ಮಂಗಳೂರು: ಇಲ್ಲಿಗೆ ಸಮೀಪದ ಬಜಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಳ್ಳಸಾಗಣೆಯಾಗುತ್ತಿದ್ದ ₹ 1.69 ಕೋಟಿ ಮೌಲ್ಯದ ಒಟ್ಟು 306.21 ಕ್ಯಾರೆಟ್ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಬೆಂಗಳೂರಿನ ಕಸ್ಟಮ್ಸ್ ಇಲಾಖೆ ಕಚೇರಿಯು ಟ್ವೀಟ್ ಮಾಡಿದೆ.
ದುಬೈಗೆ ಇದೇ 25ರಂದು ತೆರಳಬೇಕಿದ್ದ ಪ್ರಯಾಣಿಕ, ವಜ್ರಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದು, ಆತನನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.
ದುಬೈಗೆ ತೆರಳಲಿದ್ದ ಪ್ರಯಾಣಿಕನನ್ನು ಸಿಐಎಸ್ಎಫ್ ಸಿಬ್ಬಂದಿ ತಪಾಸಣೆ ನಡೆಸುವಾಗ ಆತನ ಪ್ಯಾಂಟ್ ಒಳಗೆ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ ಎರಡು ಪೊಟ್ಟಣಗಳಲ್ಲಿ ಹರಳುಗಳಿದ್ದುದು ಕಂಡುಬಂತು. ಆ ಎರಡು ಪೊಟ್ಟಣಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅದರೊಳಗೆ 13 ಸಣ್ಣ ಪೊಟ್ಟಣಗಳಲ್ಲಿ ವಜ್ರದ ಹರಳುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು ಪತ್ತೆಯಾಗಿತ್ತು. ಭದ್ರತಾ ಸಿಬ್ಬಂದಿ ಕಾಸರಗೋಡಿನ ಆ ಪ್ರಯಾಣಿಕನನ್ನು ವಶಕ್ಕೆ ಪಡೆದು, ಕಸ್ಟಮ್ಸ್ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಿದ್ದರು.
ಆರೋಪಿಯನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.