಲಕ್‌ಗಳೂ ಮೋಡಿ ಮಾಡಿದವು. ಒಂದನ್ನೊಂದು ಮೀರಿಸುವಂತೆ ಪ್ರದರ್ಶನ ನೀಡಿದ ತಂಡಗಳು ಚೇತೋಹಾರಿ ಅನುಭವ ಕಟ್ಟಿಕೊಡುವ ಮೂಲಕ ಚಪ್ಪಾಳೆಯ ಸುರಿಮಳೆ ಗಿಟ್ಟಿಸಿದವು. ಪೂರಕ ಪರಿಕರಗಳು ವೈವಿಧ್ಯಮಯ ಉಡುಗೆ ತೊಡುಗೆಗಳು ನೃತ್ಯ ವೈಭವಕ್ಕೆ ಮತ್ತಷ್ಟು ಮೆರುಗು ತುಂಬಿದವು. 

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿ ಫಾ.ಮೆಲ್ವಿನ್, 'ಸುಂದರ ಆಗಸ, ಆಳೆತ್ತರ ಪುಟಿದೇಳುವ ಅಲೆಗಳು, ಪರ್ವತ ಸಾಲುಗಳ ಹಿನ್ನೆಲೆಗಳಿಂದ ಕೂಡಿದ ಇಲ್ಲಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಏಳು ಬಣ್ಣಗಳು ಒಗ್ಗೂಡಿ ಕಾಮನಬಿಲ್ಲಿನ ಚಿತ್ತಾರ ಮೂಡುತ್ತದೆ. ಪಶು ಪಕ್ಷಿಗಳು ಸ್ವಚ್ಛಂದವಾಗಿ ಬದುಕುವ ಪರಿಸರದಲ್ಲಿ ಮನುಷ್ಯರಾದ ನಮಗೂ ಪಾಠಗಳಿವೆ. ನಾವೂ ಪರಸ್ಪರ ಬೆರೆತು, ಸಾಮರಸ್ಯದಿಂದ ಬಾಳಿ ಈ ಜಗತ್ತನ್ನು ವರ್ಣಮಯಗೊಳಿಸಬೇಕು' ಎಂದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್‌ ಬೋಳಾರ್‌, ಡಿಎಚ್ಐಇ ಎಜಿಎಂ ಎಂ.ವಿ. ಸುರೇಶ್ ಭಾಗವಹಿಸಿದ್ದರು.

ನೃತ್ಯಸ್ಪರ್ಧೆಗೆ ಕೊರಿಯೊಗ್ರಾಫರ್ ಚಂದ್ರಶೇಖರ್, ರಾಹುಲ್ ಸಿಂಗ್, ಸೇಂಟ‌್ ಅಲೋಶಿಯಸ್‌ ಕಾಲೇಜಿನ ಹಿಂದಿ ವಿಭಾಗದ ಸಹಾಯಕ‌ ಪ್ರಾಧ್ಯಾಪಕಿ ಸಂಧ್ಯಾ ಹಾಗೂ ಸೇಂಟ್‌ ಅಲೋಶಿಯಸ್‌ ಪ್ರೌಢಶಾಲೆಯ ಕಲಾ ಶಿಕ್ಷಕ ಜಾನ್ ಚಂದ್ರನ್, ಚಿತ್ರಕಲಾವಿದ ಅನುದೀಪ್ ಕರ್ಕೆರಾ ತೀರ್ಪುಗಾರರಾಗಿ ಸಹಕರಿಸಿದರು.

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕರಾದ ಮಧುಸೂಧನ ಕಾಮತ್‌ ಹಾಗೂ ಜಾನೆಟ್ ರೊಸಾರಿಯೊ ಬಹುಮಾನ ವಿತರಿಸಿದರು. ಅನನ್ಯಾ ಮಧು ಕಾರ್ಯಕ್ರಮ ನಿರೂಪಿಸಿದರು.

ಬಹುಮಾನಿತರ ವಿವರ

ಚಿತ್ರಕಲಾ ಸ್ಪರ್ಧೆ ಕಿರಿಯರ ವಿಭಾಗ: ಪ್ರಥಮ: ಸಿದ್ಧಿಕ್ಷಾ ರಾವ್‌ (ಶಾರದಾ ವಿದ್ಯಾಲಯ ಮಂಗಳೂರು) ದ್ವಿತೀಯ: ಅಭಾನ್‌ (ಕೆನರಾ ಹಿರಿಯ ಪ್ರಾಥಮಿಕ ಶಾಲೆ ಉರ್ವ) ತೃತೀಯ: ಜಶ್‌ ಎಚ್‌.ಬಿ. (ವಿವೇಕಾನಂದ ಇಂಗ್ಲಿಷ್‌ ಮಾಧ್ಯಮ ಶಾಲೆ (ವಿಇಎಂಎಸ್‌) ಪುತ್ತೂರು) ಸಮಾಧಾನಕರ ಬಹುಮಾನ: ಸಿರಿ ಎಸ್‌ ಶೆಟ್ಟಿ (ಲಿಟ್ಲ್‌ರಾಕ್‌ ಇಂಡಿಯನ್ ಸ್ಕೂಲ್‌ ಬ್ರಹ್ಮಾವರ) ರಿಯೊ ಎಲ್‌.ಪಿಂಟೊ (ಡಾನ್‌ ಬಾಸ್ಕೊ ಇಂಗ್ಲಿಷ್ ಮೀಡಿಯಂ ಸ್ಕೂಲ್‌ ಶಿರ್ವ) ಆದ್ಯಾನ್ ಆರ್‌ (ವಿಇಎಂಎಸ್‌ ಪುತ್ತೂರು) ತನಿಷ್ಕಾ ಕೋಟ್ಯಾನ್‌ (ಶಾರದಾ ವಿದ್ಯಾಲಯ ಮಂಗಳೂರು) ಅಪೂರ್ವ (ಕುನಿಲ್‌ ಇಲ್ಮು ಅಕಾಡೆಮಿ ನಾಟೆಕಲ್‌) ಪ್ರಜ್ವಲಕೃಷ್ಣ (ವಿಇಎಂಎಸ್ ಪುತ್ತೂರು) ಪ್ರಥಮ್ ಕೋಟ್ಯಾನ್‌ ಶವಿನ್ ಡಿಸೋಜ (ಸೇಂಟ್‌ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆ ಮಂಗಳೂರು. ಹಿರಿಯರವಿಭಾಗ: ಪ್ರಥಮ: ನಿಲಿಕ್ಷಾ ಕೆ. (ವಿಇಎಂಎಸ್ ಪುತ್ತೂರು) ದ್ವಿತೀಯ: ಅದಿತ್ (ಕೆನರಾ ಹಿರಿಯ ಪ್ರಾಥಮಿಕ ಶಾಲೆ ಮಂಗಳೂರು) ತೃತೀಯ: ತೇಜಸ್‌ ಪಿ.ಎಂ. (ಕೆಪಿಎಸ್‌ ಕೆಯ್ಯೂರು) ಸಮಾಧಾನಕರ ಬಹುಮಾನ: ಸಮೀಕ್ಷಾ ಆಚಾರ್ಯ (ಸೇಂಟ್‌ ಅಲೋಶಿಯಸ್‌ ಶಾಲೆ) ಅವನಿ ಎಸ್‌.ವಿ. (ವಿಇಎಂಎಸ್ ಪುತ್ತೂರು) ಕಾರ್ತಿಕ್ ಶೆಟ್ಟಿಗಾರ್‌ (ಶ್ರೀರಾಮಕೃಷ್ಣ ಶಾಲೆ ಮಂಗಳೂರು) ನಿಹಾಲ್ ಗಟ್ಟಿ (ಕೆನರಾ ಪ್ರೌಢಶಾಲೆ ಉರ್ವ) ಅಜಿತ್ ಕಾಮತ್‌ (ಶ್ರೀವ್ಯಾಸಮಹರ್ಷಿ ವಿದ್ಯಾಪೀಠ) ಚಿಂತನ ಎಂ. (ವಿಇಎಂಎಸ್ ಪುತ್ತೂರು) ಸ್ತುತಿ ಶೆಟ್ಟಿ (ಲಿಟ್ಲ್‌ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ) ಮಹತಿ ದೇವಾಡಿಗ (ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ) –0– ನೃತ್ಯ ಸ್ಪರ್ಧೆ ಕಿರಿಯರ ವಿಭಾಗ: ಪ್ರಥಮ: ಎಸ್‌ಡಿಎಂ ಸಿಬಿಎಸ್‌ಇ ಸ್ಕೂಲ್‌ ಉಜಿರೆ ದ್ವಿತೀಯ: ಪ್ರೆಸಿಡೆನ್ಸಿ ಸ್ಕೂಲ್‌ ಮಂಗಳೂರು ತೃತೀಯ: ಶಾರದಾ ವಿದ್ಯಾಲಯ ಮಂಗಳೂರು ಹಿರಿಯರ ವಿಭಾಗ ಪ್ರಥಮ: ಎಸ್‌ಡಿಎಂ ಸಿಬಿಎಸ್‌ಇ ಸ್ಕೂಲ್‌ ಉಜಿರೆ  ದ್ವಿತೀಯ: ಡಾನ್‌ಬಾಸ್ಕೊ ಇಂಗ್ಲಿಷ್ ಮೀಡಿಯಂ ಸ್ಕೂಲ್‌ ಶಿರ್ವ ತೃತೀಯ: ಶಾರದಾ ವಿದ್ಯಾಲಯ ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.