ADVERTISEMENT

ಬಸ್ ಸಾರಿಗೆ ಚೆನ್ನಾಗಿದ್ದರೆ ಆರ್ಥಿಕತೆ ಸದೃಢ: ಶ್ರೀಧರ ಮಲ್ಲಾಡ್‌

ದ.ಕ. ಬಸ್‌ ಮಾಲೀಕರ ಸಂಘದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಶ್ರೀಧರ್ ಮಲ್ಲಾಡ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 4:44 IST
Last Updated 27 ಫೆಬ್ರುವರಿ 2024, 4:44 IST
ಕಾರ್ಯಕ್ರಮದಲ್ಲಿ ಗಣೇಶ್‌ ಕಾರ್ಣಿಕ್ ಅವರು ವಿದ್ಯಾರ್ಥಿನಿಯೊಬ್ಬರಿಗೆ ರಿಯಾಯಿತಿ ದರ ಪ್ರಯಾಣದ ಗುರುತಿನ ಚೀಟಿಯನ್ನು ಹಸ್ತಾಂತರಿಸಿದರು. ನಾಗೇಶ ಎಂ.ವಿ, ಅಜೀಜ್‌ ಪರ್ತಿಪ್ಪಾಡಿ, ಶ್ರೀಧರ್ ಮಲ್ಲಾಡ್‌ ಮತ್ತಿತರರು ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಗಣೇಶ್‌ ಕಾರ್ಣಿಕ್ ಅವರು ವಿದ್ಯಾರ್ಥಿನಿಯೊಬ್ಬರಿಗೆ ರಿಯಾಯಿತಿ ದರ ಪ್ರಯಾಣದ ಗುರುತಿನ ಚೀಟಿಯನ್ನು ಹಸ್ತಾಂತರಿಸಿದರು. ನಾಗೇಶ ಎಂ.ವಿ, ಅಜೀಜ್‌ ಪರ್ತಿಪ್ಪಾಡಿ, ಶ್ರೀಧರ್ ಮಲ್ಲಾಡ್‌ ಮತ್ತಿತರರು ಭಾಗವಹಿಸಿದ್ದರು   

ಮಂಗಳೂರು: ದೇಶದ ಆರ್ಥಿಕತೆಗೆ ಸಾರಿಗೆ ವ್ಯವಸ್ಥೆ ಬೆನ್ನೆಲುಬು. ಬಸ್ ಸಾರಿಗೆ ಚೆನ್ನಾಗಿದ್ದರೆ ಆರ್ಥಿಕತೆಯೂ ಸದೃಢವಾಗಿರುತ್ತದೆ ಎಂದು ಪ್ರಾದೇಶಿಕ ಸಾರಿಗೆ ಉಪಾಯುಕ್ತ ಶ್ರೀಧರ ಮಲ್ಲಾಡ್‌ ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು ಹಂಪನಕಟ್ಟೆಯ ಮಿಲಾಗ್ರೀಸ್‌ ಕಟ್ಟಡದ ಮೊದಲನೇ ಮಹಡಿಯಲ್ಲಿ ಆರಂಭಿಸಿರುವ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಸೋಮವಾರ ಮಾತನಾಡಿದರು.

‘ನಮ್ಮ ಜಿಲ್ಲೆಯಲ್ಲಿ ನಗರ ಸಾರಿಗೆ, ಗ್ರಾಮೀಣ ಸಾರಿಗೆ, ಕೈಗಾರಿಕೆ ಮತ್ತಿತರ ಸೇವೆಗಳು ಸೇರಿ ಒಟ್ಟು 1,098 ಬಸ್‌ಗಳಿಗೆ ಪರವಾನಗಿ ನೀಡಲಾಗಿದೆ. ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದವರು ಈಗಲೂ ಬಸ್‌ ಸಾರಿಗೆ ಅವಲಂಬಿಸಿದ್ದಾರೆ. ವಿದ್ಯಾರ್ಥಿಗಳ ಜೀವನದಲ್ಲೂ ಬಸ್‌ ಸಾರಿಗೆ ಪ್ರಮುಖವಾದುದು.  ಅವರಿಗೆ ರಿಯಾಯಿತಿ ಪಾಸ್‌ ನೀಡುವುದಲ್ಲದೇ, ಸರಿಯಾದ ಸಮಯಕ್ಕೆ ಅವರನ್ನು ತಲುಪಿಸುವುದು ಬಸ್‌ ಸಾರಿಗೆ’ ಎಂದರು.

ADVERTISEMENT

‘ಬಸ್‌ ಸೇವೆಗೆ ಆರಂಭಿಕ ಹೂಡಿಕೆ, ವಾಹನದ ನಿರ್ವಹಣೆ, ಸಿಬ್ಬಂದಿ ಸಂಬಳ ಎಲ್ಲವನ್ನೂ ಮಾಲೀಕರು ಸುಸ್ಥಿರವಾಗಿ ನಿಭಾಯಿಸಬೇಕು. ಜೊತೆಗೆ ತೆರಿಗೆ ಕಟ್ಟಬೇಕು. ಎಲ್ಲ ಸಂಕಷ್ಟಗಳ ನಡುವೆಯೂ ಈ ಜಿಲ್ಲೆಯಲ್ಲಿ ಖಾಸಗಿ ಬಸ್‌ ಸಾರಿಗೆಯನ್ನು ಚೆನ್ನಾಗಿ ನಿಭಾಯಿಸಲಾಗುತ್ತಿದೆ’ ಎಂದರು. 

ಬಸ್‌ ಚಾಲಕ ಹಾಗೂ ನಿರ್ವಾಹಕರಾಗಲೂ ಯುವಕರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಈಗಲೂ ಕೆಲವೊಂದು ಹಳ್ಳಿಗಳಲ್ಲಿ ಚಾಲಕ ನಿರ್ವಾಹಕರಿಗೆ ಸಾರ್ವಜನಿಕರಿಂದ ಸಿಗುವಷ್ಟು ಗೌರವ ಯಾವ ಅಧಿಕಾರಿಗೂ ಸಿಗದು. ಸಮಯ ಪರಿಪಾಲನೆ ಸಲುವಾಗಿ ಹಾಗೂ ಸಂಚಾರ ದಟ್ಟಣೆ ಮಾರ್ಗದಲ್ಲಿ ವ್ಯತ್ಯಾಸ ಆದಾಗ ಅವರ ಮೇಲೆ ಒತ್ತಡ ಉಂಟಾಗುವುದು ಸಹಜ. ಕೆಲವೊಮ್ಮೆ ಚಾಲಕರ ತಪ್ಪಿಗೆ ಮಾಲೀಕರು ದಂಡ ತೆರಬೇಕಾಗುತ್ತದೆ’ ಎಂದರು.

ಬಿಜೆಪಿ ಮುಖಂಡ ಗಣೇಶ್‌ ಕಾರ್ಣಿಕ್‌, ‘ರಾಜ್ಯದಲ್ಲಿ ಅತ್ಯುತ್ತಮ ಖಾಸಗಿ ಬಸ್‌ ಸೇವೆ ಇರುವುದು ನಮ್ಮ ಜಿಲ್ಲೆಯಲ್ಲಿ. ಇಲ್ಲಿನ ಹಳ್ಳಿ ಹಳ್ಳಿಗೂ ಸಾರಿಗೆ ಸಂಪರ್ಕ ಸಾಧ್ಯವಾಗಿದ್ದರೆ ಅದು ಖಾಸಗಿ ಬಸ್‌ಗಳಿಂದ. ಉತ್ತರ ಕರ್ನಾಟಕದಲ್ಲಿ ಸರಿಯಾದ ಬಸ್‌ ಸೌಕರ್ಯ ಇಲ್ಲದ ಕಾರಣಕ್ಕೆ ಇವತ್ತಿಗೂ ಜನರು ಟೆಂಪೊ ಟ್ರಾವೆಲರ್‌ಗಳನ್ನು ಅವಲಂಬಿಸಿದ್ದಾರೆ’ ಎಂದರು.

‘ಎಲ್ಲ ಮಾರ್ಗಗಳಿಗೆ ಸರ್ಕಾರಿ ಬಸ್‌ ಹಾಕುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿಯಿತು. ಬಸ್‌ ಓಡಿಸುವುದು ಸರ್ಕಾರದ ಕೆಲಸವಲ್ಲ. ಸರ್ಕಾರ ಎಲ್ಲೆಲ್ಲಿ ಕೈ ಹಾಕಿದೆ ಅಲ್ಲೆಲ್ಲ ಸಮಸ್ಯೆ ಸಿಲುಕಿದೆ. ಎಲ್ಲೆಲ್ಲಿ ಖಾಸಗಿ ಬಸ್‌ ವ್ಯವಸ್ಥೆ ಚೆನ್ನಾಗಿ ನಿರ್ವಹಣೆ ಆಗುತ್ತಿದೆಯೋ, ಅಲ್ಲಿ ಕೆಎಸ್‌ಆರ್‌ಟಿಸಿ ಸ್ಪರ್ಧೆಗೆ ಮುಂದಾಗುವುದು ಬೇಡ. ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದ ಕಡೆ ಬಸ್‌ ಓಡಿಸಲಿ‘ ಎಂದರು. 

‘ಶಕ್ತಿ ಯೊಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡುವುದಕ್ಕೆ ತಕರಾರು ಇಲ್ಲ.  ಇದರಿಂದ ಖಾಸಗಿ ಬಸ್‌ ಬಸ್‌ ಮೇಲೆ ಅವಲಂಬಿತರಾಗಿರುವವರ ಬದುಕಿನ ಮೇಳಾಗಿರುವ ಪರಿಣಾಮವನ್ನೂ ಪರಿಗಣಿಸಬೇಕು. ಬಸ್‌ ಮಾಲೀಕರ ಸಂಘವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಷ್ಟು ಕುಟುಂಬಗಳು ಖಾಸಗಿ ಬಸ್‌ಗಳಿಂದ ಜೀವನೋಪಾಯ ಕಂಡುಕೊಂಡಿವೆ.  ಎಷ್ಟು ಆರ್ಥಿಕ ವ್ಯವಹಾರ ನಡೆಯುತ್ತಿದೆ. ಎಷ್ಟು ಹಣ ಸರ್ಕಾರದ  ಬೊಕ್ಕಸಕ್ಕೆ ಹೋಗುತ್ತಿದೆ ಎಂಬುದನ್ನು ಅಧ್ಯಯನ ನಡೆಸಬೇಕು.ಕರಾವಳಿ ಕರ್ನಾಟಕದ ಆರ್ಥಿಕತೆಗೆ ಖಾಸಗಿ ಬಸ್‌ಗಳ ಕೊಡುಗೆ ಎಷ್ಟಿದೆ ಎಂಬ ಅಂಕಿ ಅಂಶ ಕಲೆಹಾಕಿ ಸರ್ಕಾರಕ್ಕೆ ತಿಳಿಸಬೇಕು’ ಎಂದು ಅವರು ಸಲಹೆ ನೀಡಿದರು. 

ವಕೀಲ ಎಂ.ವಿ.‌ನಾಗೇಶ್, ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ, ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರು, ಜತೆ ಕಾರ್ಯದರ್ಶಿ ರಾಜೇಶ್ ತಲಪಾಡಿ  ಭಾಗವಹಿಸಿದ್ದರು. ವಿದ್ಯಾರ್ಥಿಗಳ ಪ್ರಯಾಣಿಕ್ಕೆ ಶೇ 60ರಷ್ಟು ರಿಯಾಯಿತಿ ನೀಡಲು ಗುರುತಿನ ಚೀಟಿ (ಬಸ್‌ಪಾಸ್‌) ಬಿಡುಗಡೆ ಮಾಡಲಾಯಿತು.

Highlights - ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಪ್ರಯಾಣಕ್ಕೆ ಗುರುತಿನ ಚೀಟಿ ಬಿಡುಗಡೆ ಖಾಸಗಿ ಬಸ್‌ ಸೇವೆಗೆ ಗಣೇಶ್‌ ಕಾರ್ಣಿಕ್‌ ಮೆಚ್ಚುಗೆ

‘ಬಸ್‌ ಚಲಾಯಿಸುವಾಗ ಬಾಗಿಲು ಹಾಕಿ’

ಬಸ್‌ಗಳನ್ನು ಚಲಾಯಿಸುವಾಗ ಕಡ್ಡಾಯವಾಗಿ ಬಾಗಿಲುಗಳನ್ನು ಹಾಕಲೇಬೇಕು. ಈ ಬಗ್ಗೆ ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬರುತ್ತಿವೆ. ಇದೊಂದನ್ನು ಹೊರತುಪಡಿಸಿದರೆ ಬೇರೆ ವಿಚಾರಗಳ ಬಗ್ಗೆ ದೂರುಗಳು ಕಡಿಮೆ. ನಗರ ಸಾರಿಗೆ ಬಸ್‌ಗಳಿಗೆ ಈ ನಿಯಮದಿಂದ ವಿನಾಯಿತಿ ಇದೆ’ ಎಂದು ಶ್ರೀಧರ್ ಮಲ್ಲಾಡ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.