ADVERTISEMENT

ದಕ್ಷಿಣ ಕನ್ನಡ 38 ಚಿಣ್ಣರಲ್ಲಿ ತೀವ್ರ ಅಪೌಷ್ಟಿಕತೆ

ಅಪೌಷ್ಟಿಕ ಮಕ್ಕಳಿಗೆ ಪೋಷಣ್ ಅಭಿಯಾನದಡಿ ವಿಶೇಷ ಆರೈಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 16:43 IST
Last Updated 13 ನವೆಂಬರ್ 2024, 16:43 IST

ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೋಷಣೆ ಅಭಿಯಾನದಡಿ ಮಕ್ಕಳ ಆರೈಕೆಗೆ ನಿರಂತರ ಕಾಳಜಿಯ ವಹಿಸುವುದರ ಹೊರತಾಗಿಯೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆರು ತಿಂಗಳಿನಿಂದ ಆರು ವರ್ಷಗಳ ಒಳಗಿನ ಒಟ್ಟು 38 ಮಕ್ಕಳು ತೀವ್ರ ತರಹದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 

‘ಜಿಲ್ಲೆಯಲ್ಲಿ ಆರು ತಿಂಗಳಿನಿಂದ ಆರು ವರ್ಷದ ಒಳಗಿನ 98 ಸಾವಿರ ಮಕ್ಕಳಿದ್ದು, ಅವರಲ್ಲಿ ತೀವ್ರ ತರಹದ ಅಪೌಷ್ಟಿಕತೆ ಹೊಂದಿರುವ 38 ಮಕ್ಕಳನ್ನು ಗುರುತಿಸಲಾಗಿದೆ’ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಪೋಷಣಾ ಅಭಿಯಾನ ಯೋಜನೆಯ ‘ಪೋಷಣ್ ಟ್ರಾಕರ್’ ಮೂಲಕ ನಿರಂತರವಾಗಿ ಮಕ್ಕಳ ಬೆಳವಣಿಗೆಯನ್ನು ಪರಿಶೀಲಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ಮೂಲಕ ನಿಗದಿತ ಅವಧಿಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಕಂಡು ಬಂದ‌ರೆ, ಪೌಷ್ಟಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸುತ್ತೇವೆ. ಅಲ್ಲಿ ಹೆಚ್ಚುವರಿ ಪೂರಕ ಪೌಷ್ಟಿಕ ಆಹಾರ, ಹಾಲು ಮತ್ತು ಮೊಟ್ಟೆಗಳನ್ನು ನೀಡುವುದರ ಮೂಲಕ ಹಾಗೂ ಪೋಷಕರಿಗೆ ಸೂಕ್ತ ತಿಳುವಳಿಕೆ ನೀಡುತ್ತಿದ್ದೇವೆ. ಪೌಷ್ಟಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಾಗುವ ಮಕ್ಕಳ ಬೆಳವಣಿಗೆಯಲ್ಲಿ ಸುಧಾರಣೆ ಕಂಡು ಬಂದಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು

ADVERTISEMENT

‘ರಾಜ್ಯ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳ ಪ್ರಮಾಣ ಕಡಿಮೆ ಇದೆ. ಇಂತಹ ಮಕ್ಕಳನ್ನು ಪೋಷಣ್‌ ಅಭಿಯಾನದಡಿ ಗುರುತಿಸಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಹಾಗಾಗಿ ಐದಾರು ವರ್ಷಗಳಿಂದ ಇಂತಹ ಮಕ್ಕಳ ಪ್ರಮಾಣ ಕಡಿಮೆಯಾಗುತ್ತಿದೆ, ವಾಂತಿ ಬೇಧಿ  ಅಥವಾ ಬೇರೆ ಕಾಯಿಲೆಗೆ ಒಳಗಾದ ಮಕ್ಕಳಲ್ಲೂ ತಾತ್ಕಾಲಿಕವಾಗಿ ತೀವ್ರ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತದೆ. ನಮ್ಮ ಜಿಲ್ಲೆಯಲ್ಲಿ ಈ ವರ್ಷ ಯಾವ ತಿಂಗಳೂ ಇಂತಹ ಮಕ್ಕಳ ಸಂಖ್ಯೆ 42 ದಾಟಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಕುಮಾರ್‌ ಎಂ. ತಿಳಿಸಿದರು.

‘ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ದೇಹತೂಕ, ಎತ್ತರವನ್ನು ನಿಯಮಿತವಾಗಿ ಪರೀಕ್ಷಿಸುವ ಮೂಲಕ ಅವರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆಯೇ ಎಂಬ ಬಗ್ಗೆ ನಿಗಾ ಇಡುತ್ತಾರೆ. ಮಕ್ಕಳ ಬೆಳವಣಿಗೆಯ ಬಗ್ಗೆ ನಿಗಾ ವಹಿಸುವ ಸಾಧನಗಳನ್ನು ಅಂಗನವಾಡಿಗಳಿಗೆ ಒದಗಿಸಲಾಗಿದೆ’ ಎಂದು ಅವರು ತಿಳಿಸಿದರು. 

‌‘ಮಕ್ಕಳು ತೀವ್ರ ಅಪೌಷ್ಟಿಕತೆಯ ಹೊಂದಿರುವುದು ಕಂಡು ಬಂದರೆ,  ಪೌಷ್ಟಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ  ಆರೈಕೆ ಮಾಡಬೇಕಾಗುತ್ತದೆ. ಆದರೆ ನಗರದಲ್ಲಿರುವ ಈ ಕೇಂದ್ರದಲ್ಲಿ ಮಕ್ಕಳ ಜೊತೆಗೆ ತಾಯಿ ಅಥವಾ ಯಾರಾದರೂ ಒಬ್ಬ ಪೋಷಕರೂ ಕೆಲ ದಿನಗಳ ಕಾಲ ಉಳಿದುಕೊಳ್ಳಬೇಕಾಗುತ್ತದೆ. ಈ ಕಾರಣಕ್ಕೆ ಕೆಲವು ಪೋಷಕರು ಮಕ್ಕಳನ್ನು ಪೌಷ್ಟಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲು ಹಿಂದೇಟು ಹಾಕುತ್ತಾರೆ’ ಎಂದು ಅಂಗನವಾಡಿ ಕಾರ್ಯಕರ್ತೆಯರೊಬ್ಬರು ತಿಳಿಸಿದರು.

‘ತೀವ್ರ ತರಹದ ಅಪೌಷ್ಟಿಕತೆಯಿಂದ ಬಳಲುತಿರುವ ಮಕ್ಕಳನ್ನು ಪೌಷ್ಟಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲು ಪೋಷಕರು ಒಪ್ಪದಿದ್ದರೆ, ಅಂತಹ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕವೇ ವಾರದಲ್ಲಿ ಐದು ದಿನ ಮೊಟ್ಟೆ ಹಾಗೂ  ಹೆಚ್ಚುವರಿ ಹಾಲಿನ ಪುಡಿಯನ್ನು ಪೂರೈಸಲು ಕ್ರಮ ವಹಿಸಲಾಗುತ್ತಿದೆ. ಮೊಟ್ಟೆಯನ್ನು ಸೇವಿಸದ ಮಕ್ಕಳಿಗೆ ಹೆಸರು ಕಾಳು ಒದಗಿಸಲಾಗುತ್ತದೆ’ ಎಂದು ಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.