ADVERTISEMENT

ಜನಜಾಗೃತಿ ಚಿಲುಮೆಯ ಬೆಂಕಿ ಆರಬಾರದು: ದಿನೇಶ್‌ ಅಮೀನ್‌ಮಟ್ಟು

ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 14:17 IST
Last Updated 14 ನವೆಂಬರ್ 2021, 14:17 IST
ಮಂಗಳೂರಿನ ಶಾಂತಿಕಿರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ದಂಪತಿಯನ್ನು ನುಡಿ ಬಾಗಿನ ಮತ್ತು ಉಡಿ ಬಾಗಿನದ ಮೂಲಕ ಅಭಿನಂದಿಸಲಾಯಿತು. ಪತ್ರಕರ್ತ ದಿನೇಶ್‌ ಅಮೀನ್‌ಮಟ್ಟು, ಇಂದಿರಾ ಕೃಷ್ಣಪ್ಪ, ಡಾ.ಶಶಿಕಲಾ ಗುರುಪುರ, ಎಂ.ಎನ್‌.ಸುಮನಾ, ಎ.ಪಿ. ಮಾಲತಿ ಇದ್ದರು. –‌ಪ್ರಜಾವಾಣಿ ಚಿತ್ರ
ಮಂಗಳೂರಿನ ಶಾಂತಿಕಿರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ದಂಪತಿಯನ್ನು ನುಡಿ ಬಾಗಿನ ಮತ್ತು ಉಡಿ ಬಾಗಿನದ ಮೂಲಕ ಅಭಿನಂದಿಸಲಾಯಿತು. ಪತ್ರಕರ್ತ ದಿನೇಶ್‌ ಅಮೀನ್‌ಮಟ್ಟು, ಇಂದಿರಾ ಕೃಷ್ಣಪ್ಪ, ಡಾ.ಶಶಿಕಲಾ ಗುರುಪುರ, ಎಂ.ಎನ್‌.ಸುಮನಾ, ಎ.ಪಿ. ಮಾಲತಿ ಇದ್ದರು. –‌ಪ್ರಜಾವಾಣಿ ಚಿತ್ರ   

ಮಂಗಳೂರು: ‘ಸಮಸಮಾಜ ನಿರ್ಮಾಣದ ಕನಸು ನನಸಾಗಬೇಕಾದರೆ, ಎಲ್ಲಾ ಅನ್ಯಾಯ– ಅಸಮಾಧಾನದ ವಿರುದ್ಧದ ಹೋರಾಟ ನಡೆಯಬೇಕಾದರೆ ನಾವು ಜನಜಾಗೃತಿಯ ಚಿಲುಮೆಯಲ್ಲಿ ಬೆಂಕಿ ಆರಲು ಬಿಡಬಾರದು. ಅದನ್ನು ಆರಲು ಬಿಟ್ಟರೆ ನಮಗೆ ಭವಿಷ್ಯವಿಲ್ಲ’ಎಂದು ಪತ್ರಕರ್ತ ದಿನೇಶ್‌ ಅಮೀನ್‌ಮಟ್ಟು ಅಭಿಪ್ರಾಯಪಟ್ಟರು.

ಕರಾವಳಿ ಲೇಖಕಿಯರ– ವಾಚಕಿಯರ ಸಂಘ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಹಾಗೂ ಕವಿ ಪ್ರಕಾಶನ ಕವಲಕ್ಕಿ ಇದರ ಸಹಯೋಗದಲ್ಲಿ ನಗರದ ಶಾಂತಿಕಿರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.

‘ಸಬಿಹಾ ಅವರನ್ನು ಅಭಿನಂದಿಸುವ ನೆಪದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ನಮಗೆ ವೇದಿಕೆ ಸಿಕ್ಕಿದೆ. ಮುಂದಿನ ದಾರಿಯ ಬಗ್ಗೆ ಸ್ಪಷ್ಟತೆಯನ್ನು ಪಡೆಯಲು ಇಂದೊಂದು ಅವಕಾಶ. ಇಂದಿನ ಚಳವಳಿಯಲ್ಲಿ ದಣಿವು, ಆಯಾಸ, ಹತಾಶೆ, ಸಿನಿಕತನ ಕಾಡುತ್ತಿದೆ. ವರ್ತಮಾನದ ಬೆಳವಣಿಗೆ ನೋಡಿ ಆದಂತಹ ದಿಗ್ಭ್ರಮೆಯೂ ಕಾರಣ ಇರಬಹುದು ಅಥವಾ ಅಸಹಾಯಕತೆ ಇರಬಹುದು. ಅಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ನಮ್ಮ ಹಿರಿಯರು ನಮಗೆ ನಿರ್ಮಿಸಿಕೊಟ್ಟ ಪರಿಸರವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವಲ್ಲಿ ನಾವು ಸೋತಿದ್ದೇವೆ. ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘80ರ ದಶಕದಲ್ಲಿ ನಡೆದ ರೈತ, ದಲಿತ, ಭಾಷಾ ಚಳವಳಿಯಲ್ಲಿ ಕಾರಂತರು, ದೇವನೂರು, ಗಿರೀಶ್‌ ಕಾರ್ನಾಡ್‌ ಬಿಟ್ಟರೆ ಉಳಿದವರು ವಿಶ್ವವಿದ್ಯಾಲಯ, ಕಾಲೇಜುಗಳಿಂದ ಬಂದ ಹೋರಾಟಗಾರರು. ಇಂದು ವಿಶ್ವವಿದ್ಯಾಲಯಗಳ, ಕಾಲೇಜುಗಳ ಸಂಖ್ಯೆ ಜಾಸ್ತಿಯಾಗಿದೆ. ಪ್ರಾಧ್ಯಾಪಕರ ಸಂಖ್ಯೆಯೂ ಹಿಂದಿಗಿಂತ ಹೆಚ್ಚಿದೆ. ಆದರೆ, ಯುವ ಪ್ರಾಧ್ಯಾಪಕರು ಎನಿಸಿಕೊಂಡವರು ಎಷ್ಟು ಮಂದಿ ಬೀದಿಯಲ್ಲಿ ಹೋರಾಟ ಮಾಡಿದ್ದಾರೆ ಎಂಬುದನ್ನು ಯೋಚಿಸಬೇಕು. ಈ ದೃಷ್ಟಿಯಲ್ಲಿ ಪ್ರೊ.ಸಬಿಹಾ ಹೊಸ ಜನಾಂಗಕ್ಕೆ ಆದರ್ಶವಾಗಿದ್ದಾರೆ’ ಎಂದರು.

‘ಸಬಿಹಾ ಆ ಕಾಲದಲ್ಲಿಯೇ ಅಂತರಜಾತಿ ವಿವಾಹವಾಗಿದ್ದಾರೆ. ಇವತ್ತು ಮಂಗಳೂರಿನಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಹುಡುಗನೊಬ್ಬನ ಜತೆ ಮದುವೆಯಾಗುವುದು ಬಿಡಿ, ಐಸ್‌ಕ್ರೀಂ ಪಾರ್ಲರ್‌ಗೆ ಒಟ್ಟಿಗೆ ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇತಿಹಾಸದ ಚಕ್ರ ಈಗ ಮುಂದೆ ಹೋಗುತ್ತಿಲ್ಲ, ಹಿಂದೆ ಸಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರೊ.ಸಬಿಹಾ ಭೂಮಿಗೌಡ ಮಾತನಾಡಿ, ‘ದಲಿತ ಬಂಡಾಯ ಚಳವಳಿಯ ಕಾಲಘಟ್ಟ ನನಗೆ ಪ್ರೀತಿಯ ಬೆಚ್ಚಗಿನ ವಾತಾವರಣವನ್ನು ಕೊಟ್ಟಿತು. ಆ ಕಾಲ ನಾಶವಾಗಿದ್ದೇ ಇಂದಿನ ದುರಂತಗಳ ಮೂಲ. ಲಂಕೇಶ್, ತೇಜಸ್ವಿಯವರನ್ನು ನಾವು ಕಂಡವರಲ್ಲ. ಆದರೂ ಅವರ ನುಡಿ ಬರಹಗಳು ನಮ್ಮನ್ನು ಪ್ರಭಾವಿಸುತ್ತಿದ್ದವು. ಅಂಥವರ ಇರುವಿಕೆಯೇ ನಮಗೆ ಒಂದು ಬಗೆಯ ಭದ್ರತೆಯನ್ನು ಕೊಟ್ಟಿತ್ತು’ ಎಂದು ಹಳೆ ದಿನಗಳನ್ನು ಮೆಲುಕು ಹಾಕಿದರು.

‘ಒಡನಾಡಿ ಸಬಿಹಾ’ ಅಭಿನಂದನಾ ಗ್ರಂಥವನ್ನು ಪುಣೆ ಸಿಂಬಯಾಸಿಸ್‌ ಲಾ ಕಾಲೇಜಿನ ನಿರ್ದೇಶಕಿ ನಿರ್ದೇಶಕಿ ಡಾ.ಶಶಿಕಲಾ ಗುರುಪುರ ಲೋಕಾರ್ಪಣೆ ಮಾಡಿ ಮಾತನಾಡಿ, ‘ಪ್ರೊ.ಸಬಿಹಾ ಜನರ ಮನಸ್ಸನ್ನು ಗೆಲ್ಲುವ ಜತೆಗೆ, ಬದುಕನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಸಾಮಾಜಿಕ ನ್ಯಾಯ, ನೋವಿಗೆ ತುಡಿಯುವ ಅವರ ವ್ಯಕ್ತಿತ್ವ ಮಾದರಿಯಾದುದು’ ಎಂದರು.

ಬೆಂಗಳೂರು ಗಾಂಧಿಭವನದ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ವಕೀಲೆ ಎಂ.ಎನ್‌.ಸುಮನಾ, ಲೇಖಕಿ ಡಾ.ದು.ಸರಸ್ವತಿ ಇದ್ದರು. ಲೇಖಕಿ ಎ.ಪಿ. ಮಾಲತಿ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಪುರುಷೋತ್ತಮ ಬಿಳಿಮಲೆ ವರ್ಚುವಲ್‌ ಮಾಧ್ಯಮದಲ್ಲಿ ಮಾತನಾಡಿದರು. ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳೈರು ಸ್ವಾಗತಿಸಿದರು. ಕವಲಕ್ಕಿ ಕವಿ ಪ್ರಕಾಶನದ ಡಾ.ಎಚ್‌.ಎಸ್‌. ಅನುಪಮಾ ಪ್ರಾಸ್ತಾವಿಕ ಮಾತನಾಡಿದರು, ಸುಧಾರಾಣಿ ನಿರೂಪಿಸಿದರು. ಮಂಜುಳಾ ವಂದಿಸಿದರು.

‘ಅಭಿಮಾನ ಪಡುವಂತೆ ಕಾರ್ಯ’

‘ಹೊಸದಾಗಿ ಅಸ್ತಿತ್ವಕ್ಕೆ ಬಂದ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಹೋದ ಡಾ.ಸಬಿಹಾ ಭೂಮಿಗೌಡ ಅವರು ತಮ್ಮ ಮುನ್ನೋಟ, ಸಾಮರ್ಥ್ಯದಿಂದ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಅವಕಾಶಗಳಿಲ್ಲದೆ ಪ್ರಾಮಾಣಿಕರಾಗುವುದು ಬಹಳ ಸುಲಭ. ಎಲ್ಲ ಅವಕಾಶಗಳಿದ್ದೂ ಪ್ರಾಮಾಣಿಕವಾಗಿ ಹೊರ ಬರುವುದು ತುಂಬಾ ಕಷ್ಟ. ಸಬಿಹಾ ಅವರು ಯಾವುದೇ ಕಪ್ಪುಚುಕ್ಕೆಯಿಲ್ಲದೆ ನಾವೆಲ್ಲರೂ ಅಭಿಮಾನ ಪಡುವಂತೆ ಕಾರ್ಯ ನಿರ್ವಹಿಸಿದ್ದಾರೆ. ಅದೇ ಅವರಿಗೆ ಸಲ್ಲುವ ದೊಡ್ಡ ಅಭಿನಂದನೆ’ ಎಂದು ಅಮೀನ್‌ಮಟ್ಟು ಹೇಳಿದರು.

ತವರನ್ನು ಬಿಟ್ಟು ಬಂದೆ. ಆದರೆ, ಭೂಮಿಗೌಡರು ಸಿಕ್ಕಿದ ಮೇಲೆ ನನಗೆ ನೂರು ತವರು ಸಿಕ್ಕಂತಾಯಿತು. ರಕ್ತ ಸಂಬಂಧಕ್ಕೆ ಮೀರಿದ ಸತ್ಯ ನನಗೆ ದಕ್ಕಿದೆ.
ಪ್ರೊ.ಸಬಿಹಾ ಭೂಮಿಗೌಡ
ವಿಶ್ರಾಂತ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.