ADVERTISEMENT

ಎಂಎಸ್‌ಇಜೆಡ್‌ ಸಂತ್ರಸ್ತರಿಗೆ ಕಾಂಗ್ರೆಸ್‌ ಹೋರಾಟದಿಂದಾಗಿ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 6:45 IST
Last Updated 19 ಸೆಪ್ಟೆಂಬರ್ 2024, 6:45 IST

ಮಂಗಳೂರು: 'ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ (ಎಂಎಸ್‌ಇಜೆಡ್‌) ಜಾಗಬಿಟ್ಟುಕೊಟ್ಟ ಕುಟುಂಬಗಳ ಸದಸ್ಯರಿಗೆ ‘ದ ಗೈಲ್‌ ಮಂಗಳೂರು ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌’ (ಜಿಎಂಪಿಎಲ್‌) ಕಂಪನಿಯು ಉದ್ಯೋಗ ನೀಡಲು ಒಪ್ಪಿಕೊಂಡಿರುವುದು ಕಾಂಗ್ರೆಸ್‌ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಘಟಕದ ಹೋರಾಟಕ್ಕೆ ಸಂದ ಜಯ’ ಎಂದು ಘಟಕದ ಅಧ್ಯಕ್ಷ ಲಾರೆನ್ಸ್‌ ಡಿಸೋಜ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಎಂಎಸ್‌ಇಜೆಡ್‌ಗೆ ಜಾಗ ಬಿಟ್ಟುಕೊಟ್ಟ ಕುಟುಂಬಗಳಿಗೆ ಇಲ್ಲಿ ಸ್ಥಾಪನೆಯಾಗುವ ಕಂಪನಿಗಳಲ್ಲಿ ಉದ್ಯೋಗ ಒದಗಿಸುವ ಭರವಸೆ ನೀಡಲಾಗಿತ್ತು. ಈ ರೀತಿ ಕೆಲಸ ಪಡೆದ ಕೆಲವರನ್ನು ಬೇರೆ ಬೇರೆ ಕಾರಣ ನೀಡಿ ಕೆಲಸದಿಂದ ವಜಾ ಮಾಡಲಾಗಿತ್ತು’ ಎಂದರು.

‘ಪಕ್ಷದ ಕಾರ್ಮಿಕ ಘಟಕವು ಸಂತ್ರಸ್ತರ ಪರವಾಗಿ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಂಡು   ಸರ್ಕಾರದ ಮತ್ತು ಜಿಲ್ಲಾಡಳಿತದ ಗಮನ ಸೆಳೆದಿತ್ತು. ಈ ಹೋರಾಟದ ಫಲವಾಗಿ, ಇದೇ 30ರ ಒಳಗೆ ಸಂತ್ರಸ್ತರಿಗೆ ಕೆಲಸ ನೀಡಲು ಜಿಎಂಪಿಎಲ್‌ ಕಂಪನಿ ಒಪ್ಪಿದೆ. ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಭಾರಿ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರೂ ಸಹಕರಿಸಿದ್ದಾರೆ’ ಎಂದರು. 

ADVERTISEMENT

ಪಕ್ಷದ ಮುಖಂಡ  ಮನೋರಾಜ್‌, ‘ಜೆಬಿಎಫ್‌ ಪೆಟ್ರೋಕೆಮಿಕಲ್ಸ್‌ನಂತಹ ಕಂಪನಿಯ 80 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.  ಅವರಿಗೆ ನ್ಯಾಯ ಕೊಡಿಸಲು ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.