ADVERTISEMENT

Diwali 2024: ಹಿರಿಯರ ಕರೆಯುವ, ಬಲಿಯ ಬರಸೆಳೆವ ‘ಪರ್ಬ’

ಪ್ರವೀಣ್‌ ಕುಮಾರ್‌ ಪಿ.ವಿ
Published 31 ಅಕ್ಟೋಬರ್ 2024, 7:29 IST
Last Updated 31 ಅಕ್ಟೋಬರ್ 2024, 7:29 IST
ತುಳು ನಾಡಿನಲ್ಲಿ ದೀಪಾವಳಿ ಸಂದರ್ಭದಲ್ಲಿ ಬಲೀಯೇಂದ್ರನನ್ನು ಕರೆಯುವ ಸಂಪ್ರದಾಯವಿದೆ
ತುಳು ನಾಡಿನಲ್ಲಿ ದೀಪಾವಳಿ ಸಂದರ್ಭದಲ್ಲಿ ಬಲೀಯೇಂದ್ರನನ್ನು ಕರೆಯುವ ಸಂಪ್ರದಾಯವಿದೆ   

ತುಳುನಾಡಿನ ದೀಪಾವಳಿ (ದೀಪೊಳಿ) ಬೇರೆಡಗಳಿಗಿಂತ ವಿಭಿನ್ನ. ಇಲ್ಲಿನ ದೀಪಾವಳಿಗೂ ಕೃಷಿಗೂ ನಂಟಿದೆ. ಕುಟುಂಬದ ಹಿಂದಿನ ತಲೆಮಾರುಗಳನ್ನು, ತುಳುನಾಡನ್ನು ಆಳಿದ್ದ ಬಲಿಯೇಂದ್ರನನ್ನು ಬರಮಾಡಿಕೊಂಡು ಗೌರವ ಸಲ್ಲಿಸುವ ಪರಂಪರೆ ಇಲ್ಲಿನ ದೀಪಾವಳಿಯ ವೈಶಿಷ್ಟ್ಯ.

ಸತ್ತವರಿಗೆ ಎಡೆ: ದೀಪೊಳಿಯ‌ ಮೊದಲ ದಿನ ಬೇರೆಡೆ ಸ್ನಾನದ ಹಬ್ಬಕ್ಕೆ (ಮೀಪುನ ಪರ್ಬ) ಮಹತ್ವ. ಆದರೆ, ಇಲ್ಲಿ ಸ್ನಾನದ ಹಬ್ಬವನ್ನು ಜೊತೆಗೆ ಸತ್ತವರಿಗೆ ಬಡಿಸುವ (ಸೈತಿನಕಲೆನ ಪರ್ಬ) ಆಚರಣೆಗೂ ಮಹತ್ವವಿದೆ. ಕುಟುಂಬದಲ್ಲಿ ಗತಿಸಿದ ಹಿರಿಯರನ್ನು ಆರಾಧಿಸುವ ಪರಿಪಾಟ ತುಳುನಾಡಿನಲ್ಲಿ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ‘ಅಗೆಲ್‌’  (ಎಡೆ) ಬಡಿಸಿ ಅಗಲಿದ ಹಿರಿಯರನ್ನು ಕರೆಯುವ ಪರ್ವ ದಿನವಿದು. ಮನೆಯ ಸುತ್ತಲೂ ದೀಪಗಳನ್ನು ಇಡಲಾಗುತ್ತದೆ. ಮನೆಯಲ್ಲಿ ಎರಡು ಮಣೆಗಳನ್ನು ಇಟ್ಟು ಅದರಲ್ಲಿ ಬಾಳೆಯ ಕೊಡಿ ಎಲೆಯನ್ನು ಹರಡಿ, ಅದರಲ್ಲಿ ಎಡೆ ಬಡಿಸುವ ಪದ್ದತಿ ಇದೆ. ತುಳುವಿನಲ್ಲಿ ಇದನ್ನು ‘ಮಿಸೆಲ್ ದೀಪುನಿ’ ಎಂದು ಕರೆಯುವರು. ಕುಚ್ಚಲಕ್ಕಿಯ ಅನ್ನ, ಅವಲಕ್ಕಿ, ಅರಳು, ಮೀನಿನ ಸಾರು, ಕುಂಬಳಕಾಯಿ ಪದಾರ್ಥ ಹಾಗೂ ಸಿಹಿ ಮತ್ತು ಸಪ್ಪೆ‌ ಕಡುಬುಗಳನ್ನು ಬಡಿಸುತ್ತಾರೆ.  ಹಬ್ಬಕ್ಕಾಗಿ ತಂದ ಹೊಸ ಬಟ್ಟೆ ಮತ್ತು ಒಡವೆಗಳನ್ನು ಈ ಎಡೆಯ ಪಕ್ಕದಲ್ಲಿ ‌ಇಟ್ಟು ಅಗಲಿದ ಹಿರಿಯರಿಗೆ ಸಮರ್ಪಿಸಿ ನಂತರ‌ ತಾವು ತೊಟ್ಟುಕೊಳ್ಳುವುದು ಇಲ್ಲಿನ ಸಂಪ್ರದಾಯ. ಮನೆಯೊಳಗೆ  ಜೋಡು ದೀಪ ಬೆಳಗಿಸಿ, ಹೊರಗೆ ತುಳಸಿ ಕಟ್ಟೆಯಲ್ಲೂ ಜೋಡು ದೀಪ ಬೆಳಗುತ್ತಾರೆ. ಕೆಲವರು ಕುಟುಂಬಗಳಲ್ಲಿ ಅಗಲಿ ಹೋದ ಹಿರಿಯರ ಹೆಸರಿನಲ್ಲಿ ಅವಲಕ್ಕಿಯನ್ನು ಬಡಿಸುವ ಕ್ರಮವನ್ನೂ ಅನುಸರಿಸುತ್ತಾರೆ. ಇದಕ್ಕೆ ‘ಸೈತಿನಕ್ಲೆಗ್ ಬಜಿಲ್ ಪಾಡುನಿ’ ಎಂದು ಕರೆಯುತ್ತಾರೆ.

ಅಮಾವಾಸ್ಯೆವು ಮಾರನೇ ದಿನದ‌ ಈ ಕೊಡಿ ಪರ್ಬಕ್ಕೆ ಕೃಷಿ ಸಲಕರಣೆಗಳನ್ನು ಶುಚಿಗೊಳಿಸುತ್ತಾರೆ. ಈ ದಿನ ಮೀನು ಮತ್ತು ಮಾಂಸಗಳನ್ನೊಳಗೊಂಡ ಅಡುಗೆಯನ್ನೂ ಮಾಡುವ ಸಂಪ್ರದಾಯ ಇದೆ. ಈ ದಿನವೂ ರಾತ್ರಿ ಮೊದಲದಿನಂತೆ ಮನೆಯ ಸುತ್ತಲೂ ದೀಪವಿಡುವ ಪದ್ದತಿ ಇದೆ.

ADVERTISEMENT

ತುಳುವರಿಗೆ ದೀಪಾವಳಿಯೆಂದರೆ (ದೀಪೊಳಿ) ಅದು ಬಲಿಯೇಂದ್ರನ ಪರ್ಬ. ಮೂರನೇ ದಿನದ ಈ ಹಬ್ಬಕ್ಕೆ ಇಲ್ಲಿನ ವಿಶೇಷ. ಸತ್ತವರ ಹಬ್ಬದ ದಿನ ಹಿರಿಯರಿಗೆ ಸಮರ್ಪಿಸಿದ ಹೊಸ ಬಟ್ಟೆ‌ ಮತ್ತು ಒಡವೆಗಳನ್ನು ಈ ದಿನ ತೊಟ್ಟುಕೊಳ್ಳುತ್ತಾರೆ. ಮನೆಯ ಸುತ್ತ ರಾತ್ರಿ ದೀಪ ಬೆಳಗಿ ನಂತರ ಗದ್ದೆಗೆ ಪೂಜೆ ಸಲ್ಲಿಸಲಾಗುತ್ತದೆ. ಇದಕ್ಕಾಗಿ ಕೋಲಿಗೆ ಹತ್ತಿ ಬಟ್ಟೆ  ಸುತ್ತಿ, ಎಣ್ಣೆಯಲ್ಲಿ ಅದ್ದಿ ಕೋಲು ನಿನೆ (ಕೊಲ್ತಿರಿ) ತಯಾರಿಸುತ್ತಾರೆ. ಸೆಗಣಿ ಸವರಿದ ತಡಪೆ (ಗೆರಸೆ), ಕೊಡಿ ಬಾಳೆ ಎಲೆ, ಬುಟ್ಟಿ ಭತ್ತ, ಅಕ್ಕಿ, ಅವಲಕ್ಕಿ, ಅರಳು, ಕಡುಬು, ತೆಂಗಿನಕಾಯಿಯ ಚೂರು, ‌ಅಡಿಕೆ, ವೀಳ್ಯದೆಲೆ, ಕಾಡು ಹೂ ಕೇಪುಳ ಸೇರಿದಂತೆ ಹಲ ಬಗೆಯ ಹೂವುಗಳನ್ನು ಬುಟ್ಟಿಯಲ್ಲಿ ಹೊತ್ತು ಗದ್ದೆಗೆ ತೆರಳುತ್ತಾರೆ. ಗದ್ದೆಯ ನಾಲ್ಕು ಮೂಲೆಗಳಲ್ಲಿ 'ಕೋಲುನಿನೆ' ಹುದುಗಿಸಿ, ಅದರ ಪಕ್ಕದಲ್ಲಿ ತಡಪೆ ಇಟ್ಟು. ಅದರ ಮೇಲೆ  ಬಾಳೆ ಎಲೆಗಳನ್ನು ಹರಡುತ್ತಾರೆ. ತಂದ ಎಲ್ಲಾ ವಸ್ತುಗಳನ್ನು‌ ಬಡಿಸುತ್ತಾರೆ. ಸುತ್ತ  ದೀಪಗಳನ್ನಿಟ್ಟು  ಪ್ರದಕ್ಷಿಣೆ ಹಾಕಿ, ಎಲ್ಲರೂ ಸೇರಿ ಬಲಿಯೇಂದ್ರನನ್ನು'ಕೂ.. ಕೂ.. ಕೂ..' ಎಂದು ಕೂಗು ಹಾಕಿ ಕರೆಯುವ ಪರಿಪಾಠ ಇದೆ.  ಕೆಲವರು ತುಡರ ಕಂಬವನ್ನು (ದೀಪದ ಕಂಬ)  ನೆಟ್ಟು ಅದರಲ್ಲಿ ದೀಪಗಳಿಂದ ಬೆಳಗಿಸಿ ಬಲಿಯೇಂದ್ರನನ್ನು ಕರೆಯುವ  ಸಂಪ್ರದಾಯವೂ ಇದೆ.  

ಊರಿನವರೆಲ್ಲ ತಮ್ಮ ತಮ್ಮ ಗದ್ದೆಗಳಲ್ಲಿ ಪೂಜೆ ನಡೆಸಿ ಬಲಿಯೇಂದ್ರನನ್ನು ಕೂಗು ಹಾಕಿ ಕರೆಯುವ ಪರಿ ವರ್ಣಿಸಲಸದಳ. ಕಾರ್ಗತ್ತಲಲ್ಲಿ ಕೇವಲ ದೊಂದಿ ಬೆಳಕಿನಲ್ಲಿ ಬಳಿಗೆ ಕೂಗು ಹಾಕುವಾಗ ಗದ್ದೆಗಳಲ್ಲಿ ಮೈತಳೆಯುವ ಲೋಕ ವರ್ಣಿಸಲಸದಳ. ಗದ್ದೆಗಳಲ್ಲಿ ಅಲ್ಲಲ್ಲಿ ಬಳಗುವ ಕೋಲುನಿನೆಗಳು ಬಾನಂಗಳದಲ್ಲಿ ಬೆಳಗುವ ನಕ್ಷತ್ರಗಳಂತೆ ಕಂಗೊಳಿಸುತ್ತವೆ.

ತುಳುವರು ಬಲಿಯೇಂದ್ರನನ್ನು ಕರೆಯುವ ಸಂಪ್ರದಾಯವನ್ನು ಜಾನಪದ ತಜ್ಞ ಪ್ರೊ.ತುಕಾರಾಮ ಪೂಜಾರಿ ಅವರು ವಿವರಿಸುವುದು ಹೀಗೆ., ‘ತುಳುನಾಡಿನಲ್ಲಿ ಬಲಿಯೇಂದ್ರನನ್ನು ಕರೆಯುವ ಪರಿಪಾಟ ದ್ರಾವಿಡ ಮೂಲದ್ದು. ತುಳುವರ ಪಾಲಿಗೆ ಬಲಿಯೇಂದ್ರ ಅಚ್ಚುಮೆಚ್ಚಿನ ರಾಜ. ಪ್ರಜೆಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಆತನನ್ನು ಮೋಸದಿಂದ ಕೊಲ್ಲಲಾಯಿತು ಎಂದೇ ಇಲ್ಲಿನವರು ನಂಬಿಕೊಂಡು ಬಂದಿದ್ದಾರೆ. ಅಂತಹ ಬಲಿಯೇಂದ್ರ ದೀಪಾವಳಿ ಮೂರು ದಿನಗಳಲ್ಲಿ ಪ್ರಜೆಗಳನ್ನು ನೋಡಲು ತನ್ನ ರಾಜ್ಯಕ್ಕೆ ಮರಳುತ್ತಾರೆ ಎಂಬ ನಂಬಿಕೆ ಇಲ್ಲಿನವರದು. ಕರಾವಳಿಯಲ್ಲಿ ಕೃಷಿ ಕ್ಷೀಣಿಸಿರಬಹುದು. ಆದರೆ ದೀಪಾವಳಿ ಸಂದರ್ಭದಲ್ಲಿ ಬಲಿಯೇಂದ್ರದನ್ನು ಕರೆಯುವ ಸಂಪ್ರದಾಯವನ್ನೂ ಈಗಲೂ ಅಷ್ಟೇ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ’ ಎಂದರು.   

ಬಲಿಯೇಂದ್ರನನ್ನು ಕರೆದ ಬಳಿಕ  ಅಂಗಳದಲ್ಲಿರುವ ಸಿರಿತುಪ್ಪೆಗೆ, ಭತ್ತದ ಕಣಜಕ್ಕೆ , ಪಡಿಮಂಚ  (ಭತ್ತದ ಪೈರನ್ನು ಬಡಿದು ಹುಲ್ಲು ಭತ್ತ ಬೇರ್ಪಡಿಸುವ ಮಂಚ) ಮತ್ತಿತರ ಕೃಷಿ ಉಪಕರಣಗಳಿಗೆ ದೀಪಗಳನ್ನು ತೋರಿಸಿ  ಪೂಜೆ ಸಲ್ಲಿಸುವುದುಂಟು. 

‘ತುಳುವರ ದೀಪಾವಳಿ ಕೃಷಿಕರ ಬದುಕಿನಲ್ಲಿ ಆವರಿಸಿದ ಕತ್ತಲನ್ನು ಕಳೆದು ಸಮೃದ್ಧಿ ಮೂಡಿಸುವ ಸಂಕೇತವೂ ಹೌದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಏಣಿಲ್‌ ಬೆಳೆಯ (ಮಳೆಗಾಲದ ಬೆಳೆ) ಭತ್ತ ಮನೆ ಸೇರಿರುತ್ತದೆ. ಕಷ್ಟ ಕಾಲದಲ್ಲಿ ಬೇರೆಯವರಿಂದ ಸಾಲ ಪಡೆದ ಭತ್ತವನ್ನು ಸಂದಾಯ ಮಾಡಿ ಆಗಿರುತ್ತದೆ.  ಇನ್ನೊಂದೆಡೆ ಸುಗ್ಗಿ ಬೆಳೆಗೆ (ಎರಡನೇ ಬೆಳೆ) ತಯಾರಿ ಆರಂಭವಾಗಿರುತ್ತದೆ. ಸುಗ್ಗಿ ಹೆಚ್ಚು ಕಷ್ಟವಿಲ್ಲದ ಬೆಳೆ. ಇದಕ್ಕೆ ಅತಿವೃಷ್ಟಿಯ ಆತಂಕವಿಲ್ಲ. ಹಾಗಾಗಿ ಇಲ್ಲಿನ ಇಡೀ ಕೃಷಿ ಸಮುದಾಯ ತುಸು ನೆಮ್ಮದಿಯಿಂದ ಇರುವ ಕಾಲದಲ್ಲಿ ದಿಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ’ ಎಂದು ತುಕಾರಾಮ ಪೂಜಾರಿ ವಿವರಿಸಿದರು.

ಗೋ ಪೂಜೆ 

ದೀಪೊಳಿಯ ಕೊನೆಯ ದಿನದ ಕೈಕಂಜಿಲೆನ ಪೂಜೆಯನ್ನು (ಗೋ ಪೂಜೆ ) ಇಲ್ಲೂ ಆಚರಿಸಲಾಗುತ್ತದೆ. ದನದ ಕೊಟ್ಟಿಗೆಯನ್ನು ಶುಚಿಗೊಳಿಸಿ, ಮನೆಯ ಜಾನುವಾರುಗಳ ಮೈ ತೊಳೆದು, ಅವುಗಳ ಮೈಮೇಲೆ ಶೇಡಿ ಹಾಗೂ ಕಾವೆಯಿಂದ ಚಿತ್ತಾರ ಬರೆದು, ಕೊಂಬುಗಳನ್ನು ಹೂವುಗಳಿಂದ ಅಲಂಕರಿಸಿ, ಕೊರಳಿಗೆ ಹೂಮಾಲೆ ಹಾಕಿ ಅಲಂಕರಿಸಲಾಗುತ್ತದೆ. ನಂತರ ಅವುಗಳಿಗೆ ದೀಪದ ಆರತಿ ಬೆಳಗುತ್ತಾರೆ. ನಂತರ ದೀಪಾವಳಿಯ  ಕಡುಬು ತಿನ್ನಿಸುತ್ತಾರೆ. ಇಲ್ಲಿ ಕೇವಲ ದನಗಳಿಗೆ ಮಾತ್ರವಲ್ಲ, ಎತ್ತು,‌ ಕೋಣ, ಎಮ್ಮೆಗಳಿಗೂ ಪೂಜೆ ಸಲ್ಲಿಸಲಾಗುತ್ತದೆ. ಕುಟುಂಬದವರೆಲ್ಲ ಸಡಗರದಿಂದ ಈ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.