ಮಂಗಳೂರು: ಕಳುಹಿಸಿದ ಪಾರ್ಸೆಲ್‌ನಲ್ಲಿ ನಿಷೇಧಿತ ಮಾದಕ ಪದಾರ್ಥ ಎಂಡಿಎಂಎ ಇದೆ ಎಂದು ಆರೋಪಿಸಿ ₹ 39.30 ಲಕ್ಷ ವಂಚಿಸಿದ ಕುರಿತು ನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸೆ. 23ರಂದು ನನ್ನ ಮೊಬೈಲ್‌ಗೆ ಕರೆ ಬಂದಿತ್ತು. ಡಿಎಚ್‌ಎಲ್ ಕೋರಿಯರ್ ಸಂಸ್ಥೆಯ ಕಚೇರಿಯಿಂದ ಶ್ರೇಯಾ ಶರ್ಮಾ ಮಾತನಾಡುತ್ತಿದ್ದೇನೆ ಎಂದು ಕರೆ ಮಾಡಿದವರು ತಿಳಿಸಿದ್ದರು. ‘ನಿಮ್ಮ ಹೆಸರಿನಲ್ಲಿ ಚೀನಾಕ್ಕೆ ಕಳುಹಿಸಿದ್ದ ಪಾರ್ಸೆಲ್ ರವಾನೆಯಾಗದೇ ಕಚೇರಿಯಲ್ಲೇ ಉಳಿದಿದೆ. ಅದರಲ್ಲಿ 5 ಪಾಸ್ಪೋರ್ಟ್, ಒಂದು ಲ್ಯಾಪ್‌ಟಾಪ್, 400 ಗ್ರಾಂ ಎಂಡಿಎಂಎ ಹಾಗೂ ಕೆಲವು ಬ್ಯಾಂಕ್ ದಾಖಲೆಗಳು ಹಾಗೂ ಮೂರೂವರೆ ಕೆ.ಜಿ. ಬಟ್ಟೆ ಉಳಿದುಕೊಂಡಿದೆ’ ಎಂದು ಆ ವ್ಯಕ್ತಿ ತಿಳಿಸಿದ್ದರು. ಆ ಪಾರ್ಸೆಲ್ ನನ್ನದಲ್ಲ ಎಂದರೂ ಕೇಳಲಿಲ್ಲ. ‘ಕಸ್ಟಮ್ಸ್ ಅಧಿಕಾರಿಗಳು ನಿಮ್ಮನ್ನು ಬಂಧಿಸುತ್ತಾರೆ ಎಂದು ಹೇಳಿದ್ದರು’ ಎಂದು ದೂರು ನೀಡಿದ ವ್ಯಕ್ತಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.
‘24ರಂದು ಬೆಳಿಗ್ಗೆ 9ರಿಂದ ವಿಡಿಯೋ ಕಾಲ್ ಮೂಲಕ ವಿಚಾರಣೆ ಒಳಪಡಿಸುತ್ತೇವೆ ಎಂದು ಹೇಳಿ, ನಾನು ಯಾರ ಜೊತೆಗೂ ಮಾತನಾಡದಂತೆ (ಡಿಜಿಟಲ್ ಅರೆಸ್ಟ್) ನಿರ್ಬಂಧಿಸಿದರು. ನಿಷೇಧಿತ ಎಂಡಿಎಂಎ ಸಾಗಾಟ ಪ್ರಕರಣದಲ್ಲಿ ಬಂಧಿಸದೇ ಇರಬೇಕಾದರೆ ಹಣ ನೀಡುವಂತೆ ಬೇಡಿಕೆ ಇಟ್ಟರು. ನಾನು ಮೊದಲು ₹ 37 ಲಕ್ಷ ಪಾವತಿಸಿದೆ. ಮರುದಿನ ನನ್ನ ಸೊತ್ತುಗಳ ವಿಚಾರಣೆಯನ್ನು ಆಡಿಟರ್ ಒಬ್ಬರು ನಡೆಸುತ್ತಾರೆ ಎಂದು ನಂಬಿಸಿ ಅದಕ್ಕೂ ₹ 2.30 ಲಕ್ಷವನ್ನು ಪಡೆದರು. ವಿಚಾರಣೆ ಪೂರ್ಣಗೊಂಡ ಬಳಿಕ ಪಡೆದ ಅಷ್ಟೂ ಹಣವನ್ನು ಸೆ 28 ರಂದು ಮರಳಿಸುವುದಾಗಿ ಭರವಸೆ ನೀಡಿದ್ದರು. ನಂತರ ನಾನು ಕರೆ ಮಾಡಿದರೂ ಸ್ವೀಕರಿಸಿಲ್ಲ’ ಎಂದು ದೂರುದಾರ ಆರೋಪಿದ್ದಾರೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.